ವಿಜಯಪಥ ಸಮಗ್ರ ಸುದ್ದಿ
ಬೀದರ್: ನಮ್ಮದು ರೈತರ ಪಕ್ಷ, ನಾನು ಸಹಕಾರ ಸಚಿವನಾಗಿದ್ದಾಗ ರಾಜ್ಯದ ಒಳಿತಿಗಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದೆ. ಕೃಷಿ ಸಚಿವನಾಗಿದ್ದಾಗ ರೈತರ ಸಾಲ ಮನ್ನಾ ಮಾಡಿದ್ದೆ. ಮೋದಿಯವರು ರೈತರಿಗೆ ಎರಡು ಸಾವಿರ ರೂಪಾಯಿ ಕೊಡಲು ಹರಸಾಹಸ ಪಡುತ್ತಿದ್ದಾರೆ ಎಂದು ಜೆಡಿಎಸ್ ಮುಖಂಡ, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಬಂಡೆಪ್ಪ ಕಾಶೆಂಪೂರ್ ಹೇಳಿದ್ದಾರೆ.
ಬಸವಕಲ್ಯಾಣ ವಿಧಾನ ಸಭಾ ಕ್ಷೇತ್ರದ ಬಸವಕಲ್ಯಾಣ, ಹತ್ಯಾಳ, ಹಾರಕೂಡ, ಸಿರಗಾಪೂರ, ಗದಲೇಗಾಂವ್, ಮೈಸಲಗಾ ಸೇರಿ ವಿವಿಧ ಹಳ್ಳಿಗಳಲ್ಲಿ ಜೆಡಿಎಸ್ ಅಭ್ಯರ್ಥಿ ಸೈಯದ್ ಯಸ್ರಬ್ ಅಲಿ ಖಾದ್ರಿ ಪರ ಮತ ಪ್ರಚಾರ ನಡೆಸಿ ಮಾತನಾಡಿದರು.
ಬಸವಣ್ಣನ ನಾಡಾದ ಬಸವಕಲ್ಯಾಣದಲ್ಲಿ ಜಾತ್ಯತೀತವಾಗಿ ಎಲ್ಲರೂ ಪ್ರಾದೇಶಿಕ ಪಕ್ಷವಾದ ಜಾತ್ಯತೀತ ಜನತಾದಳಕ್ಕೆ ಮತ ನೀಡಬೇಕೆಂದು ಮನವಿ ಮಾಡಿದರು.
ರಾಜ್ಯಕ್ಕೆ ಒಳ್ಳೆಯದಾಗಬೇಕು ಎಂದರೆ ಮೊದಲು ಎರಡು ರಾಷ್ಟ್ರೀಯ ಪಕ್ಷಗಳು ಮನೆಗೆ ಹೋಗಬೇಕು. ಪ್ರಾದೇಶಿಕ ಪಕ್ಷ ಜೆಡಿಎಸ್ ಅಧಿಕಾರಕ್ಕೆ ಬರಬೇಕು. ಈ ನಿಟ್ಟಿನಲ್ಲಿ ಕ್ಷೇತ್ರದ ಪ್ರತಿ ಮತದಾರರೂ ಮತ್ತು ಪಕ್ಷದ ಕಾರ್ಯಕರ್ತರು ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ರಾಜ್ಯದಿಂದ ಆಯ್ಕೆಯಾದ 25 ಮಂದಿ ಬಿಜೆಪಿ ಎಂಪಿಗಳು ರಾಜ್ಯದ ಪರವಾಗಿ ರಾಜ್ಯದ ಜನತೆಯ ಪರವಾಗಿ ಕೇಂದ್ರದಲ್ಲಿ ಯಾವತ್ತಾದರೂ ಧ್ವನಿ ಎತ್ತಿದ್ದಾರಾ ಎಂದು ಪ್ರಶ್ನಿಸಿರುವ ಕಾಶೆಂಪೂರ್, ಬಸವಕಲ್ಯಾಣದಲ್ಲಿ ಸಾಹೇಬ್, ಬೀದರ್ ನಲ್ಲಿ ಬಂಡೆಪ್ಪ ಕಾಶೆಂಪೂರ್, ಬೆಂಗಳೂರಿನಲ್ಲಿ ಕುಮಾರಣ್ಣ ಯಾವಾಗಲೂ ನಿಮ್ಮ ಕೆಲಸ ಮಾಡಲು ತಯಾರಿದ್ದೇವೆ ಎಂಬ ಭರವಸೆ ನೀಡಿದರು.
ಕಾಂಗ್ರೆಸ್ನವರು ಬಿಜೆಪಿಯವರು ಮ್ಯಾಚ್ ಫಿಕ್ಸಿಂಗ್ ಗಿರಾಕಿಗಳು. ಕಾಂಗ್ರೆಸ್ನವರು ಅಧಿಕೃತವಾಗಿ ವಿರೋಧ ಪಕ್ಷದ ಸ್ಥಾನದಲ್ಲಿದ್ದಾರೆ. ಆದರೆ, ಯಾವತ್ತಾದರೂ ರಾಜ್ಯ ಸರ್ಕಾರದ ಒಂದೇ ಒಂದು ಹಗರಣವನ್ನು ಬಯಲಿಗೆಳೆದಿದ್ದಾರಾ. ಅವರೆಲ್ಲಾ ಬರೀ ಮ್ಯಾಚ್ ಫಿಕ್ಸಿಂಗ್ ಮಾಡಿಕೊಳ್ಳುತ್ತಾರೆ ಎಂದು ಟೀಕಿಸಿದರು.