ವಿಜಯಪಥ ಕ್ರಿಕೆಟ್
ಸಿಡ್ನಿ: ಸವ್ಯಸಾಚಿ ರವೀಂದ್ರ ಜಡೇಜಾ ಮತ್ತು ಆರಂಭಿಕ ಗಿಲ್ ಅವರ ಅರ್ಧ ಶತಕದ ನೆರವಿನಿಂದ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತವು ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ತಿರುಗಿ ಬಿದ್ದಿದೆ.
ಹೆಣೆದ ಸ್ಪಿನ್ ಬಲೆಗೆ ಮರುಳಾದ ಆಸ್ಟ್ರೇಲಿಯಾ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತದ ವಿರುದ್ಧ ಭಾರೀ ಮೊತ್ತ ಕಲೆ ಹಾಕುವಲ್ಲಿ ವಿಫಲವಾಯಿತು.
ಆತಿಥೇಯರ 338 ರನ್ನುಗಳ ಮೊದಲ ಸರದಿಯ ಸವಾಲಿಗೆ ಉತ್ತರವಾಗಿ ಎರಡನೇ ದಿನದ ಆಟದ ಅಂತ್ಯಕ್ಕೆ ಭಾರತವು 2 ವಿಕೆಟ್ ಕಳೆದುಕೊಂಡು 96 ರನ್ ಮಾಡಿತ್ತು.
ತಮ್ಮ ಎರಡನೇ ಪಂದ್ಯ ಆಡುತ್ತಿರುವ ಶುಭಮನ ಗಿಲ್ ಆಕರ್ಷಕ ಆಟದ ಪ್ರದರ್ಶನ ನೀಡಿ ಬರೋಬ್ಬರಿ 50 ರನ್ ಗಳಿಸಿದರು.
ಈ ಟೆಸ್ಟ್‌ಗಾಗಿ ಭಾರತದಿಂದ ಹಾರಿ ಬಂದ ರೋಹಿತ್ ಶರ್ಮಾ ಕೇವಲ 26 ರನ್ ಗಳಿಸಿ (77 ಎಸೆತ) ನಿರ್ಗಮಿಸಿದರು.
ಇದಕ್ಕೆ ಮುನ್ನ 2 ವಿಕೆಟ್ ನಷ್ಟಕ್ಕೆ 166 ರನ್ನುಗಳ ಸುಸ್ಥಿತಿಯೊಂದಿಗೆ ದಿನದ ಆಟ ಆರಂಭಿಸಿದ ಆಸ್ಟ್ರೇಲಿಯಾ ಎರಡನೇ ಅವಧಿಯಲ್ಲಿ ಪಟಪಟನೆ ಐದು ವಿಕೆಟ್ ಕಳೆದುಕೊಂಡು ಸಾಧಾರಣ ಮೊತ್ತಕ್ಕೆ ಕುಸಿಯಿತು.
ಮೊದಲ ಅವಧಿಯಲ್ಲಿ ಮೂರು ವಿಕೆಟ್ ಕಳೆದುಕೊಂಡ ತವರು ತಂಡ ಭೋಜನಾ ನಂತರದ ಆಟದಲ್ಲಿ ಉಳಿದ ಐದು ವಿಕೆಟ್ ಕೈಚೆಲ್ಲಿತು. ಈ ಕುಸಿತದ ನಡುವೆಯೂ ಮಾಜಿ ನಾಯಕ ಸ್ಟೀವ್ ಸ್ಮಿತ್ ಭರ್ಜರಿ ಶತಕ (131) ದಾಖಲಿಸಿ ಗಮನ ಸೆಳೆದರು. ಅಜೇಯರಾಗಿದ್ದ ಮತ್ತೋರ್ವ ದಾಂಡಿಗ ಲಾಬುಶೆನ್ 91 ರನ್ ಮಾಡಿದರು.
ಆಸ್ಟ್ರೇಲಿಯಾದ ಈ ಮಹಾ ಕುಸಿತಕ್ಕೆ ನಾಲ್ಕು ವಿಕೆಟ್ ಕಬಳಿಸಿದ ಜಡೇಜಾ ಮೂಲ ಕಾರಣ ಎನಿಸಿದರು. ಉಳಿದಂತೆ ಜಸ್ಪ್ರೀತ್ ಬುಮ್ರಾ ಮತ್ತು ನವದೀಪ್ ಸೈನಿ ತಲಾ 2 ವಿಕೆಟ್ ಉರುಳಿಸಿದರು.
ಕೊಹ್ಲಿ ಸರಿಗಟ್ಟಿದ ಸ್ಮಿತ್
ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ 27ನೇ ಶತಕ ದಾಖಲಿಸಿದ ಸ್ಮಿತ್ ಭಾರತದ ಎಂದಿನ ನಾಯಕ ವಿರಾಟ್ ಕೊಹ್ಲಿ ಅವರ ಶತಕ ಗಳಿಕೆಯನ್ನು ಸಮಗೊಳಿಸಿದರು. ಇದಲ್ಲದೇ ಟಾನ್ ಬ್ರಾಡ್ಮನ್ ನಂತರ ಅತಿ ವೇಗವಾಗಿ 27 ಶತಕ ದಾಖಲಿಸಿದ ಹಿರಿಮೆಗೂ ಸ್ಮಿತ್ ಪಾತ್ರರಾಗಿದ್ದಾರೆ.
ಡಾನ್ ಬ್ರಾಡ್ಮನ್ 70 ಇನ್ನಿಂಗ್ಸ್ ನಲ್ಲಿ ಈ ಸಾಧನೆ ಮಾಡಿದ್ದರೇ, ಸ್ಟೀವ್ ಸ್ಮಿತ್ ಅವರು ಇದಕ್ಕಾಗಿ 136 ಇನ್ನಿಂಗ್ಸ್ ತೆಗೆದುಕೊಂಡಿದ್ದಾರೆ. ಇದೇ ವೇಳೆ ತಮ್ಮ 27ನೇ ಟೆಸ್ಟ್ ಶತಕ ಬಾರಿಸಲು ವಿರಾಟ್ ಕೊಹ್ಲಿ ಅವರು 141 ಇನಿಂಗ್ಸ್ ತೆಗೆದುಕೊಂಡಿದ್ದರು.