NEWSನಮ್ಮರಾಜ್ಯರಾಜಕೀಯ

ಕೆಪಿಸಿಸಿ ವಕ್ತಾರರಾಗಿದ್ದ ಜಾಫೆರ್‌ ಮೊಹಿಯುದ್ದೀನ್‌ ಆಮ್‌ ಆದ್ಮಿ ಪಾರ್ಟಿಗೆ ಸೇರ್ಪಡೆ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಸಾಮಾಜಿಕ ಹೋರಾಟಗಾರ ಹಾಗೂ ಕೆಪಿಸಿಸಿ ಮಾಜಿ ವಕ್ತಾರ ಜಾಫೆರ್‌ ಮೊಹಿಯುದ್ದೀನ್‌ ಅವರು ಆಮ್‌ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿಯವರು ಸಮ್ಮುಖದಲ್ಲಿ ಎಎಪಿಗೆ ಸೇರ್ಪಡೆಯಾದರು.

ಆಮ್‌ ಆದ್ಮಿ ಪಾರ್ಟಿಯ ರಾಜ್ಯ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಪೃಥ್ವಿ ರೆಡ್ಡಿ, “ರಾಯಚೂರು ಮೂಲದವರಾದ ಜಾಫೆರ್‌ ಮೊಹಿಯುದ್ದೀನ್‌ರವರು ಎಂಜಿನಿಯರಿಂಗ್‌ ಶಿಕ್ಷಣ ಪಡೆಯುತ್ತಿದ್ದಾಗಲೇ ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯದ ವಿರುದ್ಧ ಧ್ವನಿ ಎತ್ತುತ್ತಿದ್ದರು. ಇವರು ಭಾರತೀಯ ವಾಯುಪಡೆಯಲ್ಲಿ ಡೆಪ್ಯುಟಿ ಆರ್ಕಿಟೆಕ್ಟ್‌ ಆಗಿ ಸುಮಾರು ಆರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.

1997ರಲ್ಲಿ ರಾಯಚೂರಿನಲ್ಲಿ ಜಾಫೆರ್‌ ಅಸೋಸಿಯೇಟ್ಸ್‌ ಎಂಬ ಸ್ವಂತ ಸಂಸ್ಥೆ ಕಟ್ಟಿದ್ದಾರೆ. ಕತ್ಪುಟ್ಲಿಯಾನ್‌ ಥಿಯೇಟರ್‌ ಗ್ರೂಪ್‌ ಎಂಬ ಎನ್‌ಜಿಒ ಅಧ್ಯಕ್ಷರಾಗಿ ರಂಗಭೂಮಿ, ಕಲೆ, ಸಂಗೀತವನ್ನು ಪ್ರೋತ್ಸಾಹಿಸುತ್ತಿದ್ದಾರೆ. ಫುವಾಕ್ ಎಂಬ ಎನ್‌ಜಿಒ ಅಧ್ಯಕ್ಷರಾಗಿ ಉರ್ದು ಲೇಖಕರು ಹಾಗೂ ಕಲಾವಿದರ ಸಾಂವಿಧಾನಿಕ ಹಕ್ಕುಗಳ ರಕ್ಷಣೆಗಾಗಿ ಹೋರಾಡುತ್ತಿದ್ದಾರೆ” ಎಂದು ಪರಿಚಯಿಸಿದರು.

“ಜಾಫೆರ್‌ರವರು ಸಾಮಾಜಿಕ, ರಾಜಕೀಯ, ಆರ್ಥಿಕ ವಿಷಯಗಳ ಬಗ್ಗೆ ದೃಶ್ಯಮಾಧ್ಯಮಗಳ ಹಲವು ಚರ್ಚಗಳಲ್ಲಿ ಭಾಗವಹಿಸಿದ ಅನುಭವ ಹೊಂದಿದ್ದಾರೆ. ಮಾನವ ಹಕ್ಕುಗಳು ಹಾಗೂ ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆ ಕಂಡುಬಂದಾಗಲೆಲ್ಲ ಪ್ರತಿಭಟಿಸುವ ಮನೋಭಾವ ಇವರದ್ದು.

2009ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. 2021ರಲ್ಲಿ ಆಮ್‌ ಆದ್ಮಿ ಪಾರ್ಟಿ ಸೇರಿ 2014ರ ಚುನಾವಣೆಯಲ್ಲಿ ಪಕ್ಷದ ಪರ ಪ್ರಚಾರದಲ್ಲಿ ಭಾಗಿಯಾಗಿದ್ದರು.

ಕಾರಣಾಂತರದಿಂದ 2015ರ ನಂತರ ಆಮ್‌ ಆದ್ಮಿ ಪಾರ್ಟಿಯಿಂದ ದೂರವಾಗಿ, 2016ರಲ್ಲಿ ಕಾಂಗ್ರೆಸ್‌ ಸೇರಿದ್ದರು. 2019ರ ಚುನಾವಣೆ ಸಂದರ್ಭದಲ್ಲಿ ಕೆಪಿಸಿಸಿ ವಕ್ತಾರರಾಗಿ ಕಾರ್ಯನಿರ್ವಹಿಸಿದ್ದರು. ಈಗ ಇವರು ಮತ್ತೆ ಎಎಪಿಗೆ ವಾಪಸಾಗುತ್ತಿರುವುದು ನಮಗೆಲ್ಲ ಸಂತಸ ಉಂಟುಮಾಡಿದೆ” ಎಂದು ಪೃಥ್ವಿ ರೆಡ್ಡಿ ಹೇಳಿದರು.

ಜಾಫೆರ್‌ ಮೊಹಿಯುದ್ದೀನ್‌ ಮಾತನಾಡಿ, “ಶಿಕ್ಷಣ, ಆರೋಗ್ಯ ಹಾಗೂ ಮೂಲಸೌಕರ್ಯ ಕ್ಷೇತ್ರದ ಸುಧಾರಣೆಯಲ್ಲಿ ಆಮ್‌ ಆದ್ಮಿ ಪಾರ್ಟಿಗಿರುವ ಬದ್ಧತೆ ಪ್ರಶಂಸನೀಯ. ಪ್ರಸ್ತುತ ರಾಜಕೀಯದಲ್ಲಿ ಭ್ರಷ್ಟಾಚಾರದ ವಿರುದ್ಧ ಕಠಿಣ ನಿಲುವನ್ನು ಆಮ್‌ ಆದ್ಮಿ ಪಾರ್ಟಿ ಮಾತ್ರ ತೆಗೆದುಕೊಳ್ಳಬಹುದು.

ದೆಹಲಿಯಲ್ಲಿ ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ಎಎಪಿ ಸರ್ಕಾರವು ಹೊಸಹೊಸ ಜನಪರ ಯೋಜನೆಗಳನ್ನು ನಿರಂತರವಾಗಿ ಜಾರಿಗೆ ತರುತ್ತಿದೆ. ಗುಣಮಟ್ಟ ಆಡಳಿತ ಹೇಗಿರುತ್ತದೆ ಎಂಬುದನ್ನು ದೇಶಕ್ಕೆ ತೋರಿಸಿಕೊಡುತ್ತಿದೆ. ಭ್ರಷ್ಟ ಬಿಜೆಪಿಯನ್ನು ಮೂಲೆಗುಂಪು ಮಾಡುವ ಸಾಮರ್ಥ್ಯ ಎಎಪಿಗಿದೆ. ಮುಂದಿನ ಎಲ್ಲ ಚುನಾವಣೆಗಳಲ್ಲಿ ಎಎಪಿಯನ್ನು ಅಧಿಕಾರಕ್ಕೆ ತರಲು ನಾವೆಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕಿದೆ” ಎಂದು ಹೇಳಿದರು.

ಆಮ್‌ ಆದ್ಮಿ ಪಾರ್ಟಿಯ ಬೆಂಗಳೂರು ನಗರಾಧ್ಯಕ್ಷ ಮೋಹನ್‌ ದಾಸರಿ, ರಾಜ್ಯ ಕಾರ್ಯದರ್ಶಿ ಬಿ.ಟಿ.ನಾಗಣ್ಣ ಹಾಗೂ ಇತರೆ ಮುಖಂಡರು, ಕಾರ್ಯಕರ್ತರು ಸಮಾರಂಭದಲ್ಲಿ ಭಾಗವಹಿಸಿದ್ದರು.

Leave a Reply

error: Content is protected !!
LATEST
ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ... BBMP: ಮಳೆಯಿಂದ ಸಮಸ್ಯೆ ಆಗಿದ್ದರೆ ಕೂಡಲೇ 1533ಕ್ಕೆ ಕರೆ ಮಾಡಿ ದೂರು ನೀಡಿ