ನಾಳೆ ಮಸ್ಕಿ ವಿಧಾನಸಭೆ ಉಪ ಚುನಾವಣೆ: ಮನೆ ಮನೆ ಪ್ರಚಾರಕ್ಕೆ ಇಂದು ತೆರೆ
ವಿಜಯಪಥ ಸಮಗ್ರ ಸುದ್ದಿ
ಮಸ್ಕಿ (ರಾಯಚೂರು): ಶನಿವಾರ ನಡೆಯುವ ಮಸ್ಕಿ ವಿಧಾನಸಭೆ ಉಪ ಚುನಾವಣೆಗಾಗಿ ಜಿಲ್ಲಾಡಳಿತ ಎಲ್ಲಾ ಸಿದ್ಧತೆಗಳ ನಡೆಸಿದೆ.
ರಾಯಚೂರು ಜಿಲ್ಲೆಯ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ನಿನ್ನೆ (ಏ. 15) ತೆರೆಬಿದ್ದಿದ್ದು, ಈ ನಡುವೆ ಕೋವಿಡ್ ನಿಯಮಗಳ ಪ್ರಕಾರ ಮನೆ ಮನೆ ಪ್ರಚಾರ ಮಾಡಬಹುದು ಎಂದು ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಆರ್.ವೆಂಕಟೇಶ್ ಕುಮಾರ್ ತಿಳಿಸಿದ್ದಾರೆ.
ಶಾಂತಿಯುತ ಹಾಗೂ ಸುಗಮ ಮತದಾನಕ್ಕಾಗಿ ಸಕಲ ತಯಾರಿ ನಡೆಸಿದ್ದು, ಚುನಾವಣೆ ನೀತಿ ಸಂಹಿತೆ ಜಾರಿ ಬಳಿಕ ಇದುವರೆಗೆ 60 ದೂರು ದಾಖಲಾಗಿವೆ. 46 ಕೋವಿಡ್ ಪ್ರಕರಣ, 14 ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳಾಗಿವೆ. ಇದರಲ್ಲಿ 7 ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಮತದಾನಕ್ಕಾಗಿ ಸಿಬ್ಬಂದಿಯವರಿಗೆ ಸರಿಯಾದ ತರಬೇತಿ ನೀಡಲಾಗಿದೆ. ಎಲ್ಲಾ ನಿರ್ಣಾಯಕ ಮತದಾನ ಕೇಂದ್ರಗಳು ಮತ್ತು ದುರ್ಬಲ ಪ್ರದೇಶಗಳಲ್ಲಿ ವೆಬ್‌ಕಾಸ್ಟಿಂಗ್ ಸೌಲಭ್ಯ, ಸೂಕ್ಷ್ಮ ವೀಕ್ಷಕರು ಮತ್ತು ವೀಡಿಯೋಗ್ರಾಫರ್‌ಗಳನ್ನು ನಿಯೋಜಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಕ್ಷೇತ್ರದಲ್ಲಿ ಒಟ್ಟು 62 ಸೂಕ್ಷ್ಮ, 07 ಅತಿ ಸೂಕ್ಷ್ಮ ಮತಗಟ್ಟೆಗಳಿವೆ. ಚುನಾವಣೆ ಕರ್ತವ್ಯಕ್ಕೆ 739 ಪೊಲೀಸ್ ಕಾನ್ಸ್ಟೆಬಲ್, 71 ಎಎಸ್ಐ, 25 ಪಿಎಸ್ಐ, 07 ಸಿಪಿಐ, 03 ಡಿಎಸ್ಪಿ, 1 ಸಿಆರ್ಪಿಎಫ್ ಮತ್ತು ಒಂದು ಕೆಎಸ್ಆರ್ಪಿ ತುಕಡಿಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ಮಾಸ್ಕಿಯ ದೇವನಾಂಪ್ರಿಯ ಅಶೋಕ ಪದವಿ ಕಾಲೇಜಿನಲ್ಲಿ ಶುಕ್ರವಾರ ಬೆಳಗ್ಗೆ 8 ಗಂಟೆಗೆ ಮಸ್ಟರಿಂಗ್ ಪ್ರಾರಂಭವಾಗಿದ್ದು, ಶನಿವಾರ ಮತದಾನ ನಡೆಯಲಿದೆ. ಮತ ಎಣಿಕೆ ಮೇ 2 ರಂದು ರಾಯಚೂರಿನ ಎಸ್‌ಆರ್‌ಪಿಎಸ್ ಪಿಯು ಕಾಲೇಜಿನಲ್ಲಿ ನಡೆಯಲಿದೆ ಎಂದರು.