ವಿಜಯಪಥ ಸಮಗ್ರ ಸುದ್ದಿ
ಪಿರಿಯಾಪಟ್ಟಣ: 30 ವರ್ಷ ರಾಜಕೀಯ ಮಾಡಿ ಅಭಿವೃದ್ಧಿ ಕೆಲಸ ಮಾಡದೇ ಮೈಮರೆತು ಮಲಗಿದ್ದವರನ್ನು ಪ್ರಶ್ನಿಸದ ನಮ್ಮ ಜನ ಕೇವಲ 3 ವರ್ಷದಿಂದ ಶಾಸಕನಾಗಿರುವ ನನ್ನನ್ನು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿಲ್ಲ ಎನ್ನುತ್ತಿರುವುದು ವಿಪರ್ಯಾಸವೇ ಸರಿ ಶಾಸಕ ಕೆ.ಮಹದೇವ್ ಬೇಸರ ವ್ಯಕ್ತಪಡಿಸಿದರು.
ತಾಲೂಕಿನ ಮುಮ್ಮಡಿಕಾವಲ್, ಉತ್ತೇನಹಳ್ಳಿ, ಕೆಲ್ಲೂರು ಎಂ.ಶೆಟ್ಟಳ್ಳಿ ಗ್ರಾಮಗಳಲ್ಲಿ 1.30 ಕೋಟಿ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಉತ್ತೇನಹಳ್ಳಿ ಗ್ರಾಮದಲ್ಲಿ ಮಾತನಾಡಿದರು.
ನಾನು ಶಾಸಕನಾದ ಪ್ರಾರಂಭದ ದಿನಗಳಲ್ಲಿ ನಮ್ಮ ಸರ್ಕಾರವಿತ್ತು. ಆ ಸಂದರ್ಭದಲ್ಲಿ ತಾಲೂಕಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಪ್ರಾಮಾಣಿಕ ಕೆಲಸ ಮಾಡದೆ. ನಂತರದ ದಿನಗಳಲ್ಲಿ ಸರ್ಕಾರ ಬದಲಾವಣೆ, ನೆರೆಹಾವಳಿ, ಕೊರೊನಾ ಮಹಾಮಾರಿಯಂತ ಅನೇಕ ಸಮಸ್ಯೆಗಳು ರಾಜ್ಯವನ್ನು ಆವರಿಸಿ ಖಜಾನೆಯನ್ನು ಬರಿದು ಮಾಡಿವೆ.
ಈ ಸಂದರ್ಭದಲ್ಲಿ ತಾಲೂಕಿನ ಗ್ರಾಮಾಂತರ ಪ್ರದೇಶಗಳನ್ನು ಅಭಿವೃದ್ಧಿಪಡಿಸಲು ಸರ್ಕಾರದ ಬಳಿ ಹಣದ ಕೊರೆತೆ ಎದ್ದು ಕಾಣುತ್ತಿದೆ. ಹೀಗಿರುವಾಗ ಮುಖ್ಯಮಂತ್ರಿಗಳು ಏನು ಮಾಡಲು ಸಾಧ್ಯ. ತಾಲೂಕಿನ ಎಲ್ಲಾ ಹಳ್ಳಿಗಳನ್ನು ಒಂದೇ ಬಾರಿ ಅಭಿವೃದ್ಧಿಪಡಿಸಲು ಹೇಗೆ ಸಾಧ್ಯ.
ಸ್ವಾತಂತ್ರ ಬಂದ 75 ವರ್ಷಗಳಿಂದಲೂ ಗ್ರಾಮಗಳ ಅಭಿವೃದ್ಧಿಗೆ ಆದ್ಯತೆ ನೀಡುತ್ತಾ ಬಂದಿದ್ದರೆ ತಾಲೂಕಿನಲ್ಲಿ ಇಂಥ ಸಮಸ್ಯೆಗಳು ಕಾಣುತ್ತಿರಲಿಲ್ಲ. ನಗರ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರಿಗೆ ನೀಡುವ ಮೂಲಭೂತ ಸೌಕರ್ಯಗಳನ್ನು ಗ್ರಾಮೀಣ ಪ್ರದೇಶದ ಜನರಿಗೆ ನೀಡುತ್ತಾ ಬಂದಿದ್ದರೆ ಬಹುಶಃ ಇಂತಹ ಒತ್ತಡಗಳು ಬರುತ್ತಿರಲಿಲ್ಲ. ಇದ್ದರಿಂದ ನೀವು ಗ್ರಾಮಗಳಿಗೆ ಬೇಕಾಗಿರುವ ಮೂಲಭೂತ ಸೌಕರ್ಯಗಳನ್ನು ಪಡೆಯಲು ನನ್ನ ಮೇಲೆ ಒತ್ತಡ ತರುತ್ತಿರಲಿಲ್ಲ ಎಂದರು.
ಚುನಾವಣಾ ಸಂದರ್ಭ ನಾನು ಪ್ರತಿ ಗ್ರಾಮಗಳಿಗೆ ಭೇಟಿ ನೀಡದಿದ್ದರೂ ಸ್ಥಳೀಯ ಮುಖಂಡರು ಹಲವು ಭರವಸೆ ನೀಡಿ ಮತ ಕೇಳಿದ್ದಾರೆ. ಅವರ ನಂಬಿಕೆಗೆ ಚ್ಯುತಿ ಬಾರದಂತೆ ಹಂತ ಹಂತವಾಗಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುತ್ತೇನೆ ಎಂದರು.
ಕಾಡಂಚಿನ ಗ್ರಾಮಗಳಲ್ಲಿ ಆನೆಗಳ ಹಾವಳಿ ಹೆಚ್ಚಾಗಿ ಬೆಳೆಗಳನ್ನು ನಾಶ ಪಡಿಸುವುದು ಮತ್ತು ಆಗಗಾ ಗ್ರಾಮಕ್ಕೆ ಬಂದು ಜನರನ್ನು ಸಂಕಷ್ಟಕ್ಕೆ ದೂಡುತ್ತಿರುವುದರಿಂದ ಇದಕ್ಕೆ ಶಾಸ್ವತ ಪರಿಹಾರ ನೀಡುವಂತೆ ಸದನದಲ್ಲಿ ಚರ್ಚೆ ಮಾಡಿದ್ದೇನೆ ಎಂದರು.
ಎಇಇ ಮಂಜುನಾಥ್, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ಜಯಂತ್, ಇಂಜಿನೀಯರ್ ದಿನೇಶ್, ಪಿಡಿಒ ವೀರಭದ್ರಶೆಟ್ಟಿ, ತಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ಎ ಟಿ ರಂಗಸ್ವಾಮಿ, ಸದಸ್ಯ ಈರಯ್ಯ, ಗ್ರಾ.ಪಂ.ಸದಸ್ಯರಾದ ಮಧುಕುಮಾರ್, ವಿಶ್ವನಾಥ್, ಮುಖಂಡರಾದ ಪುಟ್ಟಸ್ವಾಮಪ್ಪ, ಸುರೇಶ್, ಉತ್ತೇನಹಳ್ಳಿ ವೆಂಕಟೇಶ್, ಮುಮಮ್ಮಡಿ ಕಾವಲ್ ದೊಡ್ಡಯ್ಯ, ಕುಮಾರ್, ನಾಗಣ್ಣ, ಪವನ್, ಉಮೇಶ್ ಇದ್ದರು.