ಬೆಂಗಳೂರು: ಸಾರಿಗೆ ನೌಕರರಿಗೆ ಸರ್ಕಾರಿ ನೌಕರರಂತೆ ಸರಿ ಸಮಾನ ವೇತನ ಕೊಡಬೇಕು ಅಥವಾ ವೇತನ ಆಯೋಗ ಮಾದರಿಯಲ್ಲಿ ವೇತನ ಕೊಡಬೇಕು ಎಂದು ಆಗ್ರಹಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸಮಾನ ಮನಸ್ಕರ ವೇದಿಕೆಯ ಪದಾಧಿಕಾರಿ ಹಾಗೂ ಕೂಟದ ರಾಜ್ಯಾಧ್ಯಕ್ಷ ಆರ್.ಚಂದ್ರೇಶಖರ್ ಅವರನ್ನು ಇಂದು ರಾತ್ರಿ 11 ಗಂಟೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ಶಾಂತಿನಗರದಲ್ಲಿರುವ ಸಾರಿಗೆ ಸಂಸ್ಥೆಯ ಕೇಂದ್ರ ಕಚೇರಿ ಬಳಿ ಇಂದು ಸಂಜೆ 7ಗಂಟೆಯಿಂದ ಉಪವಾಸ ಸತ್ಯಾಗ್ರಹ ಆರಂಭಿಸಿದ್ದ ಚಂದ್ರು ಅವರನ್ನು ಬಿಎಂಟಿಸಿ ಎಸ್‌ಅಂಡ್‌ವಿ ಅಧಿಕಾರಿ ರಾಧಿಕಾ ಅವರು ರಾತ್ರಿ 8.30ರ ಸುಮಾರಿಗೆ ಮತ್ತೊಮ್ಮೆ ಸಭೆ ಕರೆದು ಚರ್ಚಿಸಿದ್ದಾರೆ.
ಆದರೆ, ಈ ವೇಳೆ ನೌಕರರಿಗೆ ಕೊಟ್ಟ ಭರವಸೆ ಈಡೇರಿಸುವ ನೀಟ್ಟಿನಲ್ಲಿ ಸರ್ಕಾರ ನಡೆದುಕೊಳ್ಳುವುದಕ್ಕೆ ಮುಂದಾಗುತ್ತಿಲ್ಲ ಎಂಬ ವಿಷಯ ಚರ್ಚೆಯಾಗಿದ್ದು, ಇದರಿಂದ ಬೇಸತ್ತ ಚಂದ್ರು ತಮ್ಮ ಉಪವಾಸ ಸತ್ಯಾಗ್ರಹವನ್ನು ಮುಂದುವರಿಸಿದ್ದಾರೆ.
ಆದರೆ, ಏಕಾಏಕಿ ಸತ್ಯಾಗ್ರಹ ನಿರತ ಚಂದ್ರು ಅವರನ್ನು ಸುಮಾರು ರಾತ್ರಿ 11 ಗಂಟೆಗೆ ಬಂದ ವಿಲ್ಸನ್‌ಗಾರ್ಡನ್ ಪೊಲೀಸರು ಬಂಧಿಸಿ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.
ಇನ್ನು ಸತ್ಯಾಗ್ರಹ ಸ್ಥಳದಲ್ಲಿ ಇದ್ದ ನೌಕರರು ಕೂಡ ಈಗ ಅಂದರೆ, ರಾತ್ರಿ 11.35ರಲ್ಲಿ ಠಾಣೆ ಮುಂದೆ ಜಮಾಯಿಸಿದ್ದಾರೆ. ಸರ್ಕಾರ ನೌಕರರ ವಿರುದ್ಧ ಈ ರೀತಿ ತಾರತಮ್ಯ ಧೋರಣೆ ಅನುಸರಿಸುತ್ತಿರುವುದು. ಪ್ರಜಾ ಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿ ಪರಿಣಮಿಸುತ್ತಿದೆ.
ಇದರಿಂದ ಕುಪಿಗೊಳ್ಳುತ್ತಿರುವ ನೌಕರರನ್ನು ಇನ್ನಷ್ಟು ಕೆಣಕುವ ಮಟ್ಟಕ್ಕೆ ಸರ್ಕಾರ ಇಳಿದಿದ್ದು ಇದು ಯಾವ ದಿಕ್ಕಿನಲ್ಲಿ ಸಾಗುತ್ತದೋ ಎಂಬುದನ್ನು ಕಾದು ನೋಡಬೇಕಿದೆ.