CRIMENEWSದೇಶ-ವಿದೇಶ

ಉತ್ತರಕಾಶಿ-ಹೆಲಿಕಾಪ್ಟರ್ ಪತನ: ನಾಲ್ವರು ಪ್ರವಾಸಿಗರು ಮೃತ, ಇಬ್ಬರಿಗೆ ಗಾಯ

ವಿಜಯಪಥ ಸಮಗ್ರ ಸುದ್ದಿ

ಉತ್ತರಕಾಶಿ: ಹೆಲಿಕಾಪ್ಟರ್ ಪತನಗೊಂಡು ನಾಲ್ವರು ಪ್ರವಾಸಿಗರು ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ಇಂದು ಮೇ 8ರ ಗುರುವಾರ ಬೆಳಗ್ಗೆ ಉತ್ತರಾಖಂಡದ ಉತ್ತರಕಾಶಿಯಲ್ಲಿ ನಡೆದಿದೆ. ಹೆಲಿಕಾಪ್ಟರ್‌ನಲ್ಲಿ ಐದರಿಂದ ಆರು ಮಂದಿ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಗಂಗಾನಿಯ ಮುಂದೆ ನಾಗ ದೇವಾಲಯದ ಕೆಳಗೆ ಭಾಗೀರಥಿ ನದಿಯ ಬಳಿ ಹೆಲಿಕಾಪ್ಟರ್ ಪತನಗೊಂಡಿದೆ ಎಂದು ವರದಿಯಾಗಿದೆ. ಉತ್ತರಕಾಶಿಯ ಜಿಲ್ಲಾ ಮ್ಯಾಜಿಸ್ಟ್ರೇಟ್ ಸ್ಥಳಕ್ಕೆ ತೆರಳಿದ್ದಾರೆ. ಆರು ಪ್ರಯಾಣಿಕರಿದ್ದ ಹೆಲಿಕಾಪ್ಟರ್ ಡೆಹ್ರಾಡೂನ್‌ನಿಂದ ಹರ್ಸಿಲ್  ಹೊರಟಿತ್ತು.

ಇನ್ನು ಖಾಸಗಿ ಕಂಪನಿಗೆ ಸೇರಿದ ಈ ಹೆಲಿಕಾಪ್ಟರ್ ಪತನಗೊಂಡ ವಿಷಯ ತಿಳಿಯುತ್ತಿದ್ದಂತೆ ಪೊಲೀಸರು, ಸೇನಾ ಪಡೆಗಳು ಮತ್ತು ವಿಪತ್ತು ನಿರ್ವಹಣಾ ತಂಡಗಳು ಸ್ಥಳಕ್ಕೆ ದೌಡಾಯಿಸಿದ್ದು, ಇಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಸಂಭವಿಸಿದ ಅಪಘಾತದಲ್ಲಿ ಮಡಿದ ಮತ್ತು ಗಾಯಗೊಂಡವರ ಹೊರತೆಗೆಯುವ ಕಾರ್ಯ ಮುಂದುವರಿಸಿದ್ದಾರೆ.

ತನಿಖೆಗೆ ಆದೇಶಿಸಿದ ಮುಖ್ಯಮಂತ್ರಿ ಧಾಮಿ: ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಹೆಲಿಕಾಪ್ಟರ್ ಪತನಗೊಂಡು ಅಸುನೀಗಿದವರ ಆತ್ಮಕ್ಕೆ ಶಾಂತಿ ಕೋರಿ ಸಂತಾಪ ಸೂಚಿಸಿದ್ದಾರೆ ಮತ್ತು ಗಾಯಾಳುಗಳಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸುವಂತೆ ಆಡಳಿತಕ್ಕೆ ಸೂಚನೆ ನೀಡಿದ್ದಾರೆ.

“ಉತ್ತರಕಾಶಿಯ ಗಂಗಾನಿ ಬಳಿ ಹೆಲಿಕಾಪ್ಟರ್ ಅಪಘಾತದಲ್ಲಿ ಸಾವುನೋವು ಸಂಭವಿಸಿರುವುದು ತುಂಬಾ ದುಃಖಕರ. ಪರಿಹಾರ ಮತ್ತು ರಕ್ಷಣಾ ಕಾರ್ಯಕ್ಕಾಗಿ ಎಸ್‌ಡಿಆರ್‌ಎಫ್ ಮತ್ತು ಜಿಲ್ಲಾಡಳಿತ ತಂಡಗಳು ತಕ್ಷಣ ಸ್ಥಳಕ್ಕೆ ತೆರಳಬೇಕು. ಅಪಘಾತದಲ್ಲಿ ಮೃತಪಟ್ಟವರ ಆತ್ಮಗಳಿಗೆ ದೇವರು ಶಾಂತಿ ನೀಡಲಿ ಮತ್ತು ದುಃಖಿತ ಕುಟುಂಬಗಳಿಗೆ ಈ ಅಪಾರ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ” ಎಂದು ಅವರು ಎಕ್ಸ್‌ ಮಾಡಿದ್ದಾರೆ.

ಅಲ್ಲದೆ ಅಪಘಾತದ ಬಗ್ಗೆ ತನಿಖೆ ನಡೆಸುವಂತೆ ಸಿಎಂ ಧಾಮಿ ಆಡಳಿತಕ್ಕೆ ಸೂಚನೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ನಾನು ಅಧಿಕಾರಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇನೆ ಮತ್ತು ಪ್ರತಿಯೊಂದು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

Deva
the authorDeva

Leave a Reply

error: Content is protected !!