ಬೆಂಗಳೂರು: ನಗರದ ಲಕ್ಕಸಂದ್ರದಲ್ಲಿ 3 ಅಂತಸ್ತಿನ ಕಟ್ಟಡ ಕುಸಿತವಾಗಿದೆ. ಕಟ್ಟಡ ಕುಸಿತ ವೇಳೆ ಪಕ್ಕದ ಮನೆಯಲ್ಲಿ ತಾಯಿ- ಮಕ್ಕಳು ಇದ್ದರು. ಹಳೇ ಕಟ್ಟಡ ಕುಸಿತದಿಂದ ಪಕ್ಕದ ಮನೆಯ ಗೋಡೆಗೆ ಹಾನಿ ಸಂಭವಿಸಿದೆ. ಆದರೆ, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಲಕ್ಕಸಂದ್ರದ 7ನೇ ಮುಖ್ಯರಸ್ತೆ, 14ನೇ ಕ್ರಾಸ್ನಲ್ಲಿನ ಮನೆ ಕುಸಿತಗೊಂಡಿದೆ. ಸುರೇಶ್ ಎಂಬುವವರಿಗೆ ಸೇರಿದ ಹಳೇ ಮನೆ ಕುಸಿತವಾಗಿದೆ. ಈ ಬಗ್ಗೆ ಮೊದಲೇ ಅನುಮಾನ ಇದ್ದ ಕಾರಣ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಂಡಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ. ಕಟ್ಟಡ ಕುಸಿತ ಸ್ಥಳಕ್ಕೆ ಎನ್ಡಿಆರ್ಎಫ್ ತಂಡ ಭೇಟಿ ನೀಡಿ, ಪರಿಶೀಲನೆ ನಡೆಸಿದೆ.
ಕೊನೆಯ ವೇಳೆಯವರೆಗೂ ಕಟ್ಟಡದ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದರಿಂದ ಕಟ್ಟಡದ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಜಂಟಿ ಆಯುಕ್ತ ವೀರಭದ್ರಸ್ವಾಮಿ ತಿಳಿಸಿದ್ದಾರೆ. ಮನೆಯಲ್ಲಿ ವಾಸಿಸುವುದಕ್ಕೆ ಯೋಗ್ಯವಾಗಿ ಇರಲಿಲ್ಲ. ಆದರೂ ಮನೆ ಬಾಡಿಗೆಗೆ ನೀಡಿದ್ದ ಹಿನ್ನೆಲೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಕಟ್ಟಡ ಕುಸಿಯುವ ಮಾಹಿತಿ ಮೊದಲೇ ಗೊತ್ತಾದ ಕಾರಣ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದಿದ್ದರು. ಕಟ್ಟಡ ಕುಸಿತ ಆಗುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರು ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ.
ಕುಸಿದು ಬಿದ್ದ ಕಟ್ಟಡದ ಸುತ್ತಲೂ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಅಗ್ನಿಶಾಮಕದ ದಳದ ಸಿಬ್ಬಂದಿ ಬೆಸ್ಕಾಂ ಲೈನ್ ಬಂದ್ ಮಾಡಿಸಿದ್ದರು. ಇದು ಸುಮಾರು 70 ವರ್ಷಗಳ ಹಳೆಯ ಕಟ್ಟಡವಾಗಿದೆ. ಇಟ್ಟಿಗೆ ಮತ್ತು ಮಣ್ಣಿನಿಂದ ನಿರ್ಮಾಣ ಮಾಡಿದ್ದ ಕಟ್ಟಡ ಇದಾಗಿದೆ. ಇಟ್ಟಿಗೆಗಳು ಹಾಳಾಗಿದ್ದು, ಮಣ್ಣಿನಿಂದ ನಿರ್ಮಿಸಿದ್ದ ಕಟ್ಟಡ ಕುಸಿತವಾಗಿದೆ.
ಕಟ್ಟಡ ಮಾಲೀಕನ ವಿರುದ್ಧ ಎಫ್ಐಆರ್: ಈ ಸಂಬಂಧ ಕಟ್ಟಡ ಮಾಲೀಕ ಸುರೇಶ್ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ. ಘಟನೆ ಬಳಿಕ ಸುರೇಶ್ ಸ್ಥಳಕ್ಕೆ ಬರದೆ ನಾಪತ್ತೆಯಾಗಿದ್ದಾರೆ. ಸುಮೋಟೋ ಕೇಸ್ ದಾಖಲಿಸಿಕೊಂಡಿರುವ ಆಡುಗೋಡಿ ಠಾಣೆ ಪೊಲೀಸರು, ಐಪಿಎಸ್ 336 ರ ಅಡಿಯಲ್ಲಿ ಎಫ್ಐಆರ್ ದಾಖಲು ಮಾಡಿಕೊಂಡಿದ್ದಾರೆ.
ಇಂದು ಬೆಳಗ್ಗೆ 10- 10.30ರ ಸುಮಾರಿಗೆ ಘಟನೆ ನಡೆದಿದೆ. ಈ ಕಟ್ಟಡ ರಾತ್ರಿ ಸಮಯದಲ್ಲಿ ಬಿದ್ದಿದ್ರೆ 40-50 ಜನ ಸಾಯುತ್ತಿದ್ರು. ಮನೆ ಮಾಲೀಕರಿಗೆ ಹೇಳಿದ್ವಿ. ಮನೆಯನ್ನ ತೆರವು ಮಾಡುವಂತೆ ಹೇಳಿದ್ರೂ ಕೇಳಿರಲಿಲ್ಲ. ಅವಾಗವಾಗ ಮನೆಯ ಗೋಡೆಯಿಂದ ಶಬ್ದ ಬರುತ್ತಿತ್ತು.
ಇಂದು ಬೆಳಗ್ಗೆ ಗೋಡೆಯಿಂದ ಮಣ್ಣು ಬೀಳುತ್ತಿತ್ತು. ಮನೆಯನ್ನು ತೆರವು ಮಾಡುವಂತೆ ಬಿಬಿಎಂಪಿಗೂ ಹೇಳಿದ್ವಿ. ಮನೆ ಬೀಳುವಾಗ ನಾವು ಕೂಡ ನಮ್ಮ ಮನೆಯಲ್ಲಿ ಇದ್ವಿ. ನಮ್ಮ ಮನೆಯಲ್ಲೂ ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ಇದ್ವಿ.
ಆದರೆ ನಾವು ಪ್ರಣಾಪಾಯದಿಂದ ಪಾರಾಗಿದ್ದೀವಿ. ನಂಜಪ್ಪ ಎನ್ನುವವರು 1974ರಲ್ಲಿ ಈ ಮನೆಯನ್ನ ಕಟ್ಟಿಸಿದ್ರು. ಇತ್ತೀಚೆಗೆ ಅವರು ಈ ಮನೆಯನ್ನು ಬಾಡಿಗೆಗೆ ಕೊಟ್ಟಿದ್ದರು ಎಂದು ಲಕ್ಕಸಂದ್ರದ ಸ್ಥಳೀಯರು ಮಾಹಿತಿ ನೀಡಿದ್ದಾರೆ.
ನಗರದ ಲಕ್ಕಸಂದ್ರದಲ್ಲಿ 3 ಅಂತಸ್ತಿನ ಕಟ್ಟಡ ಕುಸಿತವಾಗಿದೆ. ರಾತ್ರಿ ವೇಳೆ ಕಟ್ಟಡ ಬಿದ್ದಿದ್ದರೆ ಹೆಚ್ಚು ಜನ ಸಾಯುತ್ತಿದ್ದರು. 40ಕ್ಕೂ ಹೆಚ್ಚು ಜನ ಸಾಯುತ್ತಿದ್ದರೆಂದು ತಿಳಿಸಿದ್ದಾರೆ.