Please assign a menu to the primary menu location under menu

CrimeNEWSನಮ್ಮಜಿಲ್ಲೆನಮ್ಮರಾಜ್ಯ

ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ, ಹಸಿವಿನಿಂದ ನರಳಿ ನರಳಿ 9 ತಿಂಗಳ ಮಗು ಸಾವು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಒಂದೇ ಕುಟುಂಬದ ಐವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜ್ಯದ ರಾಜಧಾನಿಯಲ್ಲಿ ನಡೆದಿದೆ.

ನಾಲ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಒಂಬತ್ತು ತಿಂಗಳ ಮಗು ಹಸಿವಿನಿಂದ ಮೃತಪಟ್ಟಿದೆ ಎಂದು ಹೇಳಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿ ಇಂದು ಮರಣೋತ್ತರ ಪರೀಕ್ಷೆ ನಡೆಯಲಿದೆ.

ಆತ್ಮಹತ್ಯೆಗೆ ಕಾರಣ ಇನ್ನು ತಿಳಿದು ಬಂದಿಲ್ಲ. ಮರಣೋತ್ತರ ಪರೀಕ್ಷೆ ಬಳಿಕ ಅಸಲಿ ಸತ್ಯ ಬಯಲಾಗಲಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ 10 ಗಂಟೆ ಬಳಿಕ ಮರಣೋತ್ತರ ಪರೀಕ್ಷೆ ಆರಂಭವಾಗಲಿದೆ. ಒಂದೇ ಕುಟುಂಬದ ಸದಸ್ಯರು ಕಳೆದ ಐದಾರು ದಿನಗಳ ಹಿಂದೆ ಅಂದರೆ ಸೋಮವಾರ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ಸ್ಥಳೀಯ ಪತ್ರಿಕೆ ಸಂಪಾದಕರಾದ ಶಂಕರ್​ ಅವರ ಪತ್ನಿ ಭಾರತಿ, ಮಗ ಮಧುಸಾಗರ್, ಇಬ್ಬರು ಹೆಣ್ಣುಮಕ್ಕಳಾದ ಸಿಂಚನಾ ಹಾಗೂ ಸಿಂಧುರಾಣಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಇನ್ನು 9 ತಿಂಗಳ ಮೊಮ್ಮಗ ಹಸಿವಿನಿಂದ ನರಳಿ ನರಳಿ ಮೃತಪಟ್ಟಿರುವ ಸಾಧ್ಯತೆಯಿದೆ. ಆದರೆ ಮನೆಯಲ್ಲಿದ್ದ ಎರಡೂವರೆ ವರ್ಷದ ಮಗು ಪ್ರೇಕ್ಷಾ ಬದುಕುಳಿದಿದೆ.

ಮಗು ಬದುಕುಳಿಯಲು ಶಂಕರ್ ಮಗ ಅಂದರೆ ಮಗುವಿನ ಮಾವ ಮಧುಸಾಗರ್ ಕಾರಣವಿರಬಹುದು. ತಾಯಿ ಮತ್ತು ಸೋದರಿಯರು ನೇಣಿಗೆ ಶರಣಾದ 1-2 ದಿನ ಬಳಿಕ ಮಧುಸಾಗರ್ ಆತ್ನಹತ್ಯೆಗೆ ಶರಣಾಗಿರುವ ಅನುಮಾನವಿದ್ದು, ನಾಲ್ವರ ಶವಕ್ಕಿಂತ ಮಧುಸಾಗರ್ ದೇಹ ಕಡಿಮೆ ಕೊಳೆತಿದೆ. ಶವ ಸಾಗಿಸುವಾಗ ಪೊಲೀಸರು ಈ ಅಂಶವನ್ನು ಗಮನಿಸಿದ್ದಾರೆ. ಹೀಗಾಗಿ ಮಧುಸಾಗರ್ 2 ದಿನ ಮಗುವಿಗೆ ಆಹಾರ ತಿನಿಸಿರುವ ಸಾಧ್ಯತೆಯಿದೆ.

ಮನೆ ಕಡೆ ಸುಳಿಯದ ಮನೆ ಕೆಲಸದ ಹುಡುಗಿ: ಇನ್ನು ಶಂಕರ್ ಮನೆಗೆ ಹುಡುಗಿಯೊಬ್ಬಳು ಕೆಲಸ ಮಾಡಲು ಬರುತ್ತಿದ್ದಳು. ಗುಲ್ಬರ್ಗ ಮೂಲದ ಹುಡುಗಿ ಮನೆಗೆಲಸ ಮಾಡಿಕೊಂಡಿದ್ದಳು. ಆ ಹುಡುಗಿಯನ್ನು ಶಂಕರ್ ಚೆನ್ನಾಗಿ ನೋಡಿಕೊಳ್ಳುತ್ತಿದ್ದರಂತೆ.

ಆದರೆ ಇದು ಶಂಕರ್ ಪತ್ನಿಯ ಕಣ್ಣು ಕೆಂಪಾಗಿಸಿತ್ತು. ಜಗಳ ಮಾಡಿ ಹುಡುಗಿಯನ್ನು 4 ತಿಂಗಳ ಹಿಂದೆ ಓಡಿಸಲಾಗಿತ್ತು. ಬಳಿಕ ಮತ್ತೊಬ್ಬರು ಕೆಲಸಕ್ಕೆ ಬರುತ್ತಿದ್ದರು. ಆದರೆ ಭಾನುವಾರದಿಂದ ಈಚೆಗೆ ಆಕೆಯೂ ಬರುತ್ತಿರಲಿಲ್ಲ. ಭಾನುವಾರ ಬಂದಿದ್ದು ಬಿಟ್ಟರೆ ಮತ್ತೆ ಈ ಕಡೆ ಸುಳಿಯಲೇ ಇಲ್ಲ. ಇದು ಮತ್ತಷ್ಟು ಅನುಮಾನ ಮೂಡುವಂತೆ ಮಾಡಿದೆ.

ಮನೆಯಲ್ಲಿ ಐವರು ಸಾವನ್ನಪ್ಪಿದ್ದರೂ ಎರಡೂವರೆ ವರ್ಷದ ಮಗು ಪಾವಾಡವಾಗಿ ಬದುಕುಳಿದೆ. ಆದರೆ ಈ ಮಗುವಿಗೂ ನಿದ್ರೆ ಮಾತ್ರೆ ತಿನ್ನಿಸಿರಬಹುದು ಎಂಬ ಅನುಮಾನ ಮೂಡಿದೆ. ಘಟನೆ ನಡೆದು ಆರು ದಿನಗಳಾದರೂ ಮಗು ಬದುಕಿಳಿದಿದೆ. ಮನೆಯಲ್ಲಿ ಯಾರು ಇಲ್ಲದಿದ್ದರೂ, ಊಟ, ತಿಂಡಿಯಿಲ್ಲದಿದ್ದರೂ ಮಗು ಬದುಕುಳಿದಿದೆ. ಬಹುಶಃ ಮಾತ್ರೆಯಿಂದ ಮಲಗಿತ್ತಾ ಎಂಬ ಅನುಮಾನ ವ್ಯಕ್ತವಾಗಿದೆ.

ಭವ್ಯ ಮನೆ ಈಗ ಸಂಪೂರ್ಣ ಖಾಲಿ ಖಾಲಿ: ಶಂಕರ್ ಐಷಾರಾಮಿ ಮನೆಯನ್ನು ಹೊಂದಿದ್ದಾರೆ. ವಿನಾಯಕನಗರದಲ್ಲಿ ಐಷಾರಾಮಿ ಮನೆಯನ್ನು ಹೊಂದಿದ್ದಾರೆ. ಕೆಳ ಮಹಡಿಯನ್ನು ಬಾಡಿಗೆಗೆ ನೀಡಲಾಗಿತ್ತು. ಮೊದಲ ಮಹಡಿಯಲ್ಲಿ ಹಾಲ್, ಕಿಚನ್ ಹಾಗೂ ಒಂದು ಕೊಠಡಿ ಇತ್ತು. ಆ ಕೊಠಡಿಯಲ್ಲಿ ಶಂಕರ್ ಮತ್ತು ಅವರ ಪತ್ನಿ ಭಾರತಿ ಇರುತ್ತಿದ್ದರು. ಅದೇ ಕೊಠಡಿಯಲ್ಲಿ ಕಿರಿಯ ಪುತ್ರಿ ಸಿಂಧುರಾಣಿ ನೇಣು ಬಿಗಿದುಕೊಂಡು ಅಸುನೀಗಿದ್ದಾರೆ.

ಇನ್ನು ಸಿಂಧುರಾಣಿ ಸತ್ತ ಕೊಠಡಿಯ ಬೆಡ್ ಮೇಲೆ 9 ತಿಂಗಳ ಗಂಡು ಮಗು ಮೃತದೇಹ ಇತ್ತು. ಹಾಲ್​ನಲ್ಲಿದ್ದ ಫ್ಯಾನಿಗೆ ಭಾರತಿ ನೇಣು ಬಿಗಿದುಕೊಂಡಿದ್ದಾರೆ. ಎರಡನೇ ಮಹಡಿಯಲ್ಲಿ ಮೂರು ಕೊಠಡಿಗಳಿದ್ದವು. ಮೂವರು ಮಕ್ಕಳಿಗೆ ಮೂರು ಕೊಠಡಿ ಇತ್ತು. ಎರಡು ಪ್ರತ್ಯೇಕ ಕೊಠಡಿಯಲ್ಲಿ ಹಿರಿಯ ಪುತ್ರಿ ಸಿಂಚನ ಮತ್ತು ಮಗ ಮಧುಸಾಗರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಧುಸಾಗರ್ ಕೊಠಡಿಯಲ್ಲೇ ಬದುಕುಳಿದ ಮಗು ಪ್ರೇಕ್ಷಾ ಇತ್ತು.

ದೂರು ದಾಖಲಿಸಿರುವ ಶಂಕರ್: ಬ್ಯಾಡರಹಳ್ಳಿ ಠಾಣೆಯಲ್ಲಿ ಶಂಕರ್ ದೂರು ದಾಖಲಿಸಿದ್ದಾರೆ. ನನ್ನ ಎಲ್ಲ ಆಸ್ತಿ, ಹಣವನ್ನು ಪತ್ನಿ, ಮಗನಿಗೆ ನೀಡಿಬಿಟ್ಟಿದ್ದೆ. ನನಗೆ ಹಣ ಬೇಕಾದಾಗ ಅವರನ್ನೇ ಕೇಳಿ ಪಡೆಯಬೇಕಿತ್ತು’ ಎಂದು ತಿಳಿಸಿದ್ದಾರೆ.

ಸೆಪ್ಟೆಂಬರ್ 12ರ ಘಟನೆ ಬಗ್ಗೆಯೂ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ. ಪತ್ನಿ, ಮಗನ ಜೊತೆ ಶಂಕರ್ ಭಿನ್ನಾಭಿಪ್ರಾಯ ಹೊಂದಿದ್ದರು. ಪತ್ನಿಯ ಜೊತೆ ಹೆಣ್ಣುಮಕ್ಕಳ ವಿಚಾರವಾಗಿ ಭಿನ್ನಾಭಿಪ್ರಾಯ ಹೊಂದಿದ್ದರು.

ಹೆಣ್ಣುಮಕ್ಕಳನ್ನು ಗಂಡನ ಮನೆಗೆ ಕಳಿಸುವಂತೆ ಶಂಕರ್ ಹೇಳುತ್ತಿದ್ದರಂತೆ. ಆದರೆ ಕಳಿಸಲ್ಲ ಅಂತ ಶಂಕರ್ ಜೊತೆ ಪತ್ನಿ ಭಾರತಿ ಜಗಳವಾಡುತ್ತಿದ್ದರಂತೆ. ಹೆಣ್ಣುಮಕ್ಕಳ ಜೀವನ ಹಾಳು ಮಾಡ್ತಿದ್ದೀಯಾ ಎಂದು ಸಿಟ್ಟಾಗುತ್ತಿದ್ದರಂತೆ. ಹಣದ ವ್ಯವಹಾರಕ್ಕೆ ಸಂಬಂಧಿಸಿ ಮಗನ ಜತೆ ಭಿನ್ನಾಭಿಪ್ರಾಯ ಹೊಂದಿದ್ದರಂತೆ.

ಬಾರ್ ತೆರೆಯಲು ಮಗ 20 ಲಕ್ಷ ರೂ. ಕೊಟ್ಟು ಸಿದ್ಧತೆ ಮಾಡಿಕೊಂಡಿದ್ದನಂತೆ. ನೋಂದಣಿ ಮಾಡಿಸಲು ಶಂಕರ್ ಸಹಿ ಬೇಕಾಗಿತ್ತು. ಆದರೆ ಸಹಿ ಮಾಡಲು ಶಂಕರ್ ನಿರಾಕರಿಸಿದ್ದರಂತೆ. ಈ ವಿಚಾರವಾಗಿಯೂ ಸೆ.12ರಂದು ಮನೆಯಲ್ಲಿ ಜಗಳವಾಗಿತ್ತು.

ಆಶ್ರಮ ಕಟ್ಟಿಸಲು ಶಂಕರ್ 10 ಲಕ್ಷ ರೂ. ನೀಡುವಂತೆ ಕೇಳಿದ್ದರಂತೆ. ಈ ವೇಳೆ ಶಂಕರ್‌ಗೆ ಹಣ ನೀಡಲು ಪತ್ನಿ ಮತ್ತು ಮಗ ನಿರಾಕರಿಸಿದ್ದಾರೆ. ಈ ವಿಚಾರವಾಗಿಯೂ ಜಗಳವಾಗಿತ್ತು. ಈ ಎಲ್ಲ ವಿಚಾರಕ್ಕೆ ಜಗಳ ಮಾಡಿಕೊಂಡು ಶಂಕರ್ ಮನೆ ಬಿಟ್ಟು ಹೋಗಿದ್ದರು.

ಸಂಜೆ 4.30‌ಕ್ಕೆ ಶಂಕರ್‌ಗೆ ಮಗ ವಾಟ್ಸಾಪ್ ಮೆಸೇಜ್ ಮಾಡಿದ್ದ. 10 ಲಕ್ಷ ರೂ. ನೀಡುತ್ತೇನೆ ಮನೆಗೆ ಬಾ ಅಪ್ಪಾ ಎಂದು ಮೆಸೇಜ್ ಮಾಡಿದ್ದಾನೆ. ಇದಕ್ಕೆ ಶಂಕರ್ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಸೆಪ್ಟೆಂಬರ್ 16ರಂದು ಶಂಕರ್ ಮನೆಯ ಬಳಿ ಬಂದಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿ ವಾಪಸ್ ಹೋಗಿದ್ದಾರೆ. ಎಲ್ಲಾದರು ಹೋಗಿರಬಹುದೆಂದು ಸ್ನೇಹಿತನ ಮನೆಗೆ ಹೋಗಿದ್ದಾರೆ. ಆದರೆ ನಿನ್ನೆ ಸಂಜೆ ಮತ್ತೆ ಮನೆ ಬಳಿ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.

ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ನೀಡಿದ್ದ ಶಂಕರ್​: ಮೂವರು ಮಕ್ಕಳಿಗೆ ಶಂಕರ್ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಿದ್ದ. ​​ ಐಎಎಸ್​​ ಆಗುವ ಕನಸನ್ನು ಇಬ್ಬರು ಹೆಣ್ಣು ಮಕ್ಕಳಾದ ಸಿಂಚನಾ ಮತ್ತು ಸಿಂಧುರಾಣಿ ಕನಸುಕಂಡಿದ್ದರು. ಇಬ್ಬರು ಮಕ್ಕಳನ್ನು ಶಂಕರ್ ಐಎಎಸ್​ ಕೋಚಿಂಗ್‌ಗೆ ಸೇರಿಸಿದ್ದರು. ಕೋಚಿಂಗ್ ಸೆಂಟರ್​ಗೆ ತೆರಳಲು ಮಕ್ಕಳಿಗೆ ಕಾರಿನ ವ್ಯವಸ್ಥೆ ಮಾಡಿದ್ದರು.

ಬಿಇ ಮುಗಿಸಿ ಖಾಸಗಿ ಕಂಪನಿಯಲ್ಲಿ ಸಿಂಚನಾ ಕೆಲಸ ಮಾಡಿಕೊಂಡಿದ್ದಳು. ಮಗು ಜನಿಸಿದ ಬಳಿಕ ಸಿಂಚನಾ ಕೆಲಸಕ್ಕೆ ಹೋಗುವುದು ನಿಲ್ಲಿಸಿದ್ದಳು. 2ನೇ ಮಗಳು ಸಿಂಧುರಾಣಿ ಎಂಬಿಎ ಪದವೀಧರೆಯಾಗಿದ್ದಳು. ​​ಮಗ ಮಧುಸಾಗರ್​​​​​​ ಬಿಇ ಪದವೀಧರನಾಗಿದ್ದು, ಮಧು ಬ್ಯಾಂಕ್ ಆಫ್​ ಬರೋಡಾದಲ್ಲಿ ಕೆಲಸ ಮಾಡುತ್ತಿದ್ದ.

ದೇವಾಲಯ ನಿರ್ಮಾಣ: ಇನ್ನು ಶಂಕರ್ ಮಂಡ್ಯದ ಗ್ರಾಮವೊಂದರಲ್ಲಿ ಯಲ್ಲಮ್ಮದೇವಿ ದೇವಾಲಯವನ್ನು ನಿರ್ಮಿಸಿದ್ದರು. ಗ್ರಾಮಸ್ಥರ ನೆರವಿನಿಂದ ಶಂಕರ್ ನೇತೃತ್ವದಲ್ಲಿ ದೇವಾಲಯವನ್ನು ನಿರ್ಮಿಸಲಾಗಿತ್ತು.

ಸವದತ್ತಿಯ ಯಲ್ಲಮ್ಮ ದೇವಿ ಶಂಕರ್ ಮನೆ ದೇವರು. ಪ್ರತಿಬಾರಿ ಸವದತ್ತಿಗೆ ಹೋಗಲಾಗಲ್ಲ ಎಂದು ಶಂಕರ್ ಗ್ರಾಮದಲ್ಲೇ ದೇವಾಲಯವನ್ನು ನಿರ್ಮಿಸಿದ್ದರು. 2002 ರಲ್ಲೇ ದೇವಾಲಯ ನಿರ್ಮಿಸಿದ್ದರು. ಇತ್ತೀಚೆಗೆ ಮೂರನೇ ಶ್ರಾವಣ ಶನಿವಾರ ಪತ್ನಿ, ಮಕ್ಕಳ ಸಮೇತ ಬಂದು ಪೂಜೆ ಸಲ್ಲಿಸಿ ಹೋಗಿದ್ದರು.

Leave a Reply

error: Content is protected !!
LATEST
ಸಾರಿಗೆ ನೌಕರರಿಗೆ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆ ಅನುಷ್ಠಾನಗೊಳಿಸಿ : ಸರ್ಕಾರಕ್ಕೆ ಬೈರಣ್ಣ ಒತ್ತಾಯ KSRTC: ಸಮಸ್ತ 4ನಿಗಮಗಳ ಅಧಿಕಾರಿಗಳು-ನೌಕರರು ಇಟ್ಟಿರುವ ಬೇಡಿಕೆಗಳ ಈಡೇರಿಸಿಕೊಳ್ಳುವುದು ಅಸಾಧ್ಯವೆ ಅಲ್ಲ! ಡಿ.9ರಿಂದ ವಿಧಾನಮಂಡಳ ಅಧಿವೇಶನ, ಉಕ ಪ್ರಗತಿಗೆ ಒತ್ತು: ಸ್ಪೀಕರ್ ಖಾದರ್ ವಿವಿಧ ಬೇಡಿಕೆಗಳ  ಈಡೇರಿಸಿ ಆಗ್ರಹಿಸಿ ಇಪಿಎಸ್ ಪಿಂಚಣಿದಾರರ ಪ್ರತಿಭಟನೆ: ಅಧಿಕಾರಿಗಳ ವಿರುದ್ಧ ಆಕ್ರೋಶ ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್...