ಬೆಂಗಳೂರು: ಸಾರಿಗೆ ನೌಕರರು ನಾಳೆ ಸಂಜೆ 5 ಗಂಟೆಯವರೆಗೂ ಸರ್ಕಾರಕ್ಕೆ ಗಡುವು ನೀಡಿದ್ದು ಬೇಡಿಕೆ ಈಡೇರಿಸದಿದ್ದರೆ 15 ದಿನಗಳ ಬಳಿಕ ಅನಿರ್ದಿಷ್ಟಾವಧಿ ಸಾರಿಗೆ ಮುಷ್ಕರ ಹಮ್ಮಿಕೊಳ್ಳುವುದಾಗಿ ಧರಣಿ ನಿರತ ನೌಕರರು ಎಚ್ಚರಿಕೆ ನೀಡಿದ್ದಾರೆ.
ಸರ್ಕಾರವೇ ಕೊಟ್ಟಿರುವ ಲಿಖಿತ ಭರವಸೆಯನ್ನು ಈಡೇರಿಸುವಂತೆ ಹಾಗೂ ಸಮಸ್ಯೆಗಳ ಶಾಶ್ವತ ನಿವಾರಣೆಗಾಗಿ ಸಾರಿಗೆ ನೌಕರರು ಮತ್ತು ಕುಟುಂಬ ಸದಸ್ಯರು ಇದೇ ಮಾರ್ಚ್ ಒಂದರಿಂದ ಫ್ರೀಡಂ ಪಾರ್ಕ್‌ನಲ್ಲಿ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹದಲ್ಲಿ ಈ ಬಗ್ಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ರಾಜ್ಯಾಧ್ಯಕ್ಷ ಆರ್. ಚಂದ್ರಶೇಖರ್ ತಿಳಿಸಿದ್ದಾರೆ.
ನಾವು ಸೋಮವಾರ (ಮಾ.6) ಕಾರ್ಮಿಕ ಆಯುಕ್ತರಿಗೆ ಅನಿರ್ದಿಷ್ಟಾವಧಿ ಸಾರಿಗೆ ಮುಷ್ಕರ ಮಾಡುವ ಬಗ್ಗೆ ನೋಟಿಸ್ ನೀಡಿ 14 ದಿನಗಳ ನಂತರ ಮುಷ್ಕರ ಪ್ರಾರಂಭಿಸಲು ಇಂದು ಸಾರಿಗೆ ನೌಕರರ ಸಮಾನ ಮನಸ್ಕರ ವೇದಿಕೆ ಕರೆದಿದ್ದ ತುರ್ತು ಸಭೆಯಲ್ಲಿ ನಿರ್ಧರಿಸಿರುವುದಾಗಿ ತಿಳಿಸಿದರು.
ಇನ್ನು ಮೂರನೇ ದಿನವಾದ ಇಂದು ಧರಣಿ ಯಶಸ್ವಿಯಾಗಿದ್ದು, ನಾಳೆಯೂ ಅಂದರೆ ಮಾ.4 ರಂದು ಸಹ ಮುಂದುವರಿಯಲಿದೆ. ನಾಳೆ ಸಂಜೆವರೆಗೂ ಸರ್ಕಾರ ಯಾವುದೇ ತೀರ್ಮಾನ ತೆಗೆದುಕೊಳ್ಳದಿದ್ದರೆ 15 ದಿನಗಳ ಬಳಿಕ ಅರ್ನಿದಿಷ್ಟಾವಧಿ ಮುಷ್ಕರ ಮಾಡುವುದು ಖಚಿತ ಎಂದು ಧರಣಿ ಸ್ಥಳದಲ್ಲೇ ಘೋಷಣೆ ಮಾಡಿದರು.
ಈಗ ನಡೆಯುತ್ತಿರುವ ಅರ್ನಿದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ನಾಳೆ ಕೈ ಬಿಡಬೇಕೊ ಇಲ್ಲ ನಿರಂತರವಾಗಿ ಮುಷ್ಕರ ಕೈಗೊಳ್ಳುವವರೆಗೂ ಮುಂದುವರಿಸಬೇಕೋ ಎಂಬುದರ ಬಗ್ಗೆ ನಾಳೆಯೇ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.