ಬೆಂಗಳೂರು : ಸಾರಿಗೆ ನೌಕರರ ಬೇಡಿಕೆಗಳನ್ನು ಮುಖ್ಯಂಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ್ದ ರಾಜ್ಯ ಬಜೆಟ್‌ನಲ್ಲಿ ನಿರ್ಲಕ್ಷಿಸಲಾಗಿದೆ ಎಂದು ಕಿಡಿಕಾರುತ್ತಿರುವ ಕರ್ನಾಟಕ ರಸ್ತೆ ಸಾರಿಗೆ ನೌಕರರು ಮಾರ್ಚ್ 1 ರಿಂದ ಅನಿರ್ದಿಷ್ಟಾವಧಿ ಧರಣಿ ನಡೆಸಲು ಮುಂದಾಗಿದ್ದಾರೆ.
ರಾಜ್ಯ ಬಜೆಟ್‌ನಿಂದ ನಿರಾಶೆಗೊಂಡಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಸ್ತೆ ಸಾರಿಗೆ ನೌಕರರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಫೆಬ್ರವರಿ 17 ರಂದು ಮಂಡಿಸಿದ ಬಜೆಟ್‌ನಲ್ಲಿ ವೇತನ ಹೆಚ್ಚಳದ ಪ್ರಸ್ತಾವನೆಗಾಗಿ ನೌಕರರು ಕಾತರದಿಂದ ಕಾಯುತ್ತಿದ್ದರು. ಆದರೆ ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ಈ ಕಠಿಣ ನಿರ್ಧಾರಕ್ಕೆ ಬಂದಿರುವುದಾಗಿ ಸಮಾನ ಮನಸ್ಕರ ವೇದಿಕೆ ಪದಾಧಿಕಾರಿ ಮತ್ತು ನೌಕರರ ಕೂಟದ ರಾಜ್ಯಾಧ್ಯಕ್ಷ ಚಂದ್ರಶೇಖರ್‌ತಿಳಿಸಿದ್ದಾರೆ.
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಹಮ್ಮಿಕೊಳ್ಳಲಿರುವ ಅನಿರ್ದಿಷ್ಟಾವಧಿ ಧರಣಿಯಲ್ಲಿ 6 ಸಾವಿರಕ್ಕೂ ಹೆಚ್ಚು ನೌಕರರು ಮತ್ತು ಅವರ ಕುಟುಂಬ ಸದಸ್ಯರು ಭಾಗವಹಿಸುವ ನಿರೀಕ್ಷೆಯಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಸಮಾನ ಮನಸ್ಕರ ವೇದಿಕೆ ನೇತೃತ್ವದ ನೌಕರರು, ವಿಧಾನಸಭೆ ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿಯಾಗುವ ಮುನ್ನವೇ ಸರ್ಕಾರ ವೇತನ ಹೆಚ್ಚಳವನ್ನು ಘೋಷಿಸಬೇಕು ಇಲ್ಲವಾದಲ್ಲಿ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಕೆಕೆಆರ್‌ಟಿಸಿ ಮತ್ತು NWKRTCಯ ನಾಲ್ಕು ಸಾರಿಗೆ ನಿಗಮಗಳ ನೌಕರರ ಸಂಕಷ್ಟಗಳ ಬಗ್ಗೆ ರಾಜ್ಯ ಸರ್ಕಾರ ಈವರೆಗೂ ಗಮನ ಹರಿಸಿಲ್ಲ. ನಾವು ಸೈಕಲ್ ಜಾಥಾ ಮಾಡಿದ್ದೇವೆ ಮತ್ತು ಡಿಸೆಂಬರ್‌ನಲ್ಲಿ ಬೆಳಗಾವಿಯಲ್ಲಿ ಉಪವಾಸ ಸತ್ಯಾಗ್ರಹ ಮಾಡಿದ್ದೇವೆ. ಅಧಿವೇಶನ ನಡೆಯುತ್ತಿರುವಾಗ ಸಾರಿಗೆ ನೌಕರರನ್ನು 7ನೇ ವೇತನ ಆಯೋಗದ ಅಡಿಯಲ್ಲಿ ಪರಿಗಣಿಸಲಾಗುವುದು ಎಂಬ ಪೊಳ್ಳು ಭರವಸೆಗಳು ನಮಗೆ ಸಿಕ್ಕಿವೆ ಎಂದು ಚಂದ್ರಶೇಖರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಜೆಟ್ ನಮ್ಮ ಭರವಸೆಯನ್ನು ಈಡೇರಿಸಿಲ್ಲ, ಇದು ನೌಕರರನ್ನು ಕೆರಳಿಸಿದೆ. ವೇತನ ಪರಿಷ್ಕರಣೆ ಸೇರಿದಂತೆ ರಾಜ್ಯವು ನೀಡಿದ ಭರವಸೆಗಳನ್ನು ಈಡೇರಿಸಬೇಕು ಎಂದು ಹೇಳಿದ್ದಾರೆ.
ಹೆಚ್ಚು ಹೆಚ್ಚು ಉದ್ಯೋಗಿಗಳು ನಮ್ಮೊಂದಿಗೆ ಸೇರಿಕೊಂಡರೆ, ಪ್ರತಿಭಟನೆಯು ಬೇರೆ ಹಂತವನ್ನು ತಲುಪುತ್ತದೆ. ಅಂದರೆ ನಮ್ಮ ಉದ್ದೇಶ ಸಾರ್ವಜನಿಕರಿಗೆ ತೊಂದರೆ ಕೊಡುವುದಲ್ಲ ನಮಗೆ ಆಗುತ್ತಿರುವ ಸಮಸ್ಯೆಯನ್ನು ನಿವಾರಿಸಿಕೊಳ್ಳುವುದಾಗಿ. ಆದರೆ ಅದಕ್ಕೆ ಸರ್ಕಾರ ಈವರೆಗೂ ಸ್ಪಂದಿಸಿಲ್ಲ ಮತ್ತೆ ಸ್ಪಂದಿಸದಿದ್ದರೆ ಬಸ್ ಸೇವೆಗಳ ಮೇಲೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ತಿಳಿಸಿದರು.
ಇನ್ನು ಸರ್ಕಾರ ಈಗಲಾದರೂ ನಮ್ಮ ಬೇಡಿಕೆಗೆ ಸ್ಪಂದಿಸಬೇಕು ಇಲ್ಲದಿದ್ದರೆ ಮುಂದಿನ ಪರಿಣಾವನ್ನು ಎದುರಿಸಲು ಸರ್ಕಾರ ಎಲ್ಲರೀತಿಯಲ್ಲೂ ಸಿದ್ಧವಾಗಬೇಕು ಎಂ ಖಡಕ್‌ಎಚ್ಚರಿಕೆಯನ್ನು ನೌಕರರು ಕೊಟ್ಟಿದ್ದಾರೆ.