ವಿಜಯಪಥ ಸಮಗ್ರ ಸುದ್ದಿ
ಬಾಗಲಕೋಟೆ: ಮಹಾಮಾರಿ ಕೊರೊನಾ ಸೋಂಕು ಇಡೀ ಕುಟುಂಬವನ್ನೇ ಬಲಿ ಪಡೆದಿದೆ. ಅಪ್ಪ, ಅಮ್ಮ, ಪತಿ ಮತ್ತು ಪತ್ನಿ ಮೇ 3ರಿಂದ ಮೇ15ರೊಳಗೆ ಕೋವಿಡ್‌ಗೆ ಪ್ರಾಣತೆತ್ತಿದ್ದು ಇಡೀ ಕುಟುಂಬವೇ ಕೊರೊನಾಗೆ ಬಲಿಯಾಗಿದೆ.
ಬಾಗಲಕೋಟೆ ತಾಲೂಕಿನ ದೇವಿನಾಳ ಗ್ರಾಮದ ವೆಂಕಟೇಶ್ ಒಂಟಗೋಡಿ(45), ವೆಂಕಟೇಶ್ ಪತ್ನಿ ಶಿಕ್ಷಕಿ ರಾಜೇಶ್ವರಿ(40), ಮಾವ(ರಾಜೇಶ್ವರಿ ಅಪ್ಪ) ರಾಮನಗೌಡ ಉದಪುಡಿ(74), ಅತ್ತೆ(ರಾಜೇಶ್ವರಿ ತಾಯಿ) ಲಕ್ಷ್ಮೀಬಾಯಿ(68) ಮೃತರು.
ಮೇ 3 ರಿಂದ 15 ರ ಅವಧಿಯಲ್ಲಿ ಬಾಗಲಕೋಟೆ ನಗರದ ವಿವಿಧ ಖಾಸಗಿ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಇವರೆಲ್ಲರೂ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸಾಲಹಳ್ಳಿಯಲ್ಲಿ ಇದ್ದರು. ರಾಜೇಶ್ವರಿ ಸಾಲಹಳ್ಳಿಯಲ್ಲಿ ಶಿಕ್ಷಕಿಯಾಗಿದ್ದು, ಪತಿ ವೆಂಕಟೇಶ್ ರಾಮದುರ್ಗದಲ್ಲಿ ಹಾಸ್ಟೇಲ್ ಸೂಪರಿಂಟೆಂಡೆಂಟ್ ಆಗಿದ್ದರು. ಹೀಗಾಗಿ ಪತ್ನಿ ಊರು ಸಾಲಹಳ್ಳಿಯಲ್ಲೆ ಮನೆ ಮಾಡಿದ್ದರು.
ವೆಂಕಟೇಶ್ ಅವರ ಮಾವ ನಿವೃತ್ತ ಶಿಕ್ಷಕರಾಗಿದ್ದು, ರಾಜೇಶ್ವರಿಗೆ ಮೊದಲು ಕೊರೊನಾ ಲಕ್ಷಣ ಕಾಣಿಸಿಕೊಂಡಿತ್ತು. ಬಳಿಕ ರಾಜೇಶ್ವರಿ ತಂದೆ, ತಾಯಿ, ಪತಿ ಸೇರಿ ನಾಲ್ವರು ಕೊರೊನಾ ಚಿಕಿತ್ಸೆಗಾಗಿ ಬಾಗಲಕೋಟೆಯಲ್ಲಿ ವಿವಿಧ ಖಾಸಗಿ ಆಸ್ಪತ್ರೆ ದಾಖಲಾಗಿದ್ದರು. ಮೇ 3 ರಂದು ರಾಜೇಶ್ವರಿ ಮೃತಪಟ್ಟಿದ್ದಾರೆ. ಮೇ 5 ರಂದು ತಂದೆ ರಾಮನಗೌಡ, ಮೇ 12 ರಂದು ತಾಯಿ ಲಕ್ಷ್ಮೀಬಾಯಿ ಹಾಗೂ ಮೇ 15 ರಂದು ಪತಿ ವೆಂಕಟೇಶ್ ಅಸುನೀಗಿದ್ದಾರೆ.
ವೆಂಕಟೇಶ್ ಅವರ ಪತ್ನಿ ರಾಜೇಶ್ವರಿ ಇತ್ತೀಚೆಗೆ ಬೆಳಗಾವಿ ಉಪಚುನಾವಣೆಯಲ್ಲಿ ಎಲೆಕ್ಷನ್ ಡ್ಯೂಟಿ ಮಾಡಿದ್ರು. ಅಲ್ಲಿಂದ ಬಂದ ಬಳಿಕ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು. ಆ ಬಳಿಕ ಎಲ್ಲರಲ್ಲೂ ಕೋವಿಡ್ ಲಕ್ಷಣಗಳು ಕಾಣಿಸಿಕೊಂಡಿದ್ವು. ಬಾಗಲಕೋಟೆ ಖಾಸಗಿ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಎರಡು ವಾರದ ಅಂತರದಲ್ಲಿ ನಾಲ್ವರನ್ನು ಡೆಡ್ಲಿ ಕೊರೊನಾ ಬಲಿ ತೆಗೆದುಕೊಂಡಿದೆ.