ಬೆಂಗಳೂರು: ಸಾರಿಗೆ ನೌಕರರಿಗೆ ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಶೇ.15ರಷ್ಟು ವೇತನ ಹೆಚ್ಚಳದಿಂದ ಈಗಿನ ಬೆಲೆ ಏರಿಕೆಗೆ ಹೋಲಿಸಿದರೆ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ ಎಂದು ಖಂಡಿಸಿ ಇದೇ ಮಾ.24ರಿಂದ ಕರೆ ನೀಡಿರುವ ಅನಿರ್ದಿಷ್ಟಾವಧಿ ಮುಷ್ಕರ ಮಾಡುವುದು ಖಚಿತ ಎಂದು ಸಮಾನ ಮನಸ್ಕರ ವೇದಿಕೆ ಪದಾಧಿಕಾರಿಗಳು ತಿಳಿಸಿದ್ದಾರೆ.
ಹೀಗಾಗಿ ಇನ್ನು ಮುಷ್ಕರಕ್ಕೆ 2ದಿನಗಳಷ್ಟೇ ಬಾಕಿಯಿದ್ದು, ಈ ನಡುವೆ ಸರ್ಕಾರ ನಮ್ಮ ಬೇಡಿಕೆಯನ್ನು ಅಂತಿಮ ನಿರ್ಧಾರ ತೆಗೆದುಕೊಂಡು ಈಡೇರಿಸುವ ಮೂಲಕ ನೌಕರರಿಗೆ ಸಿಹಿ ಸುದ್ದಿ ನೀಡಿದರೆ ಮುಷ್ಕರ ಕೈಬಿಡುವುದಾಗಿ ಮತ್ತೊಮ್ಮೆ ವೇದಿಕೆಯ ಅಧ್ಯಕ್ಷ ಚಂದ್ರಶೇಖರ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಲ್ಲಿ ಮನವಿ ಮಾಡಿದ್ದಾರೆ.
ಒಂದು ವೇಳೆ ಸರ್ಕಾರ ಈ ಬಗ್ಗೆ ತಾತ್ಸಾರ ತಾಳಿದ್ದೇ ಆದರೆ ಮಾ.24ರ ಮುಷ್ಕರ ಮಾಡುವುದು ಪಕ್ಕ ಈ ಬಗ್ಗೆ ನಾವು ಈಗಾಗಲೇ ಕಾರ್ಮಿಕ ಇಲಾಖೆಯ ಆಯುಕ್ತರಿಗೂ ಮಾ.8ರಂದೇ ನೋಟಿಸ್ ನೀಡಿದ್ದು, ನಾವು ಕಾನೂನಾತ್ಮಕವಾಗಿಯೇ ಮುಷ್ಕರ ಮಾಡುವುದಕ್ಕೆ ಎಲ್ಲ ರೀತಿಯಲ್ಲೂ ಸಜ್ಜಾಗಿದ್ದೇವೆ ಎಂದು ತಿಳಿಸಿದ್ದಾರೆ.
ಇನ್ನು ಸರ್ಕಾರ ಏಕಪಕ್ಷೀಯವಾಗಿ ಘೋಷಣೆ ಮಾಡಿರುವ ಶೇ.15ರಷ್ಟು ವೇತನ ಹೆಚ್ಚಳವನ್ನೇ ಓಕೆ ಎಂದು ತಲೆಬಾಗಿ ಒಪ್ಪಿಕೊಂಡು ಹೊರ ಬಂದಿರುವ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳು ನೌಕರರ ಭವಿಷ್ಯಕ್ಕೆ ಕೊಡಲಿಪೆಟ್ಟು ನೀಡಿದ್ದಾರೆ.
ಹೀಗಾಗಿ ಇವರು ಈವರೆಗೂ ನೌಕರರಿಗೆ ಯಾವುದೇ ಒಂದು ಒಳ್ಳೆ ನಿರ್ಧಾರ ತೆಗೆದುಕೊಂಡಿಲ್ಲ. ಇದರಿಂದ ಬೇಸತ್ತಿರುವ ನೌಕರರು ಮತ್ತೊಮ್ಮೆ ಮುಷ್ಕರಕ್ಕೆ ಹೋಗಲು ತೀರ್ಮಾನಿಸಿದ್ದು, ಸರ್ಕಾರಕ್ಕೆ ಬಿಸಿ ಮುಟ್ಟಿಸುವುದು ಖಚಿತವಾಗಿದೆ. ಅಲ್ಲದೆ, ಈ ಬಗ್ಗೆ ನಾಡಿನ ಜನತೆಗೆ ತಮಗೆ ಆಗುತ್ತಿರುವ ಅನ್ಯಾಯದ ಬಗ್ಗೆ ತಿಳಿಸುವ ನಿಟ್ಟಿನಲ್ಲೂ ಯೋಜನೆ ರೂಪಿಸಿಕೊಂಡಿದ್ದಾರೆ ಸಾರಿಗೆ ನೌಕರರು.
ಇನ್ನು ಸಾರಿಗೆ ನೌಕರರ ಬೇಡಿಕೆ ಈಡೇರಿಸುತ್ತೇವೆ ಎಂದು ಕಳೆದ 2 ವರ್ಷ ಹಿಂದೆಯೇ ಲಿಖಿತವಾಗಿ ಭರವಸೆ ಕೊಟ್ಟಿರುವ ಇದೇ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಈವರೆಗೂ ಆ ಬಗ್ಗೆ ಯಾವುದೇ ಮಾತುಕತೆಗೆ ನೌಕರರ ಸಮಾನ ಮನಷ್ಕರ ವೇದಿಕೆಯ ಪದಾಧಿಕಾರಿಗಳನ್ನು ಕರೆದಿಲ್ಲ. ಕೇವಲ ಅಧಿಕಾರಿಗಳ ಮಟ್ಟದಲ್ಲಿ ಮಾತ್ರ ಸಭೆ ನಡೆಸಿದ್ದು, ಅದೂ ಕೂಡ ನಾಮ್ ಕೇ ವಾಸ್ತೆ ಎಂಬಂತೆ ಸಭೆಗೆ ಪದಾಧಿಕಾರಿಗಳನ್ನು ಕರೆದಿದ್ದಾರೆ ಎಂಬುವುದು ಸ್ಪಷ್ಟವಾಗಿದೆ.
ನೌಕರರ ಭವಿಷ್ಯದ ದೃಷ್ಟಿಯಿಂದ ಮೂಲ ವೇತನಕ್ಕೆ ಬಿಡಿಎ ಮರ್ಜ್ ಮಾಡಿ ಶೇ.25ರಷ್ಟು ವೇತನ ಹೆಚ್ಚಿಸಬೇಕು ಎಂಬ ಬೇಡಿಕೆಯೊಂದಿಗೆ ಇದೇ ಮಾ.21ರಿಂದ ಅಂದರೆ ಇಂದಿನಿಂದ ಮುಷ್ಕರಕ್ಕೆ ಕರೆ ನೀಡಿದ್ದ ಜಂಟಿ ಕ್ರಿಯಾ ಸಮಿತಿ, ಸರ್ಕಾರ ಯಾವುದೇ ಲಿಖತ ಭರವಸೆ ಕೊಡದಿದ್ದರೂ ತಮ್ಮ ಮುಷ್ಕರವನ್ನು ಏಕಾಏಕಿ ವಾಪಸ್ ಪಡೆದಿದ್ದು, ಅಲ್ಲದೆ ಸಿಎಂ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಅಭಿನಂದನೆಯನ್ನೂ ಕೂಡ ಸಲ್ಲಿಸಿ ಬಂದಿದೆ.
ನಿಜಕ್ಕೂ ಇದು ಮಾನ ಮರ್ಯಾದೆ ಇರುವವರು ಮಾಡುವ ಕೆಲಸವಲ್ಲ, ತಮ್ಮ ಬೇಡಿಕೆ ಈಡೇರದಿದ್ದರೂ, ಸರ್ಕಾರವೇ ಆದೇಶ ಮಾಡಿರುವ ಶೇ.15ರಷ್ಟು ವೇತನ ಹೆಚ್ಚಳಕ್ಕೇ ಮಂಡಿಯೂರಿ ಒಪ್ಪಿಕೊಂಡು ಅಭಿನಂದಿಸಿರುವುದು ನೌಕರರ ವಿರುದ್ಧದ ನಡೆಯಲ್ಲದೆ ಮತ್ತೇನು ಎಂದು ನೌಕರರು ಕೇಳುತ್ತಿದ್ದಾರೆ. ಆದರೂ ಈ ಭಂಡ ಜಂಟಿ ಸಮಿತಿ ನಾವು ಕೇಳಿದ್ದನ್ನು ಸರ್ಕಾರ ಕೊಟ್ಟಿದೆ ಎಂದು ನೌಕರರನ್ನು ಯಾಮಾರಿಸುವಂಥ ಹೇಳಿಕೆಯನ್ನು ನೀಡುತ್ತಿದೆ.
ನಾಚಿಕೆ ಆಗಬೇಕು. ತಾವೇ ಇಟ್ಟ ಬೇಡಿಕೆ ಈಡೇರಿಸದ ಮುಖ್ಯಮಂತ್ರಿ ಅವರನ್ನು ಹೂ ಗುಚ್ಛ ನೀಡಿ ಅಭಿನಂದಿಸಿ ಬಂದಿದ್ದೀರಿ ಎಂದರೆ ನಿಮ್ಮ ಹೋರಾಟ ಮಹಾ ವಿಫಲವಾಗಿದೆ ಎಂಬುದನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದೀರಿ ಅಂತಲೇ ಅಲ್ಲವೇ? ಇಲ್ಲ ನಾವು ನಿಮ್ಮನ್ನು ಯಾಮಾರಿಸುವುದಕ್ಕೆ ಈ ರೀತಿ ಕಾನೂನು ಬಾಹಿರವಾಗಿ ಮಾ.21ರಂದು ಮುಷ್ಕರ ನಡೆಸುತ್ತೇವೆ ಎಂದು ಕರೆ ನೀಡಿದ್ದೆವು ಎಂಬುದನ್ನು ಸಿಎಂ ಅವರನ್ನು ಅಭಿನಂದಿಸುವ ಮೂಲಕ ನೌಕರರ ಕಣ್ಣು ತೆರೆಸಿದ್ದೀರಿ. ಇದನ್ನು ನಿಜಕ್ಕೂ ಒಪ್ಪಿಕೊಳ್ಳಲೇ ಬೇಕು.
ಏಕೆಂದರೆ, ಸಮಾನ ಮನಷ್ಕರ ವೇದಿಕೆ ಪದಾಧಿಕಾರಿಗಳು ಮತ್ತು ವಕೀಲ ಶಿವರಾಜು ಅವರು ಕೇಳುತ್ತಿರುವ ನ್ಯಾಯಯುತ ಬೇಡಿಕೆಗಳನ್ನೇ ಇದು ಸರಿ ಇಲ್ಲ ಎಂದು ಹೇಳುತ್ತಿದ್ದ ಅದೆಷ್ಟೋ ನೌಕರರ ಕಣ್ಣನ್ನು ಈಮೂಲಕ ತೆರೆಸಿದ್ದು, ಈಗ ನಿಮ್ಮ ಬಗ್ಗೆ ನಂಬಿಕೆ ಇಟ್ಟುಕೊಂಡು ಸಮಾನ ಮನಸ್ಕರ ವೇದಿಕೆ ಮತ್ತು ವಕೀಲರ ಬಗ್ಗೆ ತುಚ್ಛವಾಗಿ ಮಾತನಾಡುತ್ತಿದ್ದ ನೌಕರರು, ಈಗ ಅವರ ಪರವಾಗಿಯೇ ವಿಡಿಯೋಗಳ ಮೂಲಕ ಮಾತನಾಡುತ್ತಾ, ನಿಮ್ಮ ಕುತಂತ್ರ ಬುದ್ಧಿಯ ವಿರುದ್ಧ ಸಿಡಿದೆದ್ದಿದ್ದು, ಈಗ ಇದೇ ಮಾ.24ರಿಂದ ಕರೆ ನೀಡಿರುವ ಮುಷ್ಕರವನ್ನು ಬೆಂಬಲಿಸುವುದಾಗಿ ಮತ್ತು ಹೋರಾಟವನ್ನು ದೊಡ್ಡಮಟ್ಟಕ್ಕೆ ತೆಗೆದುಕೊಂಡು ಹೋಗಬೇಕು ಎಂದು ಹೇಳುತ್ತಿದ್ದಾರೆ.
ಅಂದರೆ, ಎಂದಿಗೂ ಸತ್ಯವೇ ಜಯಿಸುತ್ತದೆ ಎಂಬುದು ಈಗ ಈ ನಿಮ್ಮ ಪರ ವಕಾಲತ್ತು ವಹಿಸುತ್ತಿದ್ದ ನೌಕರರಿಗೆ ಅರಿವಾಗಿದೆ. ಅಲ್ಲದೆ ಕೆಲ ಅಧಿಕಾರಿಗಳು ಕೂಡ ಈ ಹಿಂದೆ ನಡೆದ ಮುಷ್ಕರದಲ್ಲಿ ನಿಮ್ಮ ಮಾತನ್ನು ಕೇಳಿ ಅನೇಕ ನೌಕರರಿಗೆ ಹಿಂಸೆ ನೀಡಿದ್ದು, ಈಗ ಅವರಿಗೂ ಅರಿವಾಗಿದೆ. ನಿಮ್ಮ ಹಿಂದೆ ಬಂದರೆ ನಮಗೂ ಚೊಂಬೇ ಸಿಗುವುದು ಎಂದು. ಹಾಗಾಗಿ ಮಾ.24ರಿಂದ ನಡೆಯುವ ಮುಷ್ಕರವನ್ನು ಅಧಿಕಾರಿಗಳು ಕೂಡ ಬೆಂಬಲಿಸುವುದಾಗಿ ಹೇಳಿದ್ದು, ಸರ್ಕಾರಕ್ಕೆ ಅಧಿಕಾರಿಗಳು ಕೂಡ ಸವಾಲೊಡ್ಡುತ್ತಿದ್ದಾರೆ.