ಗುರುಮಿಟ್ಕಲ್ : ಡ್ಯೂಟಿ ಕೊಡದೆ ಡಿಪೋದಲ್ಲಿ ಮಾನಸಿಕವಾಗಿ ಚಿತ್ರಹಿಂಸೆ ನೀಡಿದಕ್ಕೆ ಮನನೊಂದ ಚಾಲಕ ಕಂ ನಿರ್ವಾಹಕರೊಬ್ಬರು ಆತ್ಮಹತ್ಮೆ ಮಾಡಿಕೊಂಡಿರುವ ಘಟನೆ ಗುರುಮಿಟ್ಕಲ್‌ನಲ್ಲಿ ನಡೆದಿದೆ.
ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಯಾದಗಿರಿ ವಿಭಾಗ ಯಾದಗಿರಿ ಘಟಕದ ಚಾಲಕ ಕಂ ನಿರ್ವಾಹಕ ಕಾಶಿನಾಥ್ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡವರು.
ಡಿಪೋದ ಸಂಚಾರಿ ಅಧಿಕಾರಿ ನಾಗರೆಡ್ಡಿ ಮತ್ತು ಘಟಕ ವ್ಯವಸ್ಥಾಪಕರು ಸೇರಿದಂತೆ ಮೇಲಧಿಕಾರಿಗಳು ಮಾನಸಿಕ ಹಿಂಸೆ ನೀಡುತ್ತಿದ್ದು ಅದರಿಂದ ಮನನೊಂದು ಕಾಶಿನಾಥ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಕಳೆದ ಒಂದು ತಿಂಗಳಿನಿಂದ ಕೆಲಸಕ್ಕೆ ಹೋದರೂ ಡ್ಯೂಟಿ ಕೊಡದೆ ಡಿಪೋನಲ್ಲೇ ಕೂಡಿಹಾಕಿ ನಂತರ ಮನೆಗೆ ಕಳುಹಿಸುತ್ತಿದ್ದರು. ಅಧಿಕಾರಿಗಳ ಕಿರುಕುಳದಿಂದಲೇ ಇಂದು ನನ್ನ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕಾಶಿನಾಥ್ ಪತ್ನಿ ಹೇಳಿದ್ದಾರೆ.
ಇನ್ನು ಮೃತ ಕಾಶಿನಾಥ್ ಅವರಿಗೆ ಮೂವರು ಹೆಣ್ಣು ಮಕ್ಕಳಿದ್ದು, ನಾವು ಆ ಮಕ್ಕಳನ್ನು ಹೇಗೆಸಾಕುವುದು ಎಂದು ಕಾಶಿನಾಥ್ ಪತ್ನಿ ಗೋಳಾಡುತ್ತಿದ್ದಾರೆ. ಕೆಲಸಕ್ಕೆ ಹೋದ ವೇಳೆ ಡ್ಯೂಟಿ ಕೊಟ್ಟಿದ್ದರೆ ನನ್ನ ಗಂಡ ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಕಾಶಿನಾಥ್ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಈಗಾಗಲೇ ಸಂಬಂಧಪಟ್ಟ ಡಿಪೋ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಅವರಿಂದ ಇನ್ನು ಯಾವುದೇ ಪ್ರತಿಕ್ರಿಯೇ ಬಂದಿಲ್ಲ ಎಂದು ಮೃತರ ಸಂಬಂಧಿಯೊಬ್ಬರು ತಿಳಿಸಿದ್ದಾರೆ.
ಕಳೆದ ಏಪ್ರಿಲ್‌ನಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ 14 ದಿನಗಳು ಮುಷ್ಕರ ಮಾಡಿದ ಬಳಿಕ ನೌಕರರಿಗೆ ಕೆಲ ಡಿಪೋಗಳಲ್ಲಿ ಕಿರುಕುಳಗಳು ಹೆಚ್ಚಾಗುತ್ತಿದ್ದು, ಈ ಬಗ್ಗೆ ಹಲವಾರು ಬಾರಿ ಸಚಿವರು ಮತ್ತು ಸಂಬಂಧಪಟ್ಟ ಮೇಲಧಿಕಾರಿಗಳಿಗೆ ನೌಕರರು ಮನವಿ ಸಲ್ಲಿಸುವ ಮೂಲಕ ಗಮನಕ್ಕೆ ತಂದರೂ ಈವರೆಗೂ ಯಾವುದೇ ಕ್ರಮ ಜರುಗಿಸದ ಹಿನ್ನೆಲೆಯಲ್ಲಿ ನೌಕರರು ಇಂದು ಆತ್ಮಹತ್ಯೆಯಂತಹ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ.
ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸಚಿವರು ನೌಕರರ ಆತ್ಮಹತ್ಯೆ ತಡೆಗೆ ಮುಂದಾಗಿ ಅವರ ಕುಟುಂಬವನ್ನೂ ಉಳಿಸುವ ಕೆಲಸ ಮಾಡಬೇಕಿದೆ.