ಹಾಸನ: ನನ್ನ ಪ್ರೀತಿ ನಿರಾಕರಿಸಿ ಅವಮಾನಿಸಿದ್ದಕ್ಕೆ ಆಕೆಯನ್ನು ಮುಗಿಸಲು ಸ್ಕೆಚ್ ಹಾಕಿದ್ದೆ ಎಂದು ಕೊರಿಯರ್ ಶಾಪ್‌ನಲ್ಲಿ ಸಂಭವಿಸಿದ ಮಿಕ್ಸಿ ಸ್ಫೋಟ ಪ್ರಕರಣಕ್ಕೆ ಸಂಬಂಧ ಪೊಲೀಸ್ ವಶದಲ್ಲಿರುವ ಪ್ರಮುಖ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.
ಪ್ರಕರಣದ ಪ್ರಮುಖ ಆರೋಪಿ ಅನೂಪ್ ಕುಮಾರ್ ಎಂಬಾತನನ್ನು ನೆಲಮಂಗಲ ಬಳಿ ಬಂಧಿಸಿದ ಪೊಲೀಸರು ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಬಳಿಕ ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಮಾಹಿತಿ ನೀಡಿದರು.
ಮಿಕ್ಸಿಯಲ್ಲಿ ಡಿಟೋನೇಟರ್ ಹಾಕಿ ಡಿಟೋನೇಟರ್ ಬ್ಲಾಸ್ಟ್ ಮಾಡುವುದು ಹೇಗೆ ಎಂದು ಇಂಟರ್‌ನೆಟ್ ಆರೋಪಿ ಹುಡುಕಿದ್ದ ಆರೋಪಿ ಅನೂಪ್ ಕುಮಾರ್ ರಾಮನಗರದ ಬಳಿಯ ಕ್ವಾರಿಯಲ್ಲಿ ಎರಡು ಡಿಟೋನೇಟರ್‌ಗಳನ್ನು ಕದ್ದು ತಂದಿದ್ದಾನೆ. ಈ ಡಿಟೋನೇಟರ್ ಕಳವು ಪ್ರಕರಣದ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ಎಸ್‌ಪಿ ತಿಳಿಸಿದರು.
ಡಿಸೆಂಬರ್ 16 ರಂದು ಪಾರ್ಸೆಲ್ ಕಳುಹಿಸಲಾಗಿದೆ, ಡಿಸೆಂಬರ್ 26 ರಂದು ಮಿಕ್ಸಿ ಬ್ಲಾಸ್ಟ್ ಆಗಿದೆ. ಆದರೆ ಇದಕ್ಕೂ ಮೊದಲು ಅಂದರೆ ಡಿ.17 ರಿಂದಲೇ ಹಾಸನದಲ್ಲಿ ಮಿಕ್ಸಿ ಬ್ಲಾಸ್ಟ್ ಆಗಿರುವ ಬಗ್ಗೆ ಸುದ್ದಿ ಬಂದಿದೆಯೇ ಎಂದು ಹಲವು ವೆಸ್‌ಸೈಟ್‌ಗಳಲ್ಲಿ ಆರೋಪಿ ಸರ್ಚ್ ಮಾಡುತ್ತಿದ್ದುದಾಗಿ ಬಾಯಿ ಬಿಟ್ಟಿದ್ದಾನೆ. ಇನ್ನು ಆತನ ಮನೆಯಲ್ಲಿದ್ದ ಡಿಟೋನೇಟರ್ ಬ್ಲಾಸ್ಟಿಂಗ್ ವೈರ್ ಕೂಡ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು. [wp-rss-aggregator limit=”1″]
ತಲಘಟ್ಟಪುರದ ಆರೋಪಿ ಮನೆಯಲ್ಲಿ ಮಿಕ್ಸಿಯ ಮೂರನೇ ಜಾರ್ ಪತ್ತೆಯಾಗಿದೆ. ಇನ್ನು ನನ್ನ ಪ್ರೀತಿ ನಿರಾಕರಿಸಿ ಅವಮಾನ ಮಾಡಿದ್ದಕ್ಕೆ ವಸಂತಾಳನ್ನು ಕೊಲೆ ಮಾಡಲು ನಿರ್ಧರಿಸಿದ್ದಾಗಿ ತನಿಖೆ ವೇಳೆ ಆರೋಪಿ ತಪ್ಪೊಪ್ಪಿಕೊಳ್ಳುವ ಮೂಲಕ ಮಿಕ್ಸಿ ಬ್ಲಾಸ್ಟ್ ಗೆ ಬಹುತೇಕ ಸ್ಪಷ್ಟತೆ ಸಿಕ್ಕಂತಾಗಿದೆ. ಆದರೆ ಈ ಬಗ್ಗೆ ಇನ್ನು ಹಲವು ರಿತಿಯಲ್ಲಿ ವಿಚಾರಣೆ ನಡೆಸಬೇಕಿರುವುದರಿಂದ 7 ದಿನಗಳ ಕಾಲ ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ.