ವಿಜಯಪಥ ಸಮಗ್ರ ಸುದ್ದಿ
ಮೈಸೂರು: ಮೇಯರ್ ಆಗಿದ್ದ ಅವಧಿಯಲ್ಲಿ ಸದಸ್ಯತ್ವ ರದ್ದಾಗಿರುವುದು 38 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲು. ಇದು ನೋವಿನ ಸಂಗತಿ. ಇಂತಹ ಸಂದರ್ಭದಲ್ಲಿ ಹಂಗಾಮಿ ಮೇಯರ್ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದೆ. ಸಿಕ್ಕ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳುತ್ತೇನೆ ಎಂದು ಉಪಮೇಯರ್ ಅನ್ವರ್‌ಬೇಗ್ ತಿಳಿಸಿದರು.
ಬುಧವಾರ ಸಂಜೆ ನಗರಪಾಲಿಕೆ ಆಯುಕ್ತರಿಂದ ಹಂಗಾಮಿ ಮೇಯರ್ ನೇಮಕಾತಿ ಆದೇಶ ಪಡೆದು ಅಧಿಕಾರ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ವಾತನಾಡಿದರು. ಜೂ.11ರ ವರೆಗೆ ಹಂಗಾಮಿ ಮೇಯರ್ ಸೇವೆ ಸಲ್ಲಿಸಲಿದ್ದೇನೆ. ಕೋವಿಡ್ ಸಂದರ್ಭದಲ್ಲಿ ಜನರ ಪ್ರಾಣ ಉಳಿಸಲು ತುರ್ತಾಗಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಗಮನ ಹರಿಸುತ್ತೇನೆ ಎಂದು ತಿಳಿಸಿದರು.
ವಲಯ ಕಚೇರಿ ಮಟ್ಟದಲ್ಲಿ ಅಧಿಕಾರಿಗಳು ಹಾಗೂ ಸ್ಥಳೀಯ ನಗರಪಾಲಿಕೆ ಸದಸ್ಯರ ಸಭೆ ಕರೆದು ಕೋವಿಡ್ ನಿರ್ವಹಣೆಗೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಗುರುವಾರದಿಂದಲೇ ಸಭೆ ನಡೆಸುತ್ತೇನೆ. ಅದರ ಜೊತೆಗೆ ನಗರದ ಅಭಿವೃದ್ಧಿ ಬಗ್ಗೆ ಅಧಿಕಾರಿಗಳು ಕೈಗೊಂಡಿರುವ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸುತ್ತೇನೆ ಎಂದು ಹೇಳಿದರು.
ಜೂ.11 ರಂದು 12 ಗಂಟೆಗೆ ಚುನಾವಣೆ ನಿಗದಿಯಾಗಿದೆ. ಸರ್ಕಾರ ಲಾಕ್‌ಡೌನ್ ಮುಂದುವರಿಸಿದಲ್ಲಿ ಪ್ರಾದೆಶಿಕ ಆಯುಕ್ತರ ಜೊತೆ ಚರ್ಚಿಸಿ ಚುನಾವಣೆ ನಡೆಸಬೇಕೇ? ಅಥವಾ ಮುಂದೂಡಬೇಕೆ ಎಂಬ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ತಿಳಿಸಿದ್ದಾರೆ.