ಬೆಂಗಳೂರು: ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಸಾರಿಗೆ ನೌಕರರಿಗೆ ಲಿಖಿವಾಗಿ ಕೊಟ್ಟಿರುವ ಭರವಸೆ ಈಡೇರಿಸದೆ ಇನ್ನೂ ಮೀನಮೇಷ ಎಣಿಸುತ್ತಿರುವುದಕ್ಕೆ ಸಾರಿಗೆ ನೌಕರರ ಸಮಾನ ಮನಸ್ಕರ ವೇದಿಕೆ ಇಂದು ಒಂದು ದಿಟ್ಟ ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿದು ಬಂದಿದೆ.
ಶುಕ್ರವಾರ ಮಧ್ಯಾಹ್ನನದ ವೇಳೆಗೆ ವೇದಿಕೆ ಪದಾಧಿಕಾರಿಗಳು ತುರ್ತು ಸಭೆ ಸೇರಿ ಒಂದು ಅಂತಿಮ ತೀರ್ಮಾನಕ್ಕೆ ಬಂದಿರುವುದಾಗಿ ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಇನ್ನು ಸರ್ಕಾರಕ್ಕೆ ಬಿಸಿ ಮುಟ್ಟಿಸಲೇ ಬೇಕು. ಕಾರಣ ಇನ್ನು ಕೆಲವೇ ಕೆಲವು ದಿನಗಳಲ್ಲೇ ವಿಧಾನಸಭಾ ಚುನಾವಣೆ ರಾಜ್ಯದಲ್ಲಿ ಘೋಷಣೆ ಆಗುವುದರಿಂದ ನಾವೀಗ ಬಿಟ್ಟರೆ ಮತ್ತೆ ಮುಂದಿನ ಸರ್ಕಾರ ರಚನೆಯಾಗುವವರೆಗೂ ಏನೂ ಮಾಡಲು ಆಗುವುದಿಲ್ಲ. ಹೀಗಾಗಿ ನಮಗೆ ಈ ದಾರಿ ಬಿಟ್ಟು ಬೇರೆ ದಾರಿ ಕಾಣುತ್ತಿಲ್ಲ ಎಂದು ತೀರ್ಮಾನಿಸಿರುವುದಾಗಿ ತಿಳಿದು ಬಂದಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರು ವೇತನ ತಾರತಮ್ಯತೆ ನಿವಾರಣೆಗಾಗಿ ಇದೇ ಮಾ.1ರಿಂದ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಇಂದಿಗೆ ಮೂರನೇ ದಿನಕ್ಕೆ ಕಾಲಿಟ್ಟಿದೆ.
ಆದರೆ, ಈವರೆಗೂ ಧರಣಿ ಸ್ಥಳಕ್ಕೆ ಸರ್ಕಾರ ಯಾವುದೇ ಪ್ರತಿನಿಧಿಗಳನ್ನು ಕಳುಹಿಸದೆ ಉದ್ಧಟತನದಿಂದ ನಡೆದುಕೊಳ್ಳುತ್ತಿದ್ದು, ಇದರಿಂದ ಸಿಟ್ಟಿಗೆದ್ದಿರುವ ನೌಕರರು ಸರ್ಕಾರಕ್ಕೆ ತಕ್ಕ ಉತ್ತರ ನೀಡಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ತುರ್ತು ಸಭೆಯಲ್ಲಿ ತೆಗೆದುಕೊಂಡ ನಿರ್ಧಾರದ ಬಗ್ಗೆ ಧರಣಿ ನಿರತ ಸ್ಥಳದಲ್ಲಿ ಘೋಷಣೆ ಮಾಡುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಲಾಗುವುದು ಎಂದು ನೌಕರರು ಹೇಳುತ್ತಿದ್ದಾರೆ. ಆದರೆ, ತುರ್ತು ಸಭೆಯಲ್ಲಿ ಏನು ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬುವುದು ಇನ್ನು ಗೌಪ್ಯವಾಗಿದೆ.
ಅದನ್ನು ಓಪನ್ಆಗಿ ಧರಣಿ ಸ್ಥಳದಲ್ಲೇ ಹೇಳುತ್ತೇವೆ ಎಂದು ಸಭೆಯಲ್ಲಿ ಭಾಗವಹಿಸಿದ್ದ ಪದಾಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಮತ್ತೊಮ್ಮೆ ಬಸ್ ಬಂದ್ ಆಗುತ್ತದೆಯೋ ಇಲ್ಲವೋ ಎಂಬುದರ ಬಗ್ಗೆ ಇನ್ನು ಕೆಲವೇ ನಿಮಿಷಗಳಲ್ಲಿ ಮಾಹಿತಿ ಹೊರಬೀಳಲಿದೆ.