ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಕರ್ನಾಟಕ ಯುವ ಕಾಂಗ್ರೆಸ್ ಸಮಿತಿಯ ಅಡಿಯಲ್ಲಿ ಅಪಾಯಕಾರಿ ಸ್ಟೆರಾಯ್ಡ್ ಅಂಶವಿರುವ ಡೆಕ್ಸಾಜಾಕ್ಸ್ ಸೇರಿದಂತೆ ಕೋವಿಡ್ ಸೋಂಕಿತರು ತೆಗೆದುಕೊಳ್ಳಬಹುದಾದ ಔಷಧಗಳನ್ನು ಹೋಂ ಐಸೋಲೇಷನ್ ಕಿಟ್ ಗಳಲ್ಲಿ ಹಂಚುವ ಮೂಲಕ ಪ್ರಾಣ ಹಾನಿ ಉಂಟುಮಾಡಲು ಕೆಪಿಸಿಸಿ ಹೊರಟಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿಯವರು ಕೆಪಿಸಿಸಿ ವಿರುದ್ಧ ಕಿಡಿಕಾರಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದರಲ್ಲಿ ಮಾಡಿರುವ ದಿಕ್ಸಾಜಾಕ್ಸ್ ಎಂಬ 0.5 ಮಿ.ಗ್ರಾಂ ಗುಳಿಗೆಯನ್ನು ದಿನಕ್ಕೆ ಒಂದರಂತೆ ಸಂಜೆ ಐದು ದಿನಗಳ ಕಾಲ ತೆಗೆದುಕೊಳ್ಳಲು ಸೂಚಿಸಲಾಗಿದೆ. ಅಪಾಯಕಾರಿಯಾದ ಈ ಔಷಧಿಯನ್ನು ಜನತೆಗೆ ನೀಡುತ್ತಿರುವ ಕೆಪಿಸಿಸಿ ಸಂಕಷ್ಟದ ಸಮಯದಲ್ಲಿ ಜೀವದ ಜೊತೆ ಚೆಲ್ಲಾಟ ಆಡಲು ಹೊರಟಿದೆ ಎಂದು ಆರೋಪಿಸಿದರು.
ಉರಿಯೂತವನ್ನು ಕಡಿಮೆ ಮಾಡಲು ಬಳಸುವ ಡೆಕ್ಸಾಮ್ಯಾಥಾಸಿನ್ (Dexamethasone) ಒಂದು ಕಾರ್ಟಿಕೊಸ್ಟೆರಾಯ್ಡ್. ಇದು ದೇಹದಲ್ಲಿ ಉತ್ಪಾದನೆಯಾಗುವ ಅಡ್ರಿನಲ್ ಗ್ರಂಥಿಗಳು ಉತ್ಪಾದಿಸುವ ಹಾರ್ಮೋನ್ ನಂತೆ ಕೆಲಸ ಮಾಡುತ್ತದೆ. ದೇಹದಲ್ಲಿ ಈ ಹಾರ್ಮೋನ್ ಅಂಶ ಸಾಕಷ್ಟು ಇಲ್ಲದ ಸಂದರ್ಭದಲ್ಲಿ ಈ ಔಷಧ ನೀಡಲಾಗುತ್ತದೆ.
ಉರಿಯೂತ, ಅಲರ್ಜಿ, ಅಸ್ತಮಾ, ಕೆಲವು ಬಗೆಯ ಸಂಧಿವಾತ, ಕ್ಯಾನ್ಸರ್ ಗಳಿಗೆ ಔಷಧವಾಗಿ ಬಳಸಲಾಗುತ್ತದೆ. ಇದನ್ನು ತೆಗೆದುಕೊಳ್ಳುವಾಗ ಉಪ್ಪು ಹಾಗೂ ಸೋಡಿಯಂ ಅಂಶ ಕಡಿಮೆ ಇರುವ, ಹೆಚ್ಚು ಪ್ರೊಟೀನ್ ಮತ್ತು ಪೊಟ್ಯಾಷಿಯಂ ಇರುವ ಆಹಾರವನ್ನು ತೆಗೆದುಕೊಳ್ಳಬೇಕು. ಹೊಟ್ಟೆ ನೋವು, ವಾಂತಿ, ಹೊಟ್ಟೆ ಉರಿ, ಖಿನ್ನತೆ, ತಲೆನೋವು ಮೊದಲಾದ ಅಡ್ಡ ಪರಿಣಾಮಗಳು ಕಾಣಿಸಿಕೊಳ್ಳುವುದರಿಂದ ವೈದ್ಯರ ಸಲಹೆ ಹೊರತಾಗಿ ಡೆಕ್ಸಾಮ್ಯಾಥಾಸಿನ್ ತೆಗೆದುಕೊಳ್ಳುವುದು ಅಪಾಯಕಾರಿ ಎಂದರು.
ಡೆಕ್ಸಾಮ್ಯಾಥಾಸಿನ್ ಒಂದು ಸ್ಟೆರಾಯ್ಡ್ ಆಗಿರುವ ಕಾರಣ ಇದನ್ನು ವಿಶೇಷ ಸಂದರ್ಭದಲ್ಲಿ ಕೋವಿಡ್ ಚಿಕಿತ್ಸೆಗಾಗಿ ವೈದ್ಯರ ಸಲಹೆಯ ಮೇರೆಗೆ ತೆಗೆದುಕೊಳ್ಳಬೇಕು ಮಾತ್ರ ಎಂದು ವಿಶ್ವ ಆರೋಗ್ಯ ಸಂಸ್ಥೆ ಸೂಚಿಸಿದೆ.
ಕೆಪಿಸಿಸಿ ಈ ಔಷಧವನ್ನು ಹೋಂ ಐಸೋಲೇಷನ್ ಕಿಟ್ ಗಳಲ್ಲಿ ಹಂಚಿ ಜನತೆಯ ಜೀವದ ಜೊತೆ ಚೆಲ್ಲಾಟ ಆಡಲು ಹೊರಟಿದೆ. ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಅವರು ಈ ಮೂರ್ಖ ನಡೆಯ ಬಗ್ಗೆ ತಿಳಿದಿಲ್ಲವೆ? ಮಾತ್ರೆಯ ಅಡ್ಡ ಪರಿಣಾಮದಿಂದ ಪ್ರಾಣ ಹಾನಿ ಉಂಟಾದರೆ ಅದರ ಹೊಣೆಯನ್ನು ನೀವೇ ಹೊರಬೇಕಾಗುತ್ತದೆ. ಬಿಜೆಪಿ ಬೆಡ್, ಔಷಧ ನೀಡದೆ ಸೋಂಕಿತರ ಜೀವ ತೆಗೆದರೆ ನೀವು ತಪ್ಪು ಔಷಧ ನೀಡಿ ಜೀವ ತೆಗೆಯಲು ಹೊರಟಿದ್ದೀರಿ ಎಂದು ಟೀಕಿಸಿದರು.