ತಿ.ನರಸೀಪುರ: ಹೋಬಳಿ ಕೇಂದ್ರವಾಗಿರುವ ಬನ್ನೂರು ಪಟ್ಟಣದಲ್ಲಿ ಶೈಕ್ಷಣಿಕ ಸಂಸ್ಥೆಯೊಂದನ್ನು ಆರಂಭಿಸಿ, ಸಾಮಾಜಿಕ ಮತ್ತು ಶಿಕ್ಷಣ ಸೇವೆಯನ್ನು ಸಲ್ಲಿಸುತ್ತಿರುವ ರೋಟರಿ ಶಾಲೆಗೆ ಕಟ್ಟಡ ನಿರ್ಮಾಣ ಮಾಡಲು ಸಂಸದರ ಪ್ರದೇಶಾಭಿವೃದ್ಧಿ ಅನುದಾನದಿಂದ ನೆರವು ನೀಡಲಾಗುವುದು ಎಂದು ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಘೋಷಿಸಿದರು.
ಜಿಲ್ಲಾ ಕೇಂದ್ರದ ಖಾಸಗಿ ಹೋಟೆಲ್ ಆವರಣದಲ್ಲಿ ನಡೆದ ತಾಲ್ಲೂಕಿನ ಬನ್ನೂರು ರೋಟರಿ ಸಂಸ್ಥೆಯ ವಲಯ-09ರ ಜಿಲ್ಲೆ-3 181ರ ನೂತನ ಅಧ್ಯಕ್ಷ ರೊ. ಪಿಎಚ್ಎಫ್ ಟಿ.ವಾಸುದೇವ (ರಂಗಸಮುದ್ರ) ಮತ್ತು ತಂಡದ ಪದವಿ ಪ್ರದಾನ ಸಮಾರಂಭದಲ್ಲಿ ವಿಶಿಷ್ಟಚೇತನರಿಗೆ ಟ್ರೈಸಿಕಲ್ ಗಳನ್ನು ವಿತರಿಸಿ, ರೋಟರಿ ಸಂಸ್ಥೆಯ ಬಿನ್ನವತ್ತಳೆ ಸ್ವೀಕರಿಸಿ ಮಾತನಾಡಿದ ಅವರು ರೋಟರಿ ಶಾಲೆಗೆ ಕಟ್ಟಡವೊಂದನ್ನು ನಿರ್ಮಾಣ ಮಾಡಲು ವಾರದೊಳಗೆ ಸಂಸದರ ಅನುದಾನವನ್ನು ಮಂಜೂರು ಮಾಡುವುದಾಗಿ ಭರವಸೆ ನೀಡಿದರು.
ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಯಾಯ ಪ್ರದೇಶಗಳ ಅವಶ್ಯಕತೆಗೆ ತಕ್ಕಂತೆ ಅನುಗುಣವಾಗಿ ಸೇವಾ ಕಾರ್ಯಕ್ರಮಗಳನ್ನು ನಡೆಸುತ್ತಿರುವ ರೋಟರಿ ಸಂಸ್ಥೆಯ ಬಗ್ಗೆ ನನ್ನ ನಾಲ್ಕು ದಶಕದ ರಾಜಕಾರಣದಲ್ಲಿ ತಿಳಿದುಕೊಂಡಿದ್ದೇನೆ. ಹೋಬಳಿ ಕೇಂದ್ರವಾದ ಬನ್ನೂರು ಪಟ್ಟಣದಲ್ಲಿ ಶಾಲೆ ತೆರೆದು, ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳ ಮಕ್ಕಳಿಗೆ ದುಬಾರಿ ಯಾಗದ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿರುವ ಸಂಸ್ಥೆಗೆ ಅಗತ್ಯ ನೆರವನ್ನು ನೀಡಬೇಕಾದದ್ದು ಈ ಭಾಗದ ಜನಪ್ರತಿನಿಧಿಯ ಜವಾಬ್ದಾರಿ. ಮುಂದಿನ ಸೇವಾ ಕಾರ್ಯಕ್ರಮಗಳಿಗೆ ಸಂಪೂರ್ಣ ಸಹಕಾರವನ್ನು ನೀಡುತ್ತೇನೆ ಎಂದು ಶ್ರೀನಿವಾಸಪ್ರಸಾದ್ ತಿಳಿಸಿದರು.
ಜಿಲ್ಲಾ ಗೌರ್ನರ ಎ.ಆರ್.ರವೀಂದ್ರ ಭಟ್ ಮಾತನಾಡಿ, ರೋಟರಿ ಸಂಸ್ಥೆಯ ಸಾಮಾಜಿಕ, ವೈದ್ಯಕೀಯ ಹಾಗೂ ಶೈಕ್ಷಣಿಕ ಸೇವಾ ಕಾರ್ಯಕ್ರಮಗಳಿಗೆ ಅಗತ್ಯವಿರುವ ಸಂಪನ್ಮೂಲ ಕ್ರೂಡಿಕರಣಕ್ಕೆ ಜನಸಮುದಾಯ ಹಾಗೂ ಜನಪ್ರತಿನಿಧಿಗಳ ಸಹಭಾಗಿತ್ವವನ್ನು ಪಡೆದುಕೊಳ್ಳಬೇಕು. ರಾಷ್ಟ್ರೀಯ ಹಾಗೂ ರಾಜ್ಯಮಟ್ಟದ ಕೇಂದ್ರ ಸ್ಥಾನದಲ್ಲಿ ನಡೆಯುತ್ತಿರುವ ವಿನೂತನ ಕಾರ್ಯಕ್ರಮಗಳನ್ನು ಜಿಲ್ಲಾ ಮಟ್ಟಕ್ಕೂ ವಿಸ್ತರಿಸುವ ಬಗ್ಗೆ ರೂಪುರೇಷೆಯನ್ನು ಸಿದ್ದಪಡಿಸಲಾಗುತ್ತಿದೆ ಎಂದು ರೋಟರಿ ಸಂಸ್ಥೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಸಮಾರಂಭದಲ್ಲಿ ಇಬ್ಬರು ವಿಶೇಷಚೇತನರಿಗೆ ಟ್ರೈ ಸಿಕಲ್ ಗಳನ್ನು ವಿತರಿಸಲಾಯಿತು. ಪರಿಸರ ಪ್ರೇಮಿ ಶ್ರೀರಂಗಪಟ್ಟಣ ತಾಲೂಕಿನ ಚಂದಗಾಲು ಗ್ರಾಮದ ವೈ.ರಮೇಶ್, ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ರಂಗಸಮುದ್ರ ಮಾಯಿಗೌಡ, ರೋಟರಿ ಸಂಸ್ಥೆಯ ವಿವಿಯ ಸೇನಾನಿ ಬನ್ನೂರು ಪಟ್ಟಣದ ಬಿ.ಸಿ.ಪಾರ್ಥಸಾರಥಿ ಹಾಗೂ ಸಮಾಜ ಸೇವಕ, ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಹೇಂದ್ರಸಿಂಗ್ (ಕಾಳಪ್ಪ) ಸನ್ಮಾನಿಸಲಾಯಿತು.
ಅಧ್ಯಕ್ಷ ರೊ. ಪಿಎಚ್ ಎಫ್ ಟಿ.ವಾಸುದೇವ ಸೇರಿದಂತೆ ಬಿ.ಎಸ್. ರಾಜೇಂದ್ರ (ಕಾರ್ಯದರ್ಶಿ), ಕೆಂಪೇಗೌಡ (ಉಪಾಧ್ಯಕ್ಷ), ಬಿ.ಎ.ನಾಗರಾಜು (ನಿಯೋಜಿತ ಅಧ್ಯಕ್ಷ), ಬಸವನಹಳ್ಳಿ ಕೃಷ್ಣೇಗೌಡ (ಸಹಕಾರ್ಯದರ್ಶಿ), ಎಂ.ಶಿವಣ್ಣ (ಖಜಾಂಚಿ) ಹಾಗೂ ಅತ್ತಹಳ್ಳಿ ಕೃಷ್ಣೇಗೌಡ (ದಂಡಾಯುಧ ಪಾಣಿ) ಅವರು ಪದವಿ ವಿತರಿಸಿದರು.
ಸಮಾಜ ಸೇವಾ ಮನೋಭಾವುಳ್ಳ ಹಲವರು ರೋಟರಿ ಸದಸ್ಯತ್ವವನ್ನು ಪಡೆದು ಕೊಂಡರು. ಎಂಸಿಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಿ.ಬಸವೇಗೌಡ, ರೋಟರಿ ಸಹಾಯಕ ಗೌರ್ನರ್ ಎಸ್. ಪ್ರವೀಣ್, ವಲಯ ಕಾರ್ಯದರ್ಶಿ ಡಾ.ಆರ್. ಉಮಾಶಂಕರ್, ವಲಯ ಸೇನಾನಿ ಎನ್.ಶಿವಾನಂದ, ನಿಕಟಪೂರ್ವ ಅಧ್ಯಕ್ಷ ಎ.ಎಸ್. ಬಾಬು, ನಿರ್ಗಮಿತ ಕಾರ್ಯದರ್ಶಿ ಡಾ.ರಾಜೀವ್, ನಿರ್ದೇಶಕರಾದ ಬಿ.ಸಿ. ಮುರಳಿ ಗೋಪಾಲ, ಜಿ.ಪಿ.ಪ್ರಸನ್ನ, ಬಿ.ಎಸ್.ಯೋಗೇಂದ್ರ, ಬಿ.ಎನ್.ಸುರೇಶ್, ಬಿ.ಕೆ. ವೆಂಕಟೇಶ್ ಪ್ರಸಾದ್, ನಿಂಗರಾಜು, ಯಾಚೇನಹಳ್ಳಿ ಹನುಮಂತೇಗೌಡ, ಶಿವಕುಮಾರಸ್ವಾಮಿ, ಪಿ. ಪ್ರಭಾಕರ್, ಎನ್.ಎಂ. ರಾಮಚಂದ್ರ, ಮರಿಸ್ವಾಮಿ, ನವೀನ್, ವೆಂಕಟೇಶ್ ಹಾಗೂ ಇನ್ನಿತರರು ಇದ್ದರು.