ಕಲಬುರಗಿ: ನನೆಗುದಿಗೆ ಬಿದ್ದಿರುವ ಕಲಬುರಗಿ ನಗರದ ಹೊರ ವಲಯದ ಬೈ ಪಾಸ್ ರಸ್ತೆ (2ನೇ ರಿಂಗ್ ರೋಡ್) ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕೇಂದ್ರದಿಂದ ಶೀಘ್ರ ಅನುದಾನ ತರಲು ಸಮಿತಿಯೊಂದನ್ನು ರಚಿಸಲು ಲೋಕಸಭಾ ಸದಸ್ಯ ಡಾ. ಉಮೇಶ ಜಾಧವ್ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಮಂಗಳವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕಲಬುರಗಿ ಬೈಪಾಸ್ (2ನೇ ರಿಂಗ್ ರೋಡ್) ಕುರಿತಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲಾ ಲೋಕೋಪಯೋಗಿ ಇಲಾಖೆ ಮುಖ್ಯ ಇಂಜಿನಿಯರ್ ಜಗನ್ನಾಥ್ ಹಳಿಂಗೆ ಅವರ ನೇತೃತ್ವದಲ್ಲಿ 15 ದಿನದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನೊಳಗೊಂಡ ತಾಂತ್ರಿಕ ಸಮಿತಿಯನ್ನು ರಚಿಸುವಂತೆ ಸಲಹೆ ನೀಡಿದರು.
ರಿಂಗ್ ರೋಡ್ ನಿರ್ಮಾಣ ಯೋಜನೆ ಬಹುದಿನಗಳಿಂದ ನೆನೆಗುದಿಗೆ ಬಿದ್ದಿದೆ. ಈ ಯೋಜನೆಗೆ ಕೇಂದ್ರದಿಂದ ಅನುದಾನ ತರಲು ರಾಜ್ಯ ಸರ್ಕಾರದ ಮೂಲಕ ಪ್ರಸ್ತಾವನೆ ಸಲ್ಲಿಸಬೇಕು. ಸಂಬಂಧಪಟ್ಟ ಅಧಿಕಾರಿಗಳನ್ನೊಳಗೊಂಡ ಸಮಿತಿಯನ್ನು ರಚಿಸಿ, ಕೇಂದ್ರದಿಂದ ಅನುದಾನ ತರಲು ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ಅಡಿಯಲ್ಲಿ ರಿಂಗ್ ರೋಡ್ ಕಾಮಗಾರಿ ಕೈಗೊಳ್ಳಬೇಕು ಎಂದು ಹೇಳಿದರು.
ಭೂ ಸ್ವಾಧೀನಕ್ಕೆ 300 ಕೋಟಿ ರೂಪಾಯಿ ಅನುದಾನ ಅಗತ್ಯವಿದ್ದು, ಈ ಸಂಬಂಧ ರಾಜ್ಯ ಸರ್ಕಾರ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಸಂಗ್ರಹಿಸಬೇಕು ಎಂದು ಹೇಳಿದರು.
ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಮಾತನಾಡಿ, ಈ ಹಿಂದೆ 2ನೇ ರಿಂಗ್ ರೋಡ್ ಕಾಮಗಾರಿಯ ಅಂದಾಜು ವೆಚ್ಚವು 1,181 ಕೋಟಿ ರೂ. ನಿಗದಿಯಾಗಿತ್ತು, ಪ್ರಸ್ತುತ ಅಂದಾಜು ವೆಚ್ಚ 1,500 ಕೋಟಿ ರೂ. ಆಗಲಿದೆ. ಈ ಅನುದಾನವನ್ನು ಕೇಂದ್ರ ಸರ್ಕಾರದಿಂದ ಶೀಘ್ರ ತರಿಸಬೇಕಾಗಿದೆ ಎಂದು ಪ್ರತಿಪಾದಿಸಿದರು.
ಕಲಬುರಗಿ ಸಹಾಯಕ ಆಯುಕ್ತೆ ಮೊನಾ ರೂಟ್, ಜಿಲ್ಲಾ ಲೋಕೋಪಯೋಗಿ ಇಲಾಖೆ ಮುಖ್ಯ ಇಂಜಿನಿಯರ್ ಜಗನ್ನಾಥ್ ಹಳಿಂಗೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕನ್ಸಲ್ಟೆಂಟ್ ಶಶಿಕಾಂತ್ ವಾರದ್, ಕೆಕೆಆರ್‍ಡಿಬಿ, ಜೆಸ್ಕಾಂ, ಬಿಎಸ್‍ಎನ್‍ಎಲ್, ಕರ್ನಾಟಕ ನೀರು ಸರಬರಾಜು ಮಂಡಳಿ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಮುಂತಾದವರು ಭಾಗವಹಿಸಿದ್ದರು.