ದಾವಣಗೆರೆ: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಂಗಳವಾರ ಬೆಳಗ್ಗೆ ಮೆಟ್ರೋ ಕಾಮಗಾರಿ ಹಂತದ ಪಿಲ್ಲರ್ ಕುಸಿತದಿಂದ ಸಭವಿಸಿದ ದುರಂತಕ್ಕೆ ಬಲಿಯಾದ ತಾಯಿ- ಮಗುವಿನ ಪಾರ್ಥಿವ ಶರೀರಗಳನ್ನು ದಾವಣಗೆರೆಗೆ ತರಲಾಗಿದ್ದು, ಇಂದು (ಜ.11) ತಾಯಿ ಮಗುವಿನ ಅಂತ್ಯಕ್ರಿಯೆಯನ್ನು ಪ್ರತ್ಯೇಕ ಸ್ಥಳದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ದಾವಣಗೆರೆ ನಗರದ ಕುಂದವಾಡ ರಸ್ತೆಯ ಬಸವೇಶ್ವರ ನಗರದಲ್ಲಿರುವ ಮೃತ ತೇಜಸ್ವಿನಿ ಅವರ ತಂದೆ ಮನೆ ಬಳಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, 10.30ಕ್ಕೆ ನಗರದ ಹಳೇ ಪಿಬಿ ರಸ್ತೆಯಲ್ಲಿ ವೈಕುಂಠಧಾಮದಲ್ಲಿ ಅಗ್ನಿ ಸ್ಪರ್ಶದೊಂದಿಗೆ ತೇಜಸ್ವಿನಿ ಅಂತ್ಯಕ್ರಿಯೆ ನಡೆಯಲಿದೆ. ಮಗುವಿನ ಅಂತ್ಯಕ್ರಿಯೆ ನಗರದ ಬಾಟಲಿ ಬಿಲ್ಡಿಂಗ್ ಹಿಂಭಾಗದ ಸ್ಮಶಾನದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.
ನಡೆದಿದ್ದೇನು: ಮಂಗಳವಾರ ಬೆಳಗ್ಗೆ 10:30ರ ವೇಳೆಗೆ ಗದಗ ಮೂಲದ ಸಿವಿಲ್ ಇಂಜಿನಿಯರ್ ಲೋಹಿತ್, ಪತ್ನಿ ಮತ್ತು ಅವಳಿ ಮಕ್ಕಳೊಂದಿಗೆ ಮನೆಯಿಂದ ಹೊರಟಿದ್ದರು. ಈ ವೇಳೆ ಹೆಣ್ಣೂರು ಬಳಿ ಲೋಹಿತ್ ಕುಟುಂಬವಿದ್ದ ಬೈಕ್ ಮೇಲೆ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ದಿಢೀರ್ ಎಂದು ಕುಸಿದಿದೆ.
ಘಟನೆಯಲ್ಲಿ 35 ವರ್ಷದ ತೇಜಸ್ವಿನಿ, ಎರಡೂವರೆ ವರ್ಷದ ಮಗು ವಿಹಾನ್ ಮೃತಪಟ್ಟಿದ್ದಾರೆ. ಸಣ್ಣಪುಟ್ಟ ಗಾಯಗಳೊಂದಿಗೆ ಲೋಹಿತ್ ಮತ್ತು ಅವರ ಎರಡೂವರೆ ವರ್ಷದ ಮಗಳು ವಿಸ್ಮಿತಾ ಬದುಕುಳಿದಿದ್ದಾರೆ. ದುರಂತಕ್ಕೆ ಕಳಪೆ ಕಾಮಗಾರಿಯೇ ಕಾರಣ ಎಂಬ ಆರೋಪ ಕೇಳಿಬಂದಿದ್ದು, ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಮೆಟ್ರೋ ತಜ್ಞರು ಮೆಟ್ರೋ ಪಿಲ್ಲರ್ ಕುಸಿತಕ್ಕೆ ಕಾರಣಗಳೇನು ಎಂಬ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.