ಬೆಂಗಳೂರು: ಸಚಿವ ಸುನೀಲ್ ಕುಮಾರ್ ಅವರನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದಕ್ಕೆ ಆಮ್ ಆದ್ಮಿ ಪಾರ್ಟಿ ಮುಖಂಡ ಹಾಗೂ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ವಿರೋಧ ವ್ಯಕ್ತಪಡಿಸಿದ್ದು, ರಾಜಕೀಯೇತರ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿ ನೇಮಿಸಬೇಕು ಎಂದು ಆಗ್ರಹಿಸಿದ್ದಾರೆ.
ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಇಂದು ಆಯೋಜಿಸಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಎಎಪಿ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು, “ಕನ್ನಡ ಅಭಿವೃದ್ಧಿ ಪ್ರಾಧಿಕಾರವು ನಾಡಿನ ಅಸ್ಮಿತೆ ಕಾಪಾಡುವ ಸಂಸ್ಥೆ. ಇದು ಬಹುಕಾಲದಿಂದ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಕಾರ್ಯಕ್ರಮಗಳನ್ನು ನಡೆಸುತ್ತಾ ಮತ್ತು ಅದಕ್ಕೆ ಪೂರಕವಾದ ವಾತಾವರಣ ನಿರ್ಮಿಸುತ್ತಾ ಬಂದಿದೆ.
ಸಾರ್ವಜನಿಕ ವಲಯದಲ್ಲಿ ಕನ್ನಡ ಭಾಷೆಗೆ ಅಪಮಾನ ಅಥವಾ ಅನ್ಯಾಯವಾದಾಗ ಪ್ರಾಧಿಕಾರ ಪ್ರಶ್ನೆ ಮಾಡಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು, ಸಚಿವರನ್ನೂ ಬಿಟ್ಟಿಲ್ಲ. ಇದು ಮುಂದುವರಿಯಬೇಕಾದರೆ ರಾಜಕೀಯೇತರ ವ್ಯಕ್ತಿಯೇ ಪ್ರಾಧಿಕಾರದ ಅಧ್ಯಕ್ಷರಾಗಿರಬೇಕು” ಎಂದು ಆಗ್ರಹಿಸಿದರು.
“ಕನ್ನಡ ನೆಲ, ಜಲ, ನುಡಿ ವಿಚಾರ ಬಂದಾಗಲೆಲ್ಲ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕರ್ತವ್ಯ. ರಾಜಕೀಯ ಸಿದ್ಧಾಂತಗಳನ್ನು ಬದಗಿಟ್ಟು ಕೇವಲ ಭಾಷಾಭಿಮಾನದಿಂದ ಕೆಲಸ ಮಾಡುವ ವ್ಯಕ್ತಿ ಅದರ ಅಧ್ಯಕ್ಷರಾಗಬೇಕು. ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿದ್ದರೂ ಹಿಂದಿ ಹೇರಿಕೆ, ಕನ್ನಡಿಗರಿಗೆ ಉದ್ಯೋಗದಲ್ಲಾಗುತ್ತಿರುವ ಮೋಸ, ಗಡಿನಾಡ ಕನ್ನಡಿಗರ ಮೇಲೆ ಆಗುತ್ತಿರುವ ದೌರ್ಜನ್ಯ ಮುಂತಾದವುಗಳನ್ನು ವಿರೋಧಿಸದ ಪ್ರಭಾವಿ ಸಚಿವರು ಪ್ರಾಧಿಕಾರದ ಅಧ್ಯಕ್ಷರಾಗಿರುವುದು ಕಳವಳಕಾರಿ” ಎಂದು ಮುಖ್ಯಮಂತ್ರಿ ಚಂದ್ರು ಹೇಳಿದರು.
“ರಾಜಕಾರಣವನ್ನೇ ಪೂರ್ಣಾವಧಿ ಕೆಲಸ ಮಾಡಿಕೊಂಡಿರುವ ಸುನೀಲ್ ಕುಮಾರ್ ಅವರು ಎರಡು ದೊಡ್ಡ ಇಲಾಖೆಗಳ ಸಚಿವರು. ಅದರ ಜತೆಗೆ ಪ್ರಾಧಿಕಾರದ ಕೆಲಸ ಮಾಡಲು ಅವರಿಗೆ ಸಾಧ್ಯವಾಗುವುದೂ ಇಲ್ಲ. ರಾಜಕಾರಣದ ಹಂಗಿಲ್ಲದೇ ಕಾರ್ಯನಿರ್ವಹಿಸುವ ವ್ಯಕ್ತಿಯನ್ನು ಶೀಘ್ರವೇ ಪ್ರಾಧಿಕಾರದ ಅಧ್ಯಕ್ಷ ಹುದ್ದೆಗೆ ನೇಮಿಸಬೇಕು. ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಪತ್ರ ಬರೆದು ಆಗ್ರಹಿಸಿದ್ದೇನೆ ಎಂದು ತಿಳಿಸಿದರು.