ಬೆಂಗಳೂರು: ಸರ್ಕಾರ ಸಾರಿಗೆ ನೌಕರರ ಹೋರಾಟಕ್ಕೆ ಮಣಿದು ಅವರ ಬೇಡಿಕೆಯನ್ನು ಈಡೇರಿಸುವುದಕ್ಕೆ ಮುಂದಾಗಿದೆ ಎಂದು ಬಲ್ಲ ಮೂಲಗಳು ಸ್ಪಷ್ಟಪಡಿಸಿವೆ.
ಇದೇ ಮಾರ್ಚ್ ಒಂದರಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಬೆಂಗಳೂರಿನ ಫ್ರೀಡಂಪಾರ್ಕ್ನಲ್ಲಿ ಹಮ್ಮಿಕೊಂಡು ಮಾರ್ಚ್ 4ರವರೆಗೂ ಮಾಡಿದರು. ಆದರೆ, ಈ ವೇಳೆ ಸರ್ಕಾರ ಸ್ಪಂದಿಸಲಿಲ್ಲ. ಹೀಗಾಗಿ ಇದೇ ಮಾ.24ರಿಂದ ಬೇಡಿಕೆ ಈಡೇರುವವರೆಗೂ ಮುಷ್ಕರ ಮಾಡುವುದಾಗಿ ಘೋಷಣೆ ಮಾಡಿ ಧರಣಿ ವಾಪಸ್ ಪಡೆದರು.
ಈ ನಡುವೆ ಸರ್ಕಾರ ನೌಕರರ ಬೇಡಿಕೆಯಾದ ಸರ್ಕಾರಿ ನೌಕರರಿಗೆ ಸರಿ ಸಮಾನ ವೇತನ ನೀಡುವುದಕ್ಕೆ ಬಹುತೇಕ ಒಪ್ಪಿಗೆ ಸೂಚಿಸಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ,
ಆದರೆ, ಸಾರಿಗೆ ನೌಕರರಿಗೆ ಸರ್ಕಾರಿ ನೌಕರರ ಸರಿ ಸಮಾನ ವೇತನ ಮತ್ತು ವೇತನ ಆಯೋಗ ಮಾದರಿಯಡಿ ವೇತನ ನೀಡಿದರೆ, ಮುಂದಿನ ದಿನಗಳಲ್ಲಿ ಯಾವುದೇ ಹೋರಾಟಕ್ಕೆ ಇಳಿಯುವುದಿಲ್ಲ.
ಹೀಗಾಗಿ ಸಾರಿಗೆ ನೌಕರರ ಹೋರಾಟವನ್ನು ಜೀವಂತವಾಗಿ ಇಟ್ಟುಕೊಂಡರೆ ನಾಲ್ಕುವರ್ಷಕ್ಕೊಮ್ಮೆ ಸಂಘಟನೆಗಳು ಇವೆ ಎಂಬುದನ್ನು ತೋರಿಸಬಹುದು ಎಂಬ ಲೆಕ್ಕಚಾರದಲ್ಲಿ ಕೆಲ ಸಂಘಟನೆಗಳ ಮುಖಂಡರು ಸರಿ ಸಮಾನ ವೇತನದ ಬದಲಿಗೆ ಅಗ್ರಿಮೆಂಟ್ ಮೂಲಕವೇ ವೇತನ ಹೆಚ್ಚಳ ಮಾಡಿ ಎಂದು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ ಎಂದು ಕೂಡ ತಿಳಿದು ಬಂದಿದೆ.
ಇನ್ನು ಸರ್ಕಾರ ಶೇ.95ರಷ್ಟು ನೌಕರರ ಬೇಡಿಕೆಯಾದ ಸರಿ ಸಮಾನ ವೇತನವನ್ನು ವೇತನ ಆಯೋಗ ಮಾದರಿಯಲ್ಲಿ ಕೊಡುವುದಕ್ಕೆ ಒಪ್ಪಿಕೊಳ್ಳುತ್ತಿದೆಯಾದರೂ ಈ ಹಿಂದಿನಿಂದ ಹೋರಾಟ ಮಾಡಿಕೊಂಡು ಬಂದಿರುವ ಇತರ ಸಂಘಟನೆಗಳನ್ನು ದೂರವಿಡುವುದು ಸರಿಯಿಲ್ಲ ಎಂಬ ನಿಟ್ಟಿನಲ್ಲಿ ಅವರ ಬೇಡಿಕೆಯನ್ನು ಪುರಸ್ಕರಿಸಬೇಕೋ ಬೇಡವೋ ಎಂದು ಸ್ಪಷ್ಟ ನಿರ್ಧಾರಕ್ಕೆ ಇನ್ನೂ ಬರಲಾಗಿಲ್ಲ.
ಇದರಿಂದ ಇನ್ನು ಕೇವಲ 18ದಿನಗಳು ಮಾತ್ರ ನೌಕರರು ಕೊಟ್ಟಿರುವ ಅಂತಿಮ ಗಡುವು ಬಾಕಿಯಿದ್ದು, ಅಷ್ಟರೊಳಗೇ ಒಂದು ಸ್ಪಷ್ಟ ತೀರ್ಮಾನ ತೆಗೆದುಕೊಳ್ಳಬೇಕು ಎಂದು ವಿವಿಧ ರೀತಿಯಲ್ಲಿ ನೌಕರರ ವೇತನಕ್ಕೆ ಸಂಬಂಧಪಟ್ಟಂತೆ ಯೋಚನೆ ಮಾಡುತ್ತಿದೆ ಎಂದು ತಿಳಿದು ಬಂದಿದೆ.
ಒಟ್ಟಾರೆ, ಸಾರಿಗೆ ನೌಕರರಿಗೆ ಒಂದು ಶಾಶ್ವತ ಪರಿಹಾರ ಕೊಡಲೇಬೇಕು ಎಂಬ ನಿಟ್ಟಿನಲ್ಲಿ ಕಳೆದ ಎರಡು ವರ್ಷದಿಂದಲೂ ಸರ್ಕಾರ ವೇತನ ಆಯೋಗ ಮಾದರಿಯಲ್ಲಿ ವೇತನ ನೀಡುವುದಕ್ಕೆ ಮುಂದಾಗಿದೆ ಎಂದು ಇಂದಿನ ಸಾರಿಗೆ ಸಚಿವರು ಹಾಗೂ ನಿಕಟಪೂರ್ವ ಸಾರಿಗೆ ಸಚಿವರು ಹಲವಾರು ಸಭೆ ಸಮಾರಂಭಗಳಲ್ಲು ಅದನ್ನು ಸ್ಪಷ್ಟವಾಗಿ ಹೇಳಿದ್ದಾರೆ.
ಇದಲ್ಲದೆ ಮುಖ್ಯಮಂತ್ರಿಗಳು ಕೂಡ ಸಾರಿಗೆ ನೌಕರರ ಸಮಸ್ಯೆ ಏನೆಂದು ನಮಗೆ ಗೊತ್ತಿದೆ ಸೂಕ್ತ ಸಮಯಕ್ಕೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಮೂಲಕ ಒಂದು ಶಾಶ್ವತ ಪರಿಹಾರ ನೀಡುತ್ತೇವೆ ಎಂದು ಸಾರಿಗೆ ಸಮಾರಂಭಗಳಲ್ಲಿ ಮತ್ತು ನೌಕರರು ಮನವಿ ಸಲ್ಲಿಸುವ ವೇಳೆಯು ಭರವಸೆ ನೀಡಿದ್ದಾರೆ.
ಹೀಗಾಗಿ ಸರ್ಕಾರ ತಾನೇ ಕೊಟ್ಟಿರುವ ಭರವಸೆಯನ್ನು ಹುಸಿ ಮಾಡುವುದು ಬೇಡ. ಈಗ ನಾವು ಅದನ್ನು ಕೈ ಬಿಟ್ಟರೆ ನಾವು ಕೊಟ್ಟ ಮಾತನ್ನು ತಪ್ಪಿದಂತಾಗುತ್ತದೆ. ಆದ್ದರಿಂದ ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಮೂಲಕ ಸಾರಿಗೆ ನೌಕರರ ಮತ್ತು ಅವರ ಕುಟುಂಬದವರಿಗೆ ಸರ್ಕಾರ ಕೊಟ್ಟು ಮಾತು ಉಳಿಸಿಕೊಂಡಿದೆ ಎಂಬ ಸಂದೇಶವನ್ನು ರವಾನೆ ಮಾಡೋಣ ಎಂದು ನಿರ್ಧರಿಸಿರುವುದಾಗಿ ಬಲ್ಲ ಮೂಲಗಳು ತಿಳಿಸಿವೆ.
ಒಟ್ಟಾರೆ ಸರ್ಕಾರ ಸಾರಿಗೆ ನೌಕರರಿಗೆ ಕೊಟ್ಟ ಮಾತನ್ನು ಚುನಾವಣೆ ಸಮೀಪದಲ್ಲಿ ಉಳಿಸಿಕೊಳ್ಳುವುದಕ್ಕೆ ಮುಂದಾಗಿದೆ ಎಂಬುದಂತು ಸ್ಪಷ್ಟವಾಗಿದೆ.