ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರಿಗೆ ಇನ್ನು ಒಂದುವಾರದೊಳಗೇ ಸಿಹಿಸುದ್ದಿಕೊಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೀಡಿದ ಭರವಸೆ ಸುಮಾರು 80 ವಾರಗಳಾದರೂ ಇನ್ನೂ ಈಡೇರದಿರುವುದು ಒಬ್ಬ ಸಿಎಂ ತಮ್ಮ ನೌಕರರಿಗೆ ಕೊಟ್ಟ ಮಾತನ್ನು ಎಷ್ಟರ ಮಟ್ಟಿಗೆ ಉಳಿಸಿಕೊಳ್ಳುತ್ತಾರೆ ಎಂಬುದಕ್ಕೆ ತಾಜಾ ನಿದರ್ಶನವಾಗಿದೆ.
ಹೌದು! ಕಳೆದ 2021ರ ಆಗಸ್ಟ್ 21ರಂದು ಹುಬ್ಬಳ್ಳಿಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ವಾಯುವ್ಯ ನಿಗಮದ ಗೌರವಾಧ್ಯಕ್ಷ, ಹೈ ಕೋರ್ಟ್ ವಕೀಲ ಪಿ.ಎಚ್. ನೀರಲಕೇರಿ ಅವರ ನೇತೃತ್ವದಲ್ಲಿ ನಗರದ ಸಿಎಂ ಬೊಮ್ಮಾಯಿ ಅವರ ನಿವಾಸಕ್ಕೆ ತೆರಳಿದ ಸಾರಿಗೆ ನೌಕರರ ನಿಯೋಗ ಅಂದು ಬೆಳಗ್ಗೆ ಸಿಎಂ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸುವ ಮೂಲಕ ನೌಕರರ ಸಮಸ್ಯೆಯನ್ನು ಪರಿಹರಿಸುವಂತೆ ಮನವಿ ಮಾಡಿತ್ತು.
ಈ ವೇಳೆ ಸಾರಿಗೆ ನೌಕರರ ಮುಷ್ಕರದ ಸಮಯದಲ್ಲಿ ಆಗಿರುವ ಎಲ್ಲ ವಜಾ, ವರ್ಗಾವಣೆ, ಅಮಾನತು ಮತ್ತು ಪೊಲೀಸ್ ಪ್ರಕರಣಗಳನ್ನು ಹಿಂಪಡೆಯಬೇಕು ಮತ್ತು ವೇತನ ಹೆಚ್ಚಳ ಮಾಡಬೇಕು ಎಂದು ಬೊಮ್ಮಾಯಿ ಅವರಲ್ಲಿ ನಿಯೋಗ ವಿನಂತಿಸಿತ್ತು. ಅದಕ್ಕೆ ಸಕರಾತ್ಮಕವಾಗಿ ಸ್ಪಂದಿಸಿದ ಇದೇ ಸಿಎಂ ಬೊಮ್ಮಾಯಿ ಆ ಎಲ್ಲ ಸಮಸ್ಯೆಗಳನ್ನು ಒಂದು ವಾರದೊಳಗಾಗಿ ಬಗೆಹರಿಸುವ ಭರವಸೆ ನೀಡಿದ್ದರು.
ಇದಿಷ್ಟೇ ಅಲ್ಲದೆ ಇನ್ನು ಮುಂದೆ ಸಾರಿಗೆ ನೌಕರರು ಈ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಎಲ್ಲ ಸಮಸ್ಯೆಗಳನ್ನು ನಿವಾರಣೆ ಮಾಡಿ ನಿಮಗೆ ಒಳ್ಳೆ ದಿನಗಳು ಬರುವಂತೆ ನೋಡಿಕೊಳ್ಳುತ್ತೇವೆ ನಾವು ಸಿಎಂ ಆಗಿರುವವರೆಗೂ ನಿಮ್ಮ ಸಮಸ್ಯೆಗೆ ಸ್ಪಂದಿಸುತ್ತೇವೆ ಎಂದು ನಗುಮುಖದೊಂದಿಗೆ ಆಶ್ವಾಸನೆ ನೀಡಿದ್ದರು.
ಹೀಗಾಗಿ ಒಂದು ವಾರದಲ್ಲಿ ಸಾರಿಗೆ ನೌಕರರ ಬಹುತೇಕ ಸಮಸ್ಯೆಗಳು ಬಗೆಹರಿಯಲಿವೆ ಎಂದು ಸಿಎಂ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಹೊರ ಬಂದ ವಕೀಲ ನೀರಲಕೇರಿ ಆಶಯ ವ್ಯಕ್ತಪಡಿಸಿದ್ದರು. ಆದರೆ, ಸಿಎಂ ಕೊಟ್ಟ ಆಶ್ವಾಸನೆ 80 ವಾರಗಳು ಅಂದರೆ ಒಂದು ವರ್ಷ 7 ತಿಂಗಳು ಕಳೆದರೂ ಇನ್ನೂ ಬಗೆಹರಿಸಿಲ್ಲ. ಅಂದರೆ ಹುಸಿ ಆಶ್ವಾಸನೆ ನೀಡಿ ತಮ್ಮ ಸಿಎಂ ಸ್ಥಾನಕ್ಕೆ ಅಗೌರವ ಬರುವ ರೀತಿ ನಡೆದುಕೊಂಡರೇ ಈ ಸಿಎಂ ಬೊಮ್ಮಾಯಿ?
ಅಂದರೆ ಇವರು ಸಾರ್ವಜನಿಕ ಸೇವೆಯಲ್ಲಿ ಇರುವುದಕ್ಕೆ ಯೋಗ್ಯರಲ್ಲವಾ? ತಮ್ಮ ಕೈಯಲ್ಲೇ ಅಧಿಕಾರವಿದ್ದರೂ ತಾವೇ ಕೊಟ್ಟ ಮಾತನ್ನು ಕಾರ್ಯಗತ ಮಾಡದ ಸಿಎಂ ಬೊಮ್ಮಾಯಿ ಅವರು ಆ ಸ್ಥಾನದಲ್ಲಿ ಮುಂದುವರಿಯುವುದಕ್ಕೆ ಯೋಗ್ಯರ, ಇಲ್ಲ ಅವರಿಗೆ ಯಾವುದೇ ಯೋಗ್ಯತೆ ಇಲ್ಲ ಎಂದು ನೊಂದ ನೌಕರರು ಇಂದು ಕಣ್ಣೀರು ಸುರಿಸುತ್ತಾ ಆಕ್ರೋಶ ಹೊರಹಾಕುತ್ತಿದ್ದಾರೆ.
ಇದೇನು ಕಟುಕ ಸರ್ಕಾರವೇ ಎಂದು ಪ್ರಶ್ನಿಸುತ್ತಿದ್ದು, ಇಂಥ ಸಿಎಂ ಮತ್ತು ನೌಕರರ ಪರ ಇರುವ ನಾಯಕ ನಾನು ಎಂದು ಹೇಳಿಕೊಳ್ಳುವ ಸಾರಿಗೆ ಸಚಿವ ಶ್ರೀರಾಮುಲು ಅವರು ಕೊಟ್ಟ ಅಧಿಕಾರವನ್ನು ಸರಿಯಾಗಿ ನಿಭಾಯಿಸುವಲ್ಲಿ ಎಡವಿದ್ದು, ನಮಗೆ ಇನ್ನಷ್ಟು ಸಮಸ್ಯೆಯನ್ನೇ ಹೇರಿರುವ ಇವರು ಅಯೋಗ್ಯರು ಎಂದು ಹಿಡಿ ಶಾಪ ಹಾಕುತ್ತಿದ್ದಾರೆ ಸಾರಿಗೆಯ 1.15 ಲಕ್ಷ ಸಾರಿಗೆ ಅಧಿಕಾರಿಗಳು ಮತ್ತು ನೌಕರರು.
ಇನ್ನು ಬೆರಳೆಣಿಕೆಯ ತಿಂಗಳುಗಳಷ್ಟೇ ಚುನಾವಣೆಗೆ ಇರುವುದು. ಈಗಲಾದರೂ ನಮ್ಮ ಸಮಸ್ಯೆ ಮತ್ತು ಬೇಡಿಕೆಗಳಿಗೆ ಸ್ಪಂದಿಸಿ ಇಲ್ಲದಿದ್ದರೆ ಶಾಪಗ್ರಸ್ಥರಾಗಿ ನೀವು ಮನೆಗೆ ಹೋಗಬೇಕಾಗುತ್ತದೆ ಎಚ್ಚರ ಎಂದು ನೌಕರರು ಕಿಡಿಕಾರುತ್ತಿದ್ದಾರೆ.
ಇಂಥ ನರಸತ್ತ ಸರ್ಕಾರ ರಾಜ್ಯದಲ್ಲಿ ಇದೆ ಎಂದರೆ ಇದು ನಮ್ಮ ಪಾಲಿಗೆ ದುರಾದೃಷ್ಟಕರ ಸಂಗತಿ. ಕನಿಷ್ಠಪಕ್ಷ ನಮ್ಮ ನ್ಯಾಯಯುತ ಬೇಡಿಕೆಯನ್ನು ಈಡೇರಿಸದೆ ಈ ರೀತಿ ವರ್ತನೆ ತೋರುತ್ತಿರುವ ಸರ್ಕಾರ ಮತ್ತು ಆಡಳಿತ ಪ್ರಜಾಪ್ರಭುತ್ವಕ್ಕೆ ಮಾರಕ, ಇದು ಹೀಗೆ ಇದ್ದರೆ ಇಡೀ ರಾಜ್ಯವನ್ನೇ ನುಂಗಿ ನೀರುಕುಡಿದು ಬಿಡುತ್ತದೆ.ಹೀಗಾಗಿ ಇದನ್ನು ಬೇರು ಸಹಿತ ಕಿತ್ತುಹಾಕುಬೇಕು ಎಂದು ಆಕ್ರೋಶದ ನುಡಿಗಳನ್ನಾಡುತ್ತಿದ್ದಾರೆ ನೌಕರರು.
ಈಗಲಾದರೂ ಎಚ್ಚೆತ್ತುಕೊಂಡು ನಮ್ಮ ಬೇಡಿಕೆಗಳನ್ನು ಈಡೇರಿಸಲು ಈ ನರವಿಲ್ಲದ ಸರ್ಕಾರ ಮುಂದಾಗುವ ಮೂಲಕ ನಮಗೂ ನರವಿದೆ ಎಂಬುದನ್ನು ತೋರಿಸಿಕೊಳ್ಳಲಿ. ಇಲ್ಲ ನಮ್ಮದು ನರಸತ್ತ ಸರ್ಕಾರವೇ ಎಂದು ತೋರಿಸಿಕೊಳ್ಳುವುದೇ ಆದರೆ ಹೀಗೆಯೇ ಆಶ್ವಾಸನೆ ಕೊಟ್ಟುಕೊಂಡೆ ತೊಲಗಲಿ ಎಂದು ಅಸಮಾಧಾನ ಹೊರಹಾಕುತ್ತಿದ್ದಾರೆ.