ಬೆಂಗಳೂರು: ಕೊರೊನಾ ನೆಪದಲ್ಲಿ ಅಂದಾಜು 10 ಸಾವಿರ ಕೋಟಿ ರೂ.ಗಳಷ್ಟು ಬೃಹತ್ ಹಗರಣವನ್ನು ರಾಜ್ಯ ಬಿಜೆಪಿ ಸರ್ಕಾರ ನಡೆಸಿದ್ದು, ಈ ಹಿನ್ನೆಲೆಯಲ್ಲಿ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಒತ್ತಾಯಿಸಿದ್ದಾರೆ.
ಗುರುವಾರ ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಲ್ಲದೇ ಹೋಮ್ ಐಸೋಲೇಷನ್ ಇರುವವರಿಗೆ ಕಿಟ್ ನೀಡಲಾಗುವುದು ಎಂದು ಹೇಳಿ ಯಾವುದೇ ಕಿಟ್ ನೀಡಿಲ್ಲ. ಆದರೆ ಕಿಟ್ ನೀಡಲಾಗಿದೆ ಎಂದು ಅಂದಾಜು 150 ಕೋಟಿ ಹಣ ದೋಚಲಾಗಿದೆ ಎಂದು ಆರೋಪಿಸಿದ್ದಾರೆ.
ಸರ್ಕಾರವೇ ತಿಳಿಸಿರುವಂತೆ ಕಾಲ್ ಸೆಂಟರ್‌ಗಳ ಮೂಲಕ ಸೋಂಕಿತರಿಗೆ ಫೋನ್ ಕರೆ ಮಾಡಲು ಒಂದು ಕರೆಗೆ 69 ರೂ. ನೀಡಲಾಗುತ್ತಿದೆ. ಸುಮ್ಮನೆ ಅಂದಾಜು ಲೆಕ್ಕ ಹಾಕಿದರೂ 8 ಲಕ್ಷ ಜನರಿಗೆ 5 ಬಾರಿ ಕರೆ ಮಾಡಲು ನೂರಾರು ಕೋಟಿ ರೂ. ವ್ಯಯಿಸಲಾಗಿದೆ. ಹೆಚ್ಚುವರಿಯಾಗಿ 50 ರೂ. ನೀಡಿ ಹಣ ದೋಚಲಾಗಿದೆ ಎಂದು ಗಂಭೀರವಾದ ಆರೋಪ ಮಾಡಿದರು.
ಇನ್ನು ದೀಪಾವಳಿ ಮತ್ತು ದಸರಾ ಹಬ್ಬಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಂಪರ್ ಕೊಡುಗೆ ನೀಡುತ್ತಿದ್ದು ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದೇಶದಲ್ಲಿ ಈವರೆಗೂ 3 ನೇ ಸ್ಥಾನದಲ್ಲಿತ್ತು. ಸೋಂಕಿತರಿಗೆ ಸರಿಯಾದ ಚಿಕಿತ್ಸೆ ನೀಡದ ಕಾರಣ 2 ನೇ ಸ್ಥಾನಕ್ಕೆ ಕೊಂಡೊಯ್ಯುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ದೆಹಲಿ ಮಾದರಿಯನ್ನು ಅನುಸರಿಸಿ ಎಂದು ಸ್ವತಃ ಪ್ರಧಾನಿಗಳೇ ಹೇಳಿದ್ದರೂ ಬಿಎಸ್‌ವೈ ನೇತೃತ್ವದ ರಾಜ್ಯ ಸರ್ಕಾರ ನಿರ್ಲಕ್ಷ್ಯ ಮಾಡಿತು. ವೈಯಕ್ತಿಕವಾಗಿ ನಾನೇ ನಮ್ಮ ರಾಜ್ಯದ ಆರೋಗ್ಯ ಮಂತ್ರಿಗಳಿಗೆ ಕರೆ ಮಾಡಿ, ವಾಟ್ಸ್‌ಆ್ಯಪ್ ಸಂದೇಶ ಕಳುಹಿಸಿದರು ಸ್ಪಂದಿಸಲಿಲ್ಲ ಎಂದರು.
ಕೊರೊನಾ ಸೋಂಕು ನಿಯಂತ್ರ ಹೆಸರಿನಲ್ಲಿ ಸರ್ಕಾರ ಸಾರ್ವಜನಿಕರ ಹಣವನ್ನು ನುಂಗಿ ನೀರುಕುಡಿಯುತ್ತಿದ್ದು, ಈ ಎಲ್ಲದರ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. ಜತೆಗೆ ಹಗರಣದ ಹೊಣೆಯನ್ನು ಹೊತ್ತು ಯಡಿಯೂರಪ್ಪ ಅವರು ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಒಂದು ವೇಳೆ ರಾಜೀನಾಮೆ ನೀಡದಿದ್ದರೆ ಮುಂದಿನ ದಿನಗಳಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಪೃಥ್ವಿ ರೆಡ್ಡಿ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು ಘಟಕದ ಅಧ್ಯಕ್ಷ ಮೋಹನ್ ದಾಸರಿ, ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ, ಮುಖ್ಯ ವಕ್ತಾರ ಶರತ್ ಖಾದ್ರಿ ಇದ್ದರು.
ನಿಮ್ಮ ಪತ್ರಿಕೆ ತುಂಬಾ ಚನ್ನಾಗಿ ಮೂಡಿಬರುತ್ತಿದೆ.
ನಿಮ್ಮ ಪ್ರತಿಕ್ರಿಯೆಯಿಂದ ಹೃದಯ ತುಂಬಿಬಂದಿದೆ ನೀವು ನೀಡುತ್ತಿರುವ ಪ್ರೋತ್ಸಾಹ ಸದಾ ಹೀಗೆ ಇರಲಿ. ನಾವು ತಪ್ಪು ಮಾಡಿದರೆ ಎಚ್ಚರಿಕೆಯನ್ನೂ ನೀಡಿ, ತಿದ್ದಿಕೊಳ್ಳುತ್ತೇವೆ. ಧನ್ಯವಾದವಾಗಳು