ಬೆಂಗಳೂರು ಗ್ರಾಮಾಂತರ: ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಅಂಗವಾಗಿ ಹೊಸಕೋಟೆ ತಾಲೂಕಿನ ಜಡಿಗೇನಹಳ್ಳಿಯಲ್ಲಿ ಶನಿವಾರ ಗ್ರಾಮವಾಸ್ತವ್ಯ ಮಾಡಿದ್ದ ಕಂದಾಯ ಸಚಿವ ಆರ್.ಅಶೋಕ ಭಾನುವಾರ ಬೆಳಗ್ಗೆ ಗ್ರಾಮದ ಪರಿಶಿಷ್ಟ ಜಾತಿಯ ಗಿರಿಜಮ್ಮ ಹಾಗೂ ಮುನಿಯಪ್ಪ ದಂಪತಿ ಮನೆಯಲ್ಲಿ ಉಪಾಹಾರ ಸೇವಿಸಿದರು.
ಮನೆಯೊಳಗೆ ಪ್ರವೇಶಿಸುತ್ತಿದ್ದಂತೆ ಮನೆ ಮಾಲೀಕರು ಸಾಕಾಣೆ ಮಾಡಿರುವ ಕುರಿಮರಿಗಳನ್ನು ಎತ್ತಿ ಸಂತಸ ಪಟ್ಟರು. ಕುಟುಂಬದ ಸದಸ್ಯರು ತಯಾರಿಸಿದ್ದ ಕೇಸರಿಬಾತ್,ಉಪ್ಪಿಟ್ಟು,ಚಿತ್ರಾನ್ನ,ವಡೆ,ಚಟ್ನಿಯನ್ನು ಸವಿದರು.ಮನೆಯವರು ತೋರಿದ ಪ್ರೀತಿ ಹಾಗೂ ಶುಚಿ ರುಚಿಯಾದ ಉಪಾಹಾರ ಬಡಿಸಿದ್ದಕ್ಕೆ ತೃಪ್ತಿ ವ್ಯಕ್ತಪಡಿಸಿ, ಉಪಾಹಾರದ ರುಚಿಗೆ ಮನಸಾರೆ ಮೆಚ್ಚುಗೆ ಸೂಚಿಸಿದರು.
ಕುಟುಂಬದಲ್ಲಿರು ಸದಸ್ಯರ ಸಂಖ್ಯೆಯ ಮಾಹಿತಿ ಪಡೆದ ಸಚಿವರು ಗ್ರಾಮದಲ್ಲಿ ಗುರುತಿಸಲಾಗಿರುವ ಸರ್ಕಾರಿ ನಿವೇಶನಗಳಲ್ಲಿ ಎರಡು ನಿವೇಶನಗಳನ್ನು ಒದಗಿಸಲು ಸೂಚಿಸಿದರು.
ಉಪಾಹಾರದ ನಂತರ ಮನೆಯ ಆವರಣದಲ್ಲಿ ಕೆಲಕಾಲ ಕುಳಿತು ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದ ಸಚಿವರು ಸ್ಥಳೀಯ ಆಶಾ ಕಾರ್ಯಕರ್ತೆ ನಂಜಮ್ಮ ಅವರು ತಮ್ಮ ಪುತ್ರ ಭರತನ ಚಿಕಿತ್ಸೆಗೆ ನೆರವಾಗಲು ಕೋರಿದಾಗ , ತಕ್ಷಣ ಸ್ಪಂದಿಸಿದ ಸಚಿವರು ಮಾರತ್ತಹಳ್ಳಿಯ ಶಂಕರ ಕಣ್ಣಿನ ಆಸ್ಪತ್ರೆಯ ತಜ್ಞವೈದ್ಯರಿಗೆ ಮೊಬೈಲ್ ಮೂಲಕ ಸಂಪರ್ಕಿಸಿ, ಆಶಾ ಕಾರ್ಯಕರ್ತೆಯ ಮಗನ ಚಿಕಿತ್ಸೆಗೆ ಅಗತ್ಯ ಸಹಾಯ ನೀಡಲು ಸೂಚಿಸಿದರು.
ಉಪಾಹಾರ ನೀಡಿದ ಪರಿಶಿಷ್ಟ ಜಾತಿಯ ಮುನಿರಾಜಪ್ಪ-ಗಿರಿಜಮ್ಮ ಕುಟುಂಬದ ಸದಸ್ಯರೊಂದಿಗೆ ಫೋಟೋ ತೆಗೆಸಿಕೊಂಡರು. ಸಚಿವರಾದ ಎನ್.ನಾಗರಾಜು, ಜಿಲ್ಲಾಧಿಕಾರಿ ಆರ್.ಲತಾ ಮತ್ತಿತರರು ಇದ್ದರು.