ಬೆಂಗಳೂರು: ಸಾರಿಗೆ ನೌಕರರಿಗೆ ಸರ್ಕಾರಿ ನೌಕರರಂತೆ ಸರಿ ಸಮಾನ ವೇತನ ಕೊಡಬೇಕು ಅಥವಾ ವೇತನ ಆಯೋಗ ಮಾದರಿಯಲ್ಲಿ ವೇತನ ಕೊಡಬೇಕು ಎಂದು ಆಗ್ರಹಿಸಿ ಏಕಾಂಗಿಯಾಗಿಯೇ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಕೂಟದ ರಾಜ್ಯಾಧ್ಯಕ್ಷ ಆರ್.ಚಂದ್ರೇಶಖರ್ ಅವರನ್ನು ನಿನ್ನೆ (ಮಾ.21) ರಾತ್ರಿ 11 ಗಂಟೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ಶಾಂತಿನಗರದಲ್ಲಿರುವ ಸಾರಿಗೆ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಬಿಎಂಟಿಸಿ ಎಸ್‌ಅಂಡ್‌ವಿ ಅಧಿಕಾರಿ ರಾಧಿಕಾ ಅವರು ಸಮಾನ ಮನಸ್ಕರ ವೇದಿಕೆಯ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. ಸಭೆ ವಿಫಲವಾದ ಬಳಿಕ ಸಂಜೆ 7ಗಂಟೆಯಿಂದ ಉಪವಾಸ ಸತ್ಯಾಗ್ರಹ ಆರಂಭಿಸಿದ್ದ ಚಂದ್ರು ಅವರನ್ನು ರಾತ್ರಿ 8.30ರ ಸುಮಾರಿಗೆ ಮತ್ತೊಮ್ಮೆ ಸಭೆ ಕರೆದು ಚರ್ಚಿಸಿದ್ದು, ಆ ಬಳಿಕವು ಸಭೆ ವಿಫಲವಾಯಿತು.
ಈ ವೇಳೆ ನೌಕರರಿಗೆ ಕೊಟ್ಟ ಭರವಸೆ ಈಡೇರಿಸುವ ನೀಟ್ಟಿನಲ್ಲಿ ಸರ್ಕಾರ ನಡೆದುಕೊಳ್ಳುವುದಕ್ಕೆ ಮುಂದಾಗುತ್ತಿಲ್ಲ ಎಂಬ ವಿಷಯ ಚರ್ಚೆಯಾಗಿದ್ದು, ಯಾವುದೇ ಒಮ್ಮತದ ನಿರ್ಧಾರಕ್ಕೆ ಬರದೆ ಸಭೆ ವಿಫಲವಾದ ಕಾರಣ ತಮ್ಮ ಉಪವಾಸ ಸತ್ಯಾಗ್ರಹವನ್ನು ಮುಂದುವರಿಸಿದ್ದೇವೆ ಎಂದು ಹೇಳಿದ್ದರು.
ಆದರೆ, ಏಕಾಏಕಿ ಸತ್ಯಾಗ್ರಹ ನಿರತ ಚಂದ್ರು ಅವರನ್ನು ಸುಮಾರು ರಾತ್ರಿ 11 ಗಂಟೆಗೆ ಬಂದ ವಿಲ್ಸನ್‌ಗಾರ್ಡನ್ ಪೊಲೀಸರು ಬಂಧಿಸಿ ಠಾಣೆಗೆ ಕರೆದುಕೊಂಡು ಹೋಗಿದ್ದು, ಇನ್ನೂ ಪೊಲೀಸ್ ಠಾಣೆಯಲ್ಲೇ ಇರಿಸಿಕೊಳ್ಳಲಾಗಿದೆ. ಮುಂದೆ ಏನು ಕ್ರಮ ಜರುಗಿಸತ್ತಾರೋ ಎಂಬುವುದು ಇನ್ನಷ್ಟೆ ತಿಳಿಯ ಬೇಕಿದೆ.