ಭಾರತಕ್ಕೆ ಹೀನಾಯ ಸೋಲು: 10 ವಿಕೆಟ್‍ಗಳ ಭರ್ಜರಿ ಜಯದೊಂದಿಗೆ 3ನೇ ಬಾರಿ ಫೈನಲ್ ಪ್ರವೇಶಿಸಿದ ಇಂಗ್ಲೆಂಡ್
ಆಡಿಲೇಡ್: ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಓಪನರ್‌ಗಳ ಸಿಡಿಲಬ್ಬರದ ಬ್ಯಾಟಿಂಗ್‍ಗೆ ಭಾರತ ತತ್ತರಿಸಿ ಹೋಗುವ ಮೂಲಕ ಹೀನಾಯ ಸೋಲುಂಡಿದೆ. ಇನ್ನು 10 ವಿಕೆಟ್‍ಗಳ ಭರ್ಜರಿ ಜಯದೊಂದಿಗೆ 3ನೇ ಬಾರಿ ಇಂಗ್ಲೆಂಡ್ ಫೈನಲ್ ಪ್ರವೇಶಿಸಿದೆ.
ಭಾರತ ನೀಡಿದ 169 ರನ್‍ಗಳ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್‍ಗೆ ಮುಂದಾಗಿ ವಿಕೆಟ್ ನಷ್ಟವಿಲ್ಲದೇ 16 ಓವರ್‌ಗಲ್ಲಿ 170 ರನ್ ಸಿಡಿಸಿ 10 ವಿಕೆಟ್‌ಗಳ ಭರ್ಜರಿ ಜಯದೊಂದಿಗೆ ಫೈನಲ್‍ಗೆ ಲಗ್ಗೆ ಇಟ್ಟಿದೆ.
ಈ ಜಯದೊಂದಿಗೆ ನ.13 ರಂದು ಫೈನಲ್‍ನಲ್ಲಿ ಪಾಕಿಸ್ತಾನವನ್ನು ಇಂಗ್ಲೆಂಡ್ ಎದುರಿಸಲಿದೆ. ಇತ್ತ ಈ ಸೋಲಿನೊಂದಿಗೆ ಭಾರತ ತಂಡ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.
ಇಂಗ್ಲೆಂಡ್ ಆರಂಭಿಕರಾದ ಜೋಸ್ ಬಟ್ಲರ್ ಮತ್ತು ಅಲೆಕ್ಸ್ ಹೇಲ್ಸ್ ಭಾರತ ಬೌಲರ್‌ಗಳನ್ನು ಮೊದಲ ಓವರ್‌ನಿಂದಲೇ ದಂಡಿಸಲು ಆರಂಭಿಸಿದರು. ಅವಕಾಶ ಸಿಕ್ಕಾಗಲೆಲ್ಲಾ ಬೌಂಡರಿ, ಸಿಕ್ಸ್‌ಗಳ ಮೂಲಕ ಮನಮೋಹಕವಾಗಿ ಆಡಿದ ಈ ಜೋಡಿ ಅಜೇಯ 170 ರನ್ (96 ಎಸೆತ) ಜೊತೆಯಾಟದ ಮೂಲಕ ಅಬ್ಬರಿಸಿ ಬೊಬ್ಬಿರಿಯಿತು.
ಬಟ್ಲರ್ 80 ರನ್ (49 ಎಸೆತ, 9 ಬೌಂಡರಿ, 3 ಸಿಕ್ಸ್) ಮತ್ತು ಹೇಲ್ಸ್ 86 ರನ್ (47 ಎಸೆತ, 4 ಬೌಂಡರಿ, 7 ಸಿಕ್ಸ್) ಸಿಡಿಸಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಪರಿಣಾಮ ಇನ್ನೂ 24 ಎಸೆತ ಬಾಕಿ ಇರುವಂತೆ ಇಂಗ್ಲೆಂಡ್ ಜಯ ಗಳಿಸಿ ಸಂಭ್ರಮಿಸಿತು.
ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಭಾರತವನ್ನು ಬ್ಯಾಟಿಂಗ್‍ಗೆ ಆಹ್ವಾನಿಸಿದರು. ಇತ್ತ ಭಾರತ ಮಹತ್ವದ ಪಂದ್ಯದಲ್ಲಿ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಕೆ.ಎಲ್ ರಾಹುಲ್ 5 ರನ್ (5 ಎಸೆತ, 1 ಬೌಂಡರಿ) ಸಿಡಿಸಿ ಸೈಲೆಂಟ್ ಆಗಿ ಪೆವಿಲಿಯನ್‍ಗೆ ಹೆಜ್ಜೆ ಹಾಕಿದರು
ಆ ಬಳಿಕ ರೋಹಿತ್ ಜೊತೆ ಸೇರಿಕೊಂಡ ವಿರಾಟ್ ಕೊಹ್ಲಿ ಮತ್ತೊಮ್ಮೆ ಭಾರತಕ್ಕೆ ಆಸರೆಯಾದರು. ರೋಹಿತ್ ಶರ್ಮಾ ನಿಧಾನವಾಗಿ ಬ್ಯಾಟ್‍ಬೀಸುತ್ತಿದ್ದರೆ, ಕೊಹ್ಲಿ ಇತ್ತ ಸೂಪರ್ ಡೂಪರ್ ಹೊಡೆತಗಳ ಮೂಲಕ ರನ್ ಏರಿಸುವ ಹೊಣೆ ಹೊತ್ತರು. ಈ ಜೋಡಿ ಎರಡನೇ ವಿಕೆಟ್‍ಗೆ 47 ರನ್ (43 ಎಸೆತ) ಒಟ್ಟುಗೂಡಿಸಿ ಬೇರ್ಪಟ್ಟಿತು. ರೋಹಿತ್ ಆಟ 27 ರನ್ (28 ಎಸೆತ, 4 ಬೌಂಡರಿಗೆ) ಅಂತ್ಯವಾಯಿತು.
ಬಳಿಕ ಬಂದ ಸೂರ್ಯಕುಮಾರ್ ಯಾದವ್ ಒಂದು ಫೋರ್, ಒಂದು ಸಿಕ್ಸ್ ಸಿಡಿಸಿ ಅಬ್ಬರಿಸುವ ಸೂಚನೆ ನೀಡಿದರೂ ಅವರನ್ನು 14 ರನ್ (10 ಎಸೆತ, 1 ಬೌಂಡರಿ, 1 ಸಿಕ್ಸ್) ಕಟ್ಟಿ ಹಾಕುವಲ್ಲಿ ರಶೀದ್ ಯಶಸ್ವಿಯಾದರು.
ಕೊಹ್ಲಿ, ಪಾಂಡ್ಯ ಪಾಟ್ನರ್‌ಶಿಪ್: ಒಂದು ಕಡೆ ವಿಕೆಟ್ ಬೀಳುತ್ತಿದ್ದರೆ, ಇನ್ನೊಂದೆಡೆ ರನ್ ವೇಗ ಹೆಚ್ಚಿಸಲಾಗದೆ ಭಾರತ ಅಲ್ಪ ಮೊತ್ತದತ್ತ ಮುನ್ನುಗ್ಗುತ್ತಿತ್ತು. ಈ ವೇಳೆ ಅಸಲಿ ಅಟ ಆರಂಭಿಸಿದ ಈ ಜೋಡಿ ಇಂಗ್ಲೆಂಡ್ ಬೌಲರ್‌ಗಳನ್ನು ದಂಡಿಸಲು ಆರಂಭಿಸಿದರು.
ಬೌಂಡರಿ, ಸಿಕ್ಸರ್‌ಗಳೊಂದಿಗೆ ಕೊಹ್ಲಿ, ಪಾಂಡ್ಯ ಅಬ್ಬರಿಸಿದ ಪರಿಣಾಮ ಭಾರತ ಪೈಪೋಟಿಯ ಮೊತ್ತ ಪೇರಿಸುವ ಭರವಸೆ ಮೂಡಿತು. ಇತ್ತ ಕೊಹ್ಲಿ 50 ರನ್ (40 ಎಸೆತ, 4 ಬೌಂಡರಿ, 1 ಸಿಕ್ಸ್) ಸಿಡಿಸಿ ಕ್ಯಾಚ್ ನೀಡಿ ಔಟ್ ಆದರು.
ಈ ಮೊದಲು ಪಾಂಡ್ಯ ಜೊತೆ 4 ವಿಕೆಟ್‍ಗೆ 61 ರನ್ (40 ಎಸೆತ) ಜೊತೆಯಾಟವಾಡಿ ತಂಡಕ್ಕೆ ಆಧಾರವಾದರು. ಆದರೆ ಇತ್ತ ಪಾಂಡ್ಯ ಮಾತ್ರ ತಮ್ಮ ಅಬ್ಬರದಾಟ ಮುಂದುವರಿಸಿದರು. ಸಿಕ್ಸರ್‌ಗಳ ಮಳೆ ಸುರಿಸಿದ ಪಾಂಡ್ಯ ಬ್ಯಾಟ್ ಬೌಲರ್‌ಗಳಿಗೆ ಅಷ್ಟದಿಕ್ಕುಗಳನ್ನು ಪರಿಚಯಿಸಿದಂತಿತ್ತು.
ಕೊನೆಯ 5 ಓವರ್‌ಗಳಲ್ಲಿ 68 ರನ್: ಪಾಂಡ್ಯ ಹೋರಾಟದ ಫಲವಾಗಿ 10 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 62 ರನ್ ಪೇರಿಸಿದ್ದ ಭಾರತ ಮುಂದಿನ ಹತ್ತು ಓವರ್‌ಗಳಲ್ಲಿ 106 ಚಚ್ಚಿ ತಂಡದ ಮೊತ್ತ 160ರ ಗಡಿ ದಾಟುವಂತೆ ನೊಡಿಕೊಂಡರು.
ಅಲ್ಲದೇ ಕೊನೆಯ 5 ಓವರ್‌ಗಳಲ್ಲಿ 68 ರನ್ ಹರಿದುಬಂತು. ಪಾಂಡ್ಯ 63 ರನ್ (33 ಎಸೆತ, 4 ಬೌಂಡರಿ, 5 ಸಿಕ್ಸ್) ಚಚ್ಚಿ ಕೊನೆಯ ಎಸೆತದಲ್ಲಿ ಹಿಟ್‍ವಿಕೆಟ್ ಆಗಿ ಔಟ್ ಆದರು. ಇದರೊಂದಿಗೆ ಭಾರತ 20 ಓವರ್‌ಗಳ ಅಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 168 ರನ್ ಪೇರಿಸಿತು. ಇಂಗ್ಲೆಂಡ್ ಪರ ಜೋರ್ಡನ್ 3 ವಿಕೆಟ್ ಪಡೆದು ಮಿಂಚಿದರು.
ರನ್ ಏರಿದ್ದು ಹೇಗೆ:
50 ರನ್ 47 ಎಸೆತ
100 ರನ್ 90 ಎಸೆತ
150 ರನ್ 113 ಎಸೆತ
168 ರನ್ 120 ಎಸೆತ