ಬಸ್ ನಿಲ್ದಾಣ ಜಾಗದ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ- ಎಂಟು ಮಂದಿಗೆ ಗಾಯ, ಓರ್ವನ ಸ್ಥಿತಿ ಗಂಭೀರ
ಹಾವೇರಿ: ಬಸ್ ನಿಲ್ದಾಣ ಜಾಗದ ವಿಚಾರವಾಗಿ ಎರಡು ಗುಂಪುಗಳ ನಡುವೆ ನಡೆದ ಜಗಳ ಒಬ್ಬನಿಗೆ ಇರಿದು ಗಾಯಗೊಳಿಸುವ ಮೂಲಕ ಅಂತ್ಯಕಂಡಿರುವ ಘಟನೆ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಕಮಲಾನಗರ ತಾಂಡಾದಲ್ಲಿ ಜರುಗಿದೆ.
ಈ ಜಗಳದಲ್ಲಿ ಚಾಕುವಿನಿಂದ ಹಲ್ಲೆ ಮಾಡಿದ್ದು, ಚಾಕು ಇರಿತಕ್ಕೆ ಒಳಗಾದ ಯುವಕನೊಬ್ಬನ ಸ್ಥಿತಿ ಗಂಭೀರವಾಗಿದೆ. ಅಲ್ಲದೆ ಈ ವೇಳೆ ಇನ್ನೂ 8 ಜನರಿಗೆ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು ಕೆಲವರಿಗೆ ಹೊರರೋಗಿಯಾಗಿ ಚಿಕಿತ್ಸೆ ನೀಡಿ ಕಳುಹಿಸಲಾಗಿದ್ದು ಇನ್ನು ಕೆಲವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಚಾಕು, ಕಲ್ಲು ಹಾಗೂ ಬಡಿಗೆಯನ್ನು ಹಿಡಿದುಕೊಂಡು 2 ಗುಂಪುಗಳು ಪರಸ್ಪರ ಹೊಡೆದಾಡಿಕೊಂಡಿವೆ. ಜಗಳದ ವೇಳೆ ಸುರೇಶ್ ಲಮಾಣಿ ಚಾಕುವಿನಿಂದ ಇರಿದು ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದ್ದು, ಈತನೇ ಹಲವರಿಗೆ ಚಾಕು ಇರಿದಿದ್ದಾನೆ ಎಂದು ದೂರಲಾಗಿದೆ. ಅಲ್ಲದೆ ಕಲ್ಲಿನಿಂದ ಹೊಡೆದಾಡಿಕೊಂಡಿರುವ ದೃಶ್ಯಗಳು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಯುವಕನೊಬ್ಬನ ಎದೆಗೆ ಚಾಕು ಇರಿಯಲಾಗಿದ್ದು, ಆತನ ಸ್ಥಿತಿ ಗಂಭೀರವಾಗಿದೆ. ಹಲ್ಲೆಯಲ್ಲಿ ಆತನ ಕೈ ಬೆರಳುಗಳು ತುಂಡಾಗಿವೆ. ತಲೆಗೆ ಗಂಭೀರವಾದ ಗಾಯಗಳಾಗಿವೆ. ಘಟನೆಯಲ್ಲಿ ಇನ್ನೂ 8 ಜನರಿಗೆ ಗಾಯಗಳಾಗಿದ್ದು, ಅವರೆಲ್ಲರನ್ನೂ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಮಲಾನಗರ ತಾಂಡಾದ ಬಸ್ ನಿಲ್ದಾಣ ಜಾಗದ ಬಗ್ಗೆ ಈ 2 ಗುಂಪುಗಳ ನಡುವೆ ಜಗಳ ನಡೆದಿದೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.