ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿಗಳು ನಾಲ್ಕೂ ನಿಗಮಗಳ ಅಧಿಕಾರಿಗಳು ಮತ್ತು ನೌಕರರ ವೇತನ ಪರಿಷ್ಕರಣೆ ಸಂಬಂಧ ಮಾರ್ಚ್ 1ರಂದು ಸಭೆ ಕರೆದಿದ್ದಾರೆ.
ವೇತನ ಪರಿಷ್ಕರಣೆ ಸಂಬಂಧ ಚರ್ಚಿಸಲು ನಿಗಮದ ಸೂಕ್ತಾಧಿಕಾರಿಗಳ ಆದೇಶ ಮೇರೆಗೆ ಈ ಸಭೆ ನಡೆಸಲಾಗುತ್ತಿರುವುದಾಗಿ ಸೋಮವಾರ ಮಾಹಿತಿ ನೀಡಿರುವ ಅಧಿಕಾರಿಗಳು, 4 ರಸ್ತೆ ಸಾರಿಗೆ ನಿಗಮಗಳ ನೌಕರರ ವೇತನ ಪರಿಷ್ಕರಣೆ ಸಂಬಂಧ ಸಮಾನ ಮನಸ್ಕರ ವೇದಿಕೆ ಪದಾಧಿಕಾರಿಗಳೊಂದಿಗೆ ಚರ್ಚಿಸಲು ದಿನಾಂಕ ನಿಗದಿಪಸಿದ್ದಾರೆ.
ಅದರಂತೆ ಮಾ.1ರಂದು ಅಪರಾಹ್ನ 3 ಗಂಟೆಗೆ ಕರಾರಸಾ ನಿಗಮದ ಕೇಂದ್ರ ಕಚೇರಿ ಸಭಾಂಗಣದಲ್ಲಿ ವ್ಯವಸ್ಥಾಪಕ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಹಾಗೂ BMTC, NWKRTC, KKRTC ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರ ನೇತೃತ್ವದಲ್ಲಿ ಸಮಾನ ಮನಸ್ಕರ ವೇದಿಕೆ ಪದಾಧಿಕಾರಿಗಳೊಂದಿಗೆ ಸಭೆಯನ್ನು ನಿಗದಿಪಡಿಸಲಾಗಿದ್ದು, ವೇದಿಕೆಯ ಪದಾಧಿಕಾರಿಗಳು ಹಾಜರಾಗುವಂತೆ ಕೋರಿದೆ ಎಂದು ನಿಗಮದ ಮುಖ್ಯ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.
ಈ ಸಂಬಂಧ ಪದಾಧಿಕಾರಿಗಳು ನಂ.54, 6ನೇ ಕ್ರಾಸ್, ಪೊಲೀಸ್ ಠಾಣೆ ಹತ್ತಿರ, ವಿಲ್ಸನ್ ಗಾರ್ಡನ್, ಬೆಂಗಳೂರು -560027ಕ್ಕೆ ಸಭೆ ಸೂಚನಾ ಪತ್ರವನ್ನು ಕಳುಹಿಸಿದ್ದಾರೆ.
ಕಳೆದ 2016ರ ಜನವರಿ 1ರಂದು ವೇತನ ಪರಿಷ್ಕರಣೆ ಆಗಿದೆ. ಆ ಬಳಿಕ ಮತ್ತೆ ಈವರೆಗೂ ವೇತನ ಹೆಚ್ಚಳವಿಲ್ಲದೆ ನೌಕರರು ಒಂದು ರೀತಿ ಕತ್ತೆಯಂತೆ ದುಡಿಯುತ್ತಿದ್ದಾರೆ. ಆದರೆ, ಕಳೆದ 2020ರ ಜನವರಿ 1ರಿಂದಲೇ ವೇತನ ಹೆಚ್ಚಳ ಮಾಡಬೇಕಿರುವ ಸರ್ಕಾರ ಈವರೆಗೂ ಮಾಡದೆ ಮೀನಮೇಷ ಎಣಿಸಿಕೊಂಡು ಬಂದಿದ್ದು ಚುನಾವಣೆ ಘೋಷಣೆಗೆ ಬೆರಳೆಣಿಕೆಯಷ್ಟು ದಿನಗಳಿರುವಾಗ ಕೊಟ್ಟ ಮಾತನ್ನು ತಪ್ಪಿರುವ ಸರ್ಕಾರ ಮತ್ತೆ ವೇತನ ಪರಿಷ್ಕರಣೆ ಸಂಬಂಧ ಸಭೆ ಕರೆದು ಚರ್ಚಿಸುವುದಾಗಿ ತಿಳಿಸಿದೆ.
ಈ ರೀತಿ ಹತ್ತಾರು ಸಭೆಗಳನ್ನು ನಾಲ್ಕೂ ನಿಗಮಗಳ ಎಂಡಿಗಳು ಮತ್ತು ಉನ್ನತ ಅಧಿಕಾರಿಗಳ ಮಟ್ಟದಲ್ಲಿ ಸಭೆ ನಡೆಸಿ ಸರ್ಕಾರಕ್ಕೆ ನಡೆದ ಚರ್ಚೆ, ತೆಗೆದುಕೊಂಡ ತೀರ್ಮಾನಗಳ ಬಗ್ಗೆ ಮಾಹಿತಿ ನೀಡಲಾಗುತ್ತಲೇ ಇದೆ. ಆದರೆ, ಈವರೆಗೂ ಏನೂ ಪ್ರಯೋಜನವಾಗಂತಹ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿದಲ್ಲ.
ಇನ್ನು ಇಂದು (ಫೆ.27) ಸಾರಿಗೆ ನೌಕರರ ಜಂಟಿ ಕ್ರಿಯಾಸಮಿತಿ ಪದಾಧಿಕಾರಿಗಳೊಂದಿಗೆ ಸಭೆ ಕರೆಯಲಾಗಿದ್ದು ಆ ಸಭೆಯು ಮಧ್ಯಾಹ್ನ 3 ಗಂಟೆಗೆ ಆರಂಭವಾಗಲಿದೆ ಎಂದು ತಿಳಿದು ಬಂದಿದೆ.