ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರು ಸರಿ ಸಮಾನ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದ 2 ವರ್ಷದಿಂದ ನಿರಂತವಾಗಿ ಸರ್ಕಾರ ಮತ್ತು ಸಾರಿಗೆಯ ನಾಲ್ಕೂ ನಿಗಮಗಳಿಗೂ ನೂರಾರು ಮನವಿ ಸಲ್ಲಿಸಿದ್ದರೂ ಬೇಡಿಕೆ ಈಡೇರಿಸುವಲ್ಲಿ ಇನ್ನೂ ಮೀನಮೇಷ ಎಣಿಸಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಸರ್ಕಾರ ಮತ್ತು ಆಡಳಿತ ಮಂಡಳಿಯನ್ನು ಎಚ್ಚರಿಸಲು ನಾವು ಕಳೆದ ಅ.10ರಿಂದ ನ.25ರವರೆಗೂ ರಾಜ್ಯದ 18 ಜಿಲ್ಲೆಗಳಲ್ಲಿ ಬೃಹತ್ ಸೈಕಲ್ ಜಾಥಾ ಮಾಡಿ ಮತ್ತೆ ನಮ್ಮ ಸಮಸ್ಯೆ ನೆನಪಿಸುವ ಕೆಲಸ ಮಾಡಿದ್ದೇವೆ. ಆದರೂ ಇದಾವುದಕ್ಕೂ ಸರ್ಕಾರ, ಆಡಳಿತ ಮಂಡಳಿ ಗಮನಹರಿಸಿಲ್ಲ. ಹೀಗಾಗಿ ಮತ್ತೆ ಸಾರಿಗೆ ನೌಕರರು ಹೋರಾಟ ಮಾಡುವುದು ಅನಿವಾರ್ಯವಾಗುತ್ತಿದೆ ಎಂದು ಸಮಾನ ಮನಸ್ಕರ ವೇದಿಕೆ ಪದಾಧಿಕಾರಿಗಳು ತಿಳಿಸಿದ್ದಾರೆ.
ಹೌದು! ಡಿ.19ರಿಂದ ಡಿ.30ರ ವರೆಗೆ ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶದ ವೇಳೆ ಸಮಾನ ಮನಸ್ಕರ ವೇದಿಕೆ ಪದಾಧಿಕಾರಿಗಳು ಹೋರಾಟ ಮಾಡುವುದಕ್ಕೆ ಸಜ್ಜಾಗಿದ್ದೇವೆ.
ನಮ್ಮ ನೌಕರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿ, ನಮ್ಮ ಸಮಸ್ಯೆ ನಿವಾರಣೆ ಮಾಡಿಕೊಡುವಂತೆ ನೂರಾರು ಮನವಿ ಪತ್ರಗಳನ್ನು ಮುಖ್ಯ ಮಂತ್ರಿಗಳಿಗೆ, ಸಾರಿಗೆ ಸಚಿವರಿಗೆ ಮತ್ತು ಸಂಬಂಧಪಟ್ಟ ಎಲ್ಲ ಅಧಿಕಾರಿಗಳಿಗೆ ನೀಡಲಾಗಿದೆ ಆದರೂ ಮುಖ್ಯವಾಗಿ ಆಗಬೇಕಿರುವುದೇ ಇನ್ನೂ ಆಗಿಲ್ಲ ಎಂದು ವೇದಿಕೆ ಪದಾಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನು ಕಳೆದ ಎರಡು ವರ್ಷದಿಂದಲೂ ಅನೇಕ ಶಾಂತಿಯುತ ಹೋರಾಟಗಳನ್ನು ಮಾಡಿದರು ನಮ್ಮ ಬೇಡಿಕೆಗಳು ಪೂರ್ಣ ಪ್ರಮಾಣದಲ್ಲಿ ಇಡೇರಿಲ್ಲ. ಆದ್ದರಿಂದ ಮೊದಲಿಗೆ ಸಾರ್ವಜನಿಕರ ಹಾಗೂ ಸರ್ಕಾರದ ಗಮನ ಸೆಳೆಯಲು ಭೀತಿಪತ್ರಗಳನ್ನು ಹಂಚುವ ಚಳವಳಿ ಹಮ್ಮಿಕೊಳ್ಳಲಾಗಿತ್ತು. ಹೋರಾಟವನ್ನು ಮಾಡಲಾಯಿತು. ಆ ನಂತರವು ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸಿಲ್ಲ. ಹೀಗಾಗಿ ಡಿ.19ರಿಂದ ಅನಿರ್ದಿಷ್ಟಾವಧಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಸಾರಿಗೆ ಮುಷ್ಕರದ ಸಮಯದಲ್ಲಿ ನಾಲ್ಕು ನಿಗಮಗಳಲ್ಲಿ ಮಾಡಲಾಗಿದ್ದ ಪಜಾ, ವರ್ಗಾವಣೆ ಮತ್ತು ಆಮಾನತು ಪ್ರಕರಣಗಳ ಸಮಸ್ಯೆಗಳನ್ನು ಸಂಪೂರ್ಣವಾಗಿ ಬಗೆಹರಿಸದ ಕಾರಣ ಮುಖ್ಯವಾಗಿ ಬಿಎಂಟಿಸಿ ಸಂಸ್ಥೆಯಲ್ಲಿ ವಜಾಗೊಳಿಸಿರುವ ನೌಕರರನ್ನು ಪುನರ್ ನೇಮಕ ಮಾಡಿಕೊಳ್ಳುವ ವಿಚಾರದಲ್ಲಿ ಆಡಳಿತ ಮಂಡಳಿಯ ಕೆಲವು ಅಧಿಕಾರಿಗಳು ಮನಸೋಇಚ್ಛೆ ನೌಕರರ ಮೇಲೆ ದ್ವೇಷ ಸಾಧಿಸುತ್ತಿದ್ದು ಸರ್ಕಾರದ ಮಾತನ್ನು ಪಾಲಿಸದೆ ಮತ್ತು ನ್ಯಾಯಾಲಯದ ಆದೇಶಗಳ ವಿರುದ್ಧ ತಡೆಯಾಜ್ಞೆ ತರುವ ಮೂಲಕ ಕಾಲ ವಿಳಂಬ ಮಾಡುತ್ತಿದ್ದಾರೆ.
ಘಟಕಗಳಲ್ಲಿ ಪ್ರತಿ ಹಂತದಲ್ಲೂ ವ್ಯಾಪಕ ಭ್ರಷ್ಟಚಾರ ನಡೆಯುತ್ತಿದ್ದು ಫೋನ್ ಪೇ, ಗೂಗಲ್ ಪ್ಲೇ ಹಾಗೂ ಏಜೆಂಟ್ ಸಂಸ್ಕೃತಿ ಹೆಮ್ಮರವಾಗಿ ಬೆಳೆದು ನೌಕರರು ದಿನಂಪ್ರತಿ ನಾನಾ ರೀತಿಯ ಮಾನಸಿಕ ಕಿರುಕುಳಗಳನ್ನು ಅನುಭವಿಸುತ್ತ ಕರ್ತವ್ಯ ನಿರ್ವಹಿಸಬೇಕಾದ ವಾತಾವರಣ ಸಂಸ್ಥೆಗಳಲ್ಲಿ ಉದ್ಭವವಾಗಿದೆ. ನೊಂದ ಕೆಲವರು ಕಿರುಕುಳ ತಡೆಯಲಾರದೆ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸಾರಿಗೆ ನೌಕರರ ಎಲ್ಲ ಸಮಸ್ಯೆಗಳ ನಿವಾರಣೆಗಳಿಗೆ ಹಾಗೂ ಸರ್ಕಾರ ನೀಡಿರುವ ಲಿಖಿತ ಭರವಸೆಗಳನ್ನು ಈ ಕೂಡಲೆ ಈಡೇರಿಸುವಂತೆ ಒತ್ತಾಯಿಸಿ ಮುಂದಿನ ದಿನಗಳಲ್ಲಿ ಹೋರಾಟಗಳನ್ನು ಹಮ್ಮಿಕೊಳ್ಳಲು ಸಾರಿಗೆ ಸಂಸ್ಥೆಯಲ್ಲಿ ನೋಂದಾಯಿಸಲ್ಪಟ್ಟಿರುವ ಹಲವು ಸಂಘಗಳು “ಸಾರಿಗೆ ನಿಗಮಗಳ ನೌಕರರ ಸಮಾನ ಮನಸ್ಕರ ವೇದಿಕೆ”ಯ ಹೆಸರಿನಡಿ ಈ ಹಿಂದೆಯೇ ಒಟ್ಟುಗೂಡಿದ್ದು ಸಮಸ್ಯೆಗಳನ್ನು ನಿವಾರಣೆ ಮಾಡಬೇಕು ಹಾಗೂ ಭರವಸೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದ್ದೆವು.
ಆದರೂ ಈವರೆಗೂ ನಮ್ಮ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಿಲ್ಲ. ಹೀಗಾಗಿ ನಾವು ಈ ಕೆಳಕಂಡ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಡಿ.19ರಿಂದ ನಮ್ಮ ಬೇಡಿಕೆಗಳು ಈಡೇರುವವರೆಗೂ ಧರಣಿ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ.
1) ಸಾರಿಗೆ ಮುಷ್ಕರದ ಸಮಯದಲ್ಲಿ ಮಾಡಿರುವ ವಜಾ ಪ್ರಕರಣಗಳನ್ನು ಯಾವುದೇ ನಿಬಂಧನೆಗಳನ್ನು ವಿಧಿಸದೇ ಈ ಕೂಡಲೇ ಮರು ನೇಮಕ ಮಾಡಿಕೊಳ್ಳುವುದು. ಮುಷ್ಕರದ ಸಮಯದಲ್ಲಿ ಮಾಡಿರುವ ವರ್ಗಾವಣೆ, ಇತರ ಶಿಕ್ಷೆಗಳನ್ನು ಯಾವುದೇ ನಿಬಂಧನೆಗಳನ್ನು ವಿಧಿಸದೆ ರದ್ದು ಮಾಡುವುದು ಹಾಗೂ ಪೊಲೀಸ್ ಪ್ರಕರಣಗಳನ್ನು ಹಿಂಪಡೆದು ದಿನಾಂಕ; 06/04/2021ರ ಪೂರ್ವದ ಯಥಾಸ್ಥಿತಿಯನ್ನು ಕಾಪಾಡುವುದು.
2) ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನಾಲ್ಕು ನಿಗಮಗಳಲ್ಲಿ ಚಾಲ್ತಿಯಲ್ಲಿರುವ ನಾಲ್ಕು ವರ್ಷಕ್ಕೊಮ್ಮೆ ಮಾಡುವ ಅವೈಜ್ಞಾನಿಕ ಚೌಕಾಸಿ ವೇತನ ಪರಿಷ್ಕರಣಾ ಪದ್ಧತಿ ಕೈಬಿಟ್ಟು, ನಿಗಮ ಮಂಡಳಿಗಳಲ್ಲಿ ಚಾಲ್ತಿಯಲ್ಲಿರುವ ವೇತನ ಆಯೋಗದ ಮಾದರಿಯನ್ನು ಅಳವಡಿಸಿಕೊಂಡು ಸಾರಿಗೆ ನೌಕರರಿಗೂ ಸರ್ಕಾರಿ ನೌಕರರಂತೆ ಸಮಾನ ವೇತನ ನೀಡುವುದು.
3) 1992 ರ ನಂತರ, ಇಲ್ಲಿಯವರೆಗೂ ಸಾರಿಗೆ ಸಂಸ್ಥೆಯಲ್ಲಿ ಕಾರ್ಮಿಕ ಸಂಘಟನೆಗಳ ಚುನಾವಣೆಗಳು ನಡೆದಿಲ್ಲ. ಆದ್ದರಿಂದ ಈ ಕೂಡಲೆ ಕಡ್ಡಾಯವಾಗಿ ಸಾರಿಗೆ ನಿಗಮಗಳಲ್ಲಿ ಕಾರ್ಮಿಕ ಸಂಘಗಳ ಚುನಾವಣೆ ನಡೆಸುವುದು.
4) ಸಾರಿಗೆ ಸಂಸ್ಥೆಗಳಲ್ಲಿ ವಿದ್ಯುತ್ ಚಾಲಿತ ವಾಹನಗಳಿಗೆ ಖಾಸಗಿ ಚಾಲಕರನ್ನು ಮತ್ತು ನಿರ್ವಾಹಣೆಯನ್ನು ಹಾಗೂ ಇತರ ವಾಹನಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ಚಾಲನಾ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳುವ ಮೂಲಕ ಪರೋಕ್ಷವಾಗಿ ಮುಂದಿನ ದಿನಗಳಲ್ಲಿ ಸಾರಿಗೆ ಸಂಸ್ಥೆಯನ್ನು ಖಾಸಗೀಕರಣ ಮಾಡುದ ಯೋಜನೆಯನ್ನು ಈ ಕೂಡಲೆ ಕೈ ಬಿಡುವುದು.
5) ಸಾರಿಗೆ ಸಂಸ್ಥೆಯ ಎಲ್ಲ ನೌಕರರಿಗೂ ದಿನಾಂಕ: 10/04/2002 ರ ಪೂರ್ವದಲ್ಲಿ ಉಪದಾನ ಪಾವತಿಸುತ್ತಿದ್ದ ನಿಯಮಾವಳಿಯನ್ನು ಪರಿಗಣಿಸಿ ಜಾರಿಗೊಳಿಸುವುದು, 6) ಕಾರ್ಯಸ್ಥಳಗಳಲ್ಲಿ ನೌಕರರು ಕಿರುಕುಳ ರಹಿತ ಮತ್ತು ನೆಮ್ಮದಿಯಾಗಿ ಕರ್ತವ್ಯ ನಿರ್ವಾಹಿಸುವ ವಾತಾವರಣ ಸೃಷ್ಟಿ ಮಾಡಬೇಕು ಎಂಬ ಒತ್ತಾಯಗಳನ್ನು ಮಾಡುತ್ತಾ ಧರಣಿ ಹಮ್ಮಿಕೊಳ್ಳುವುದಕ್ಕೆ ಸಮಾನ ಮನಸ್ಕರ ವೇದಿಕೆ ಸಜ್ಜಾಗಿದೆ.