ಬೆಂಗಳೂರು: ಸಾರಿಗೆ ನೌಕರರ ಸಮಸ್ಯೆ ಪರಿಹಾರ ಸಂಬಂಧ ಚರ್ಚಿಸಲು ಎಂಡಿ ಅಧ್ಯಕ್ಷತೆಯಲ್ಲಿಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸಂಘ ಸೇರಿದಂತೆ ಇತರ ಸಂಘಟನೆಗಳೊಂದಿಗೆ ಡಿ.3ರಂದು ನೌಕರರ ಕುಂದುಕೊರತೆ ಸಭೆ ನಡೆಯಿತು.
ಸಭೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸಂಘದ ಪದಾಧಿಕಾರಿಗಳು ಭಾಗವಹಿಸಿ ಒಟ್ಟು 19 ಪ್ರಮುಖ ಬೇಡಿಕೆಗಳು ಮತ್ತು ಸಮಸ್ಯೆಗಳನ್ನು ಪರಿಹರಿಸುವಂತೆ ಮಂಡಿಸಿದರು. ಅವುಗಳಲ್ಲಿ ಪ್ರಮುಖವಾದವುಗಳೆಂದರೆ…
1) ಮುಷ್ಕರ ಸಂದರ್ಭದಲ್ಲಿ ವಜಾಗೊಂಡ ನೌಕರರನ್ನು ಯಾವುದೇ ಷರತ್ತು ವಿಧಿಸದೆ ಹಿಂಬಾಕಿ ಸಹಿತ ಮರುನೇಮಕ ಮಾಡಿಕೊಳ್ಳುವುದು (06.04.2021 ರ ಯಥಾ ಸ್ಥಿತಿ ಕಾಪಾಡುವುದು).
2) ಸರ್ಕಾರಿ ನೌಕರರಿಗೆ ನೀಡುವ ವೇತನದ ಮಾದರಿಯಲ್ಲಿ ಸಾರಿಗೆ ನೌಕರರಿಗೂ ಸಹ ಸರಿಸಮಾನ ವೇತನವನ್ನು ಜಾರಿಗೊಳಿಸುವುದು.
3) ಸರ್ಕಾರಿ ನೌಕರರಿಗೆ ನೀಡಿರುವ ನಗದು ರಹಿತ ಆರೋಗ್ಯಭಾಗ್ಯ ಯೋಜನೆಯನ್ನು ಸಾರಿಗೆ ನೌಕರರಿಗೆ ಹಾಗೂ ಅವರ ಕುಟುಂಬಸ್ಥರಿಗೂ ಅಳವಡಿಸುವುದು.
4) ಮುಷ್ಕರ ಸಮಯದಲ್ಲಿ ನೌಕರರು ಮತ್ತು ಅವರ ಕುಟುಂಬಸ್ಥರ ಮೇಲೆ ದಾಖಲಿಸಿರುವ ಎಲ್ಲ ಪೊಲೀಸ್ ಪ್ರಕರಣಗಳನ್ನು ಕೈಬಿಡುವುದು.
5) ಮುಷ್ಕರದ ಸಮಯದಲ್ಲಿ ವಜಾಗೊಂಡಿರುವ ನಾಲ್ಕು ನಿಗಮಗಳಾದ ಬಿ.ಎಂ.ಟಿ.ಸಿ., ಕೆ.ಎಸ್.ಆರ್.ಟಿ.ಸಿ., ಕಲ್ಯಾಣ ಕರ್ನಾಟಕ ಮತ್ತು ವಾಯುವ್ಯ ಕರ್ನಾಟಕ ಸಾರಿಗೆ ನಿಗಮಗಳಲ್ಲಿ ಮರು ನೇಮಕವಾಗದೆ ಬಾಕಿ ಇರುವ ನೌಕರರನ್ನು ಮಾನವೀಯತೆಯ ದೃಷ್ಟಿಯಿಂದ ಮರು ನೇಮಕ ಮಾಡಿಕೊಳ್ಳುವುದು.
6) ಆದೇಶದನ್ವಯ ದಿನಾಂಕ: 10-4-2002 ನೇಮಕಗೊಂಡಿರುವ ಎಲ್ಲಾ ನೌಕರರಿಗೂ ಉಪಧನ ಪಾವತಿ ಕಾಯಿದೆ 1972 ರ. ಅನ್ವಯ ಪಾವತಿ ಮಾಡುವುದು. (ಸುತ್ತೋಲೆ ಸಂಖ್ಯೆ: 1274ನ್ನು ರದ್ದುಗೊಳಿಸುವುದು)
7) ನಾಲ್ಕು ನಿಗಮಗಳಲ್ಲಿ ಏಕರೂಪ ಕಾನೂನನ್ನು ಜಾರಿಗೊಳಿಸಿ, ಸಮಾನ ತಪ್ಪಿಗೆ ಸಮಾನ ಶಿಕ್ಷೆ (ಸಿ.ಅಂಡ್ ಆರ್ ತಿದ್ದುಪಡಿ ಮಾಡಿ) ನಿರ್ದಿಷ್ಟ ಸಮಯದಲ್ಲಿ ಎಲ್ಲ ಪ್ರಕರಣಗಳನ್ನು ಇತ್ಯರ್ಥಪಡಿಸುವುದು.
8) ಸಾರಿಗೆ ಸಂಸ್ಥೆಯಲ್ಲಿ 1992ರ ನಂತರ ಕಾರ್ಮಿಕ ಸಂಘಟನೆಗಳ ಚುನಾವಣೆಗಳು ನಡೆದಿರುವುದಿಲ್ಲ. ಆದ್ದರಿಂದ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಚುನಾವಣೆಯನ್ನು ನಡೆಸುವುದು.
9) ಎಲೆಕ್ಟ್ರಿಕ್ ಬಸ್ಸುಗಳಿಗೆ ನಮ್ಮ ಸಂಸ್ಥೆಯ ಚಾಲಕರು ಹಾಗೂ ನಿರ್ವಾಹಕರು ಮತ್ತು ತಾಂತ್ರಿಕ ಸಿಬ್ಬಂದಿಗಳನ್ನು ಸಂಸ್ಥೆಯಿಂದಲೇ ನೇಮಿಸಿಕೊಳ್ಳುವುದು.
10) ಇತ್ತೀಚಿನ ದಿನಗಳಲ್ಲಿ ಸಾರಿಗೆ ಸಂಸ್ಥೆಯಲ್ಲಿ ನೌಕರರ ಮೇಲೆ ಮಾನಸಿಕ ಒತ್ತಡ ಹಾಗೂ ಅಧಿಕಾರಿಗಳ ಕಿರುಕುಳ, ಭ್ರಷ್ಟಾಚಾರದಿಂದ ಅನೇಕ ನೌಕರರು ಅತ್ಮಹತ್ಯೆ ದಾರಿ ಹಿಡಿಯುತ್ತಿದ್ದು, ಮುಂದಿನ ದಿನಗಳಲ್ಲಿ ಇಂತಹ ಆತ್ಮಹತ್ಯೆ ಪ್ರಕರಣಗಳು ಮರುಕಳುಹಿಸದಂತೆ ಸೂಕ್ತ ಸಮಿತಿಯನ್ನು ರಚಿಸುವುದು. ಈ ಸಮಿತಿಯಲ್ಲಿ ಕಾರ್ಮಿಕರು ಹಾಗೂ ಕಾರ್ಮಿಕರ ಮುಖಂಡರು ಮತ್ತು ಉನ್ನತ ಅಧಿಕಾರಿಗಳನ್ನು ನೇಮಿಸುವುದು. ಈ ಸಮಿತಿಯಿಂದ ಉತ್ತಮ ಆಡಳಿತ ವ್ಯವಸ್ಥೆಯನ್ನು ರೂಪಿಸುವುದು.
11) ನೌಕರರಿಗೆ ಮಾಡಿರುವ ಎಲ್.ಎಂ.ಎಸ್. ಪದ್ಧತಿಯಲ್ಲಿ ಅನೇಕ ನ್ಯೂನತೆಗಳಿದ್ದು, ಆ ನ್ಯೂನತೆಗಳನ್ನು ಸರಿಪಡಿಸುವುದು (ಎಫ್.ಎಚ್. ಹಾಗೂ ಎನ್.ಎಚ್. ಹಬ್ಬದ ರಜೆಗಳ ಆಯ್ಕೆಯನ್ನು ನೌಕರರ ವಿವೇಚನೆಗೆ ಬಿಡುವುದು, ಹಿಂದೆ ಇದ್ದ ಪದ್ಧತಿಯನ್ನು ಅನುಸರಿಸುವುದು)
12) ನಮೂನೆ-1 ರಿಂದ ನೌಕರರಿಗೆ ಅನೇಕ ಸಮಸ್ಯೆಗಳಾಗುತ್ತಿದ್ದು, ಆ ನಮೂನೆ- ಇನ್ನು ಈಗಿನ ಕಾಲಘಟಕ್ಕೆ ಅನುಗುಣವಾಗಿ ಸರಿಪಡಿಸುವುದು ಹಾಗೂ & ಗಂಟೆಗಳ ಕಾಲ ನೌಕರರಿಗೆ ಕರ್ತವ್ಯ ನೀಡುವುದು ಹೆಚ್ಚುವರಿ ಕರ್ತವ್ಯ ನಿರ್ವಹಿಸುವ ನೌಕರರಿಗೆ ಓಟಿಯನ್ನು ನೀಡುವುದು.
13) ಮಹಿಳಾ ಹಾಗೂ ಹಿರಿಯ ಚಾಲಕ, ನಿರ್ವಾಹಕರ ಹಿತದೃಷ್ಟಿಯಿಂದ ಎಲ್ಲ ಘಟಕಗಳಲ್ಲೂ ಮೊದಲನೇ ಹಾಗೂ ಎರಡನೇ ಪಾಳಿಯ ಮಾರ್ಗಗಳನ್ನು (ಕೋವಿಡ್-19 ಪೂರ್ವದಂತೆ) ಯಥಾಸ್ಥಿತಿ ಕಾಪಾಡುವುದು.
14)ಮುಷ್ಕರ ಸಮಯದಲ್ಲಿ ವಜಾಗೊಂಡು ಮರು ನೇಮಕವಾಗಿರುವ ನೌಕರರಿಗೂ ಹಾಗೂ ಅಮಾನತುಗೊಂಡು ಬೇರೆ ಘಟಕಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರಿಗೂ ಸಹ ಡ್ಯೂಟಿ ರೋಟಾ ಪದ್ಧತಿಯಲ್ಲಿ ಅವಕಾಶ ನೀಡುವುದು.
15)ತಾಂತ್ರಿಕ ಸಿಬ್ಬಂದಿಗಳಿಗೆ ಇರುವ ಮೂಲವೇತನದ ತಾರತಮ್ಯವನ್ನು ಸರಿಪಡಿಸುವುದು ಹಾಗೂ ಚಾಲನಾ ಸಿಬ್ಬಂದಿಗಳಿಗೆ ನೀಡುವ ಬಾಟಾ ಮತ್ತು ಇನ್ನಿತರ ಸೌಲಭ್ಯಗಳನ್ನು ತಾಂತ್ರಿಕ ಸಿಬ್ಬಂದಿಗಳಿಗೂ ಸಹ ನೀಡುವುದು.
16) ಸರಿಗೆ ನಿಗಮಗಳ ಘಟಕ ಮತ್ತು ಬಸ್ ನಿಲ್ದಾಣಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇದ್ದು, ತಕ್ಷಣವೇ ಸೌಕರ್ಯಗಳನ್ನು ಒದಗಿಸುವುದು.
17) ಅಂತರ್ ನಿಗಮಗಳಲ್ಲಿ ವರ್ಗಾವಣೆಗೊಂಡಿರುವ ಕೆಲವು ವಿಭಾಗಗಳಲ್ಲಿ ಬಾಕಿ ಇರುವ ನೌಕರರನ್ನು ಕೂಡಲೇ ವರ್ಗಾವಣೆ ಮಾಡುವುದು.
18) ಸೇವೆಯಿಂದ ನಿವೃತ್ತಿ ಹೊಂದಿರುವ ನೌಕರರಿಗೆ ಸಂಸ್ಥೆಯಿಂದ ನೀಡಬೇಕಾಗಿರುವ ಎಲ್ಲ ಆರ್ಥಿಕ ಸೌಲಭ್ಯಗಳನ್ನು ಕೂಡಲೇ ನೀಡುವುದು ಮತ್ತು ನಿವೃತ್ತಿ ನಂತರ ನೀಡುವ ಪಿಂಚಣಿಯನ್ನು ಹೆಚ್ಚಿಸುವುದು.
19) ಮುಷ್ಕರ ಸಮಯದಲ್ಲಿ ವಜಾಗೊಂಡು ಸಾವನ್ನಪ್ಪಿರುವಂತಹ ನೌಕರರ ಕುಟುಂಬಸ್ಥರಿಗೆ ಆರ್ಥಿಕ ನೆರವು ಮತ್ತು ಅನುಕಂಪದ ಆಧಾರಿತ ಕೆಲಸವನ್ನು ನೀಡಬೇಕು ಎಂಬ ಬೇಡಿಕೆಗಳನ್ನು ನಿನ್ನೆ ಬೇಲಗ್ಗೆ 11 ಗಂಟೆಯಲ್ಲಿ ನಡೆದ ಸಭೆಯಲ್ಲಿ ಸಂಘದ ಪದಾಧಿಕಾರಿಗಳು ಮಂಡಿಸಿದರು.
ಈ ಎಲ್ಲವನ್ನು ಕೂಲಂಕಶವಾಗಿ ಪರಿಶೀಲಿಸಿ ಆದಷ್ಟು ಶೀಘ್ರದಲ್ಲಿ ಸಮಸ್ಯ ಮತ್ತು ಬೇಡಿಕೆಗಳನ್ನು ಈಡೇರಿಸುವುದಾಗಿ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ ಭರವಸೆ ನೀಡಿದರು ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.