ಬೆಂಗಳೂರು: ರೋಟಾ ಪದ್ಧತಿಯಂತೆ ( ಸೀನಿಯಾರಿಟಿಗೆ ಅನುಗುಣವಾಗಿ) ಡ್ಯೂಟಿ ಕೊಡದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬೆಂಗಳೂರು 5 ಮತ್ತು 6ನೇ ಘಟಕದ ಅಧಿಕಾರಿಗಳನ್ನು ಹೈ ಕೋರ್ಟ್ ಕಟಕಟೆಯ ಮೇಲೆ ನಿಲ್ಲಿಸಿದ್ದಾರೆ ನೊಂದ ನೌಕರರು.
ಕೆಎಸ್‌ಆರ್‌ಟಿಸಿ ಬೆಂಗಳೂರು ವಿಭಾಗದ ಘಟಕ 5 ಮತ್ತು 6ರಲ್ಲಿ ಸೇವಾ ಹಿರಿತನದ ಆಧಾರದ ಮೇಲೆ ನಮಗೆ ಡ್ಯೂಟಿ ಕೊಡುತ್ತಿಲ್ಲ ಎಂದು ನಿನ್ನೆ (ಫೆ.28ರಂದು) 5ನೇ ಘಟಕದ ನಿರ್ವಾಹಕಿ ಮಂಜಮ್ಮ ಮತ್ತು 6ನೇ ಘಟಕದ ಚಾಲಕ ಮುತ್ತಯ್ಯ ಎಂಬುವರು ಹೈ ಕೋರ್ಟ್ ಮೆಟ್ಟಿಲೇರಿದ್ದು, ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್ ನ್ಯಾಯಮೂರ್ತಿ ಹೆಮಂತ್ ಚಂದನಗೌಡರ್ ಅವರ ಏಕಸದಸ್ಯ ನ್ಯಾಯಪೀಠವು ವಾದ ಪ್ರತಿವಾದವನ್ನು ಆಲಿಸಿ ವಿಚಾರಣೆಯನ್ನು March 6ರ ಸೋಮವಾರಕ್ಕೆ ಮುಂದೂಡಿತು.
ಅರ್ಜಿದಾರರ ಪರ ಸುಪ್ರೀಂಕೋರ್ಟ್ ಮತ್ತು ಕರ್ನಾಟಕ ಹೈ ಕೋರ್ಟ್ ವಕೀಲರಾದ ಎಚ್.ಬಿ. ಶಿವರಾಜು ಮತ್ತು ಆರ್.ಕುಮಾರ್ ಅವರು ವಾದಮಂಡಿಸಿದರು. ಈ ವೇಳೆ 5ನೇ ಘಟಕದ ನಿರ್ವಾಹಕಿ ಮಂಜಮ್ಮ ಅವರಿಗೆ ನ್ಯಾಯಪೀಠ ತಮ್ಮ ಸಮಸ್ಯೆಯನ್ನು ವಿವರಿಸಲು ಅವಕಾಶ ನೀಡಿತು.
ಘಟಕದಲ್ಲಿ ಅನುಭವಿಸುತ್ತಿರುವ ತೊಂದರೆಯನ್ನು ನ್ಯಾಯಮೂರ್ತಿ ಹೆಮಂತ್ ಚಂದನಗೌಡರ್ ಅವರ ಮುಂದೆ ವಿವರವಾಗಿ ಮಂಜಮ್ಮ ಹೇಳಿಕೊಂಡರು. ಬಳಿಕ ಖುದ್ದು ಹಾಜರಿದ್ದ 5ನೇ ಮತ್ತು 6ನೇ ಘಟಕದ ಅಧಿಕಾರಿಗಳು ಎಲ್ಲ ರೋಟಾ ಪದ್ಧತಿಯಂತೆ ನಡೆಯುತ್ತಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.
ಈ ವೇಳೆ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕೊಡಿ ಎಂದು ನ್ಯಾಯಮೂರ್ತಿ ಹೆಮಂತ್ ಚಂದನಗೌಡರ್ ಸೂಚಿಸಿದರು. ಆಗ ಮಧ್ಯಾಹ್ನದವರೆಗೆ ಸಮಯವಕಾಶ ಕೊಡಬೇಕು ಎಂದು ಮನವಿ ಮಾಡಿದರು ಅಧಿಕಾರಿಗಳ ಪರ ವಕೀಲರು.
ಮಧ್ಯಾಹ್ನದ ಬಳಿಕ ಮತ್ತೆ ವಿಚಾರಣೆ ನಡೆಸಿದ ನ್ಯಾಯಪೀಠದ ಮುಂದೆ ದಾಖಲೆಗಳನ್ನು ಅಧಿಕಾರಿಗಳು ಸಲ್ಲಿಸಿದರು. ಈ ದಾಖಲೆಗಳ ಒಂದು ಕಾಪಿಯನ್ನು ಅರ್ಜಿದಾರರ ಪರ ವಕೀಲರಿಗೂ ಕೊಡಿ ಎಂದು ನಿರ್ದೇಶನ ನೀಡಿದ ನ್ಯಾಯಮೂರ್ತಿಗಳು ಬರುವ ಸೋಮವಾರ ಈ ಸಂಬಂಧ ಅಫಿಡವಿಟ್ ಸಲ್ಲಿಸುವಂತೆ ಅರ್ಜಿದಾರರ ಪರ ವಕೀಲರಿಗೆ ಸೂಚಿಸಿ ವಿಚಾರಣೆಯನ್ನು ಮಾರ್ಚ್ 6ಕ್ಕೆ ಮುಂದೂಡಿದರು.
ಈವರೆಗೂ ಅಧಿಕಾರಿಗಳ ವಿರುದ್ಧ ಕೋರ್ಟ್ ಮೊರೆ ಹೋಗುವುದಕ್ಕೆ ಹೆದರುತ್ತಿದ್ದ ನೌಕರರು ಈಗ ಆ ಭಯವನ್ನು ಬಿಟ್ಟು ತಮಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಕೋರ್ಟ್‌ನಲ್ಲೇ ಪರಿಹಾರ ಕಂಡುಕೊಳ್ಳುವುದಕ್ಕೆ ಮುಂದಾಗುತ್ತಿರುವುದು ಒಳ್ಳೆಯ ಬೆಳವಣಿಗೆ. ಇದು ಎಂದೋ ಆಗಬೇಕಿತ್ತು ಆದರೆ ಅದಕ್ಕೆ ಕಾಲ ಕೂಡಿ ಬಂದಿರಲಿಲ್ಲ ಎನಿಸುತ್ತದೆ. ಈಗ ಬಹುತೇಕ ಸಾರಿಗೆಯ ಚಾಲಕರು ಮತ್ತು ನಿರ್ವಾಹಕರು ಕೂಡ ಪದವಿ, ಸ್ನಾತಕೋತ್ತರ ಪದವಿ ಮಾಡಿರುವವರಿದ್ದಾರೆ. ಹೀಗಾಗಿ ಅವರಿಗೆ ಕಾನೂನು ತಿಳಿವಳಿಕೆ ಆದಷ್ಟು ಇದೆ ಎಂದು ವಕೀಲ ಶಿವರಾಜು ಅಭಿಪ್ರಾಯಪಟ್ಟಿದ್ದಾರೆ.
ಇನ್ನು ನೌಕರರು ಕೂಡ ತಮ್ಮ ಸಮಸ್ಯೆಯನ್ನು ಮುಕ್ತವಾಗಿ ಹೇಳಿಕೊಳ್ಳುವುದಕ್ಕೆ ನಾವು ನೌಕರರ ಕುಟಂಬ ಕ್ಷೇಮಾಭಿವೃದ್ಧಿ ಸಂಘದಡಿ ವ್ಯವಸ್ಥೆ ಮಾಡಿರುವುದರಿಂದ ಈಗ ನೌಕರರ ತಮಗೆ ಘಟಕ ಮಟ್ಟದಲ್ಲೋ ಅಥವಾ ರೂಟ್‌ಮೇಲೋ ಸಮಸ್ಯೆ ಆದರೆ ಕೂಡಲೇ ನಮ್ಮ ಬಳಿ ಸಮಸ್ಯೆಯನ್ನು ಹೇಳಿಕೊಳ್ಳುತ್ತಾರೆ. ನಾವು ಅದು ಸ್ಥಳದಲ್ಲೇ ಬಗೆಹರಿಯುವುದಾದರೆ ಅದನ್ನು ಅಲ್ಲೆ ಬಗೆಹರಿಸುತ್ತೇವೆ ಇಲ್ಲ ಅದು ಜಟಿಲವಾಗಿದೆ ಎಂದಾದರೆ ಅದನ್ನು ಕೋರ್ಟ್ ಮೂಲಕ ಇತ್ಯರ್ಥಪಡಿಸಲು ಮುಂದಾಗುತ್ತಿದ್ದೇವೆ ಎಂದು ಶಿವರಾಜು ಹೇಳಿದ್ದಾರೆ.