ಚಿಕ್ಕಬಳ್ಳಾಪುರ: ಜಿಲ್ಲೆಯ ಜನರ ಬಹು ದಿನಗಳ ಬೇಡಿಕೆಗೆ ಕೆಎಸ್ಆರ್ಟಿಸಿ ಸ್ಪಂದಿಸಿದ್ದು ಚಿಕ್ಕಬಳ್ಳಾಪುರಕ್ಕೆ ಬಿಎಂಟಿಸಿ ಬಸ್ ಸಂಚರಿಸಲು ಅನುಮತಿ ನೀಡಿದೆ.
ಕೇವಲ ಬೆಂಗಳೂರುನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಮಾತ್ರ ಸೀಮಿತವಾಗಿದ್ದ ಬಿಎಂಟಿಸಿ ಬಸ್ಗಳು ಈಗ ಚಿಕ್ಕಬಳ್ಳಾಪುರಕ್ಕೂ ಸಂಚರಿಸುವ ಮೂಲಕ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿವೆ.
ಈ ಬಗ್ಗೆ ಜನವರಿ 4ರಂದೇ ನಡೆದಿದ್ದ ಸಭೆಯಲ್ಲಿ ಬಿಎಂಟಿಸಿ ಆಡಳಿತ ಮಂಡಳಿ ಒಮ್ಮತದ ತೀರ್ಮಾನ ಕೈಗೊಂಡಿತ್ತು. ಆದರೆ ಬಿಎಂಟಿಸಿ ಬಸ್ ಸೇವೆಯನ್ನು ಚಿಕ್ಕಬಳ್ಳಾಪುರಕ್ಕೆ ವಿಸ್ತರಿಸಿದ್ದಕ್ಕೆ ಕೆಎಸ್ಆರ್ಟಿಸಿ ಆಕ್ಷೇಪ ವ್ಯಕ್ತಪಡಿಸಿತ್ತು.
ಬೆಂಗಳೂರಿನಿಂದ ಚಿಕ್ಕಬಳ್ಳಾಪುರಕ್ಕೆ ಸುಮಾರು 60 ಕಿ.ಮೀ. ಅಂತರವಿದೆ. ಹೀಗಾಗಿ ಬಸ್ ಸಂಚಾರ ವಿಸ್ತರಿಸಲು ಅವಕಾಶ ಇಲ್ಲ ಎಂದು ಕೆಎಸ್ಆರ್ಟಿಸಿ ಅಧಿಕಾರಿಗಳು ಆಕ್ಷೇಪಿಸಿದ್ದರು. ಬಿಎಂಟಿಸಿ ಬಸ್ ಸಂಚಾರ ಮಾಡಿದರೆ ಕೆಎಸ್ಆರ್ಟಿಸಿ ಆದಾಯಕ್ಕೆ ಹೊಡೆತ ಬೀಳುವ ಸಾಧ್ಯತೆ ಇದೆ ಎಂದು ಹೇಳಿದ್ದರು.
ಆದರೀಗ ಚಿಕ್ಕಬಳ್ಳಾಪುರಕ್ಕೆ ಬಿಎಂಟಿಸಿ ಬಸ್ ಸಂಚರಿಸಲು ಕೆಎಸ್ಆರ್ಟಿಸಿ ಅನುಮತಿ ನೀಡಿದೆ ಎಂದು ತಿಳಿದು ಬಂದಿದೆ. ಒಟ್ಟಾರೆ ಯಾವ ಬಸ್ ಸಂಚರಿಸಿದರು ಅದು ಸರ್ಕಾರಿ ಬಸ್ಸೇ ಆಗಿರುವುದರಿಂದ ಇಲ್ಲಿ ಲಾಭ ನಷ್ಟ ಲೆಕ್ಕಹಾಕಬಾರದು ಎಂಬುದಕ್ಕೆ ಅಧಿಕಾರಿಗಳು ಒತ್ತುಕೊಟ್ಟಂತೆ ಕಾಣಿಸುತ್ತಿದೆ.