ವಿಜಯಪುರ ಕೆಕೆಆರ್‌ಟಿಸಿ : ನಾರಾಯಣಪ್ಪ ಕುರುಬರ ಮತ್ತೆ ಮರಳಿದರೆ ಸತ್ಯಕ್ಕೆ ಸೋಲಾಗುತ್ತದೆ, ಭ್ರಷ್ಟಾಚಾರಕ್ಕೆ ಗೆಲುವಾಗುತ್ತದೆ
- ಭ್ರಷ್ಟಾಚಾರ ಆರೋಪದಡಿ ವರ್ಗಾವಣೆ ಆಗಿರುವ ಅಧಿಕಾರಿ ಮತ್ತೆ ಅದೇ ಸ್ಥಳಕ್ಕೆ ಬರಲು ಸಚಿವರು ಶಾಸಕರಿಂದ ಶಿಫಾರಸು ಪತ್ರ
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗದಿಂದ ಭ್ರಷ್ಟಾಚಾರ ಆರೋಪದಡಿಯಲ್ಲಿ ವರ್ಗಾವಣೆ ಆಗಿ ಹೋಗಿರುವ ಭ್ರಷ್ಟ ಅಧಿಕಾರಿ ನಾರಾಯಣಪ್ಪ ಕುರುಬರ ಅವರು ಮತ್ತೆ ವಿಜಯಪುರ ವಿಭಾಗಕ್ಕೆ ಮರಳಿ ಬರಲು ಶಕ್ತಿಮಿರಿ ಪ್ರಯತ್ನ ಮಾಡುತ್ತಿದ್ದಾರೆ.
ಇವರನ್ನು ಮತ್ತೆ ವಿಜಯಪುರ ವಿಭಾಗಕ್ಕೆ ತರಲು ಕೆಲವು ಶಾಸಕರು ಹಾಗೂ ಸಚಿವರು ಶಿಫಾರಸು ಪತ್ರವನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ.
ಮಾನ್ಯರೆ ಇವರು ಮರಳಿ ವಿಜಯಪುರ ವಿಭಾಗಕ್ಕೆ ಬಂದರೆ ಇನ್ನೂ ಹೆಚ್ಚಿನ ಭ್ರಷ್ಟಾಚಾರ ಮಾಡುತ್ತಾರೆ. ಇದು ಕಟ್ಟಿಟ್ಟ ಬುತ್ತಿ. ಈಗಾಗಲೇ ಇವರು ಇಲ್ಲಿ ಕೆಲಸ ಮಾಡಿ ಕೊಡುವುದಾಗಿ ಹೇಳಿ ಲಕ್ಷಗಟ್ಟಲೇ ಹಣ ತೆಗೆದುಕೊಡಿದ್ದಾರೆ.
ಇದನ್ನೂ ಓದಿ: ಲಂಚಾರೋಪ: ಕೆಕೆಆರ್‌ಟಿಸಿ ವಿಜಯಪುರ ವಿಭಾಗದ ಡಿಸಿ ನಾರಾಯಣಪ್ಪ ಕುರಬರ ಕರ್ತವ್ಯದಿಂದ ಬಿಡುಗಡೆ
ಈಗ ಕೆಲಸ ಮಾಡಿಕೊಡದ ಅಧಿಕಾರಿ ನಾರಾಯಣಪ್ಪ ಅವರನ್ನು ಹಣ ಮರಳಿ ಕೊಡಲು ಕೇಳಲು ಹೋದಾಗ ನಾನು ಮರಳಿ ಬಂದು ನಿಮ್ಮೆಲರ ಕೆಲಸ ಮಾಡಿಕೊಡುತ್ತೇನೆ ಎಂದು ಹೇಳುತ್ತಿದ್ದಾರಂತೆ.
ಮಾನ್ಯರೆ ಇವರೇನಾದರೂ ಮತ್ತೆ ವಿಜಯಪುರ ವಿಭಾಗಕ್ಕೆ ಬಂದರೆ ಭ್ರಷ್ಟಾಚಾರ ತಾಂಡವ ಆಡೋದು ಖಚಿತ. ಇವರು ಮರಳಿ ವಿಭಾಗಕ್ಕೆ ಬಂದರೆ ಸತ್ಯಕ್ಕೆ ಸೋಲಾಗುತ್ತದೆ ಹಾಗೂ ಭ್ರಷ್ಟಾಚಾರಕ್ಕೆ ಗೆಲುವು ಆಗುತ್ತದೆ.
ತಮ್ಮ ಅಧಿಕಾರ ಇರುವ ವರೆಗೂ ತಾವು ಈ ಭ್ರಷ್ಟ ನಾರಾಯಣಪ್ಪ ಕುರುಬರ ಅಧಿಕಾರಿಯನ್ನು ಮತ್ತೆ ವಿಭಾಗಕ್ಕೆ ಆದೇಶ ಮಾಡುವುದಿಲ್ಲ ಎಂಬ ಅಪಾರವಾದ ನಂಬಿಕೆ ಇದೆ ಹಾಗೂ ಈ ನಂಬಿಕೆ ತಾವು ಕಾಪಾಡಿಕೊಂಡು ಹೋಗುತ್ತೀರಿ ಎಂದು ನಂಬಿರುತ್ತೇವೆ ಎಂದು ಕೆಎಸ್‌ಆರ್‌ಟಿಸಿ ಎಂಡಿ ಶಿವಯೋಗಿ ಕಳಸದ ಅವರಿಗೆ ಈ ಮೂಲಕ ಭಾರತಿಯ ಜನತಾ ಪಕ್ಷ ಅಲ್ಪ ಸಂಖ್ಯಾತರ ಮೋರ್ಚಾದ ವಿಜಯಪುರ ಮಾಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎನ್. ಹುಂಡೇಕರ್ ಪತ್ರ ಬರೆದಿದ್ದಾರೆ.
ಇದನ್ನೂ ಓದಿ: ಕೆಕೆಆರ್‌ಟಿಸಿ ವಿಜಯಪುರ ವಿಭಾಗದ ಡಿಸಿ ನಾರಾಯಣಪ್ಪ ಕುರಬರ ಲಂಚಾವತಾರ : ಸಾಮಾಜಿಕ ಜಾಲತಾಣದಲ್ಲಿ ಭಾರಿ ಸೌಂಡ್
ಸಂಸ್ಥೆಯಲ್ಲಿ ದಕ್ಷ ಅಧಿಕಾರಿಯಾದ ನೀವು ಭ್ರಷ್ಟಾಚಾರಕ್ಕೆ ಆಸ್ಪದ ಕೊಡುವುದಿಲ್ಲ ಎಂಬ ಅಚಲವಾದ ನಂಬಿಕೆಯಿಂದ ವಿಜಯಪುರ ವಿಭಾಗದಲ್ಲಿ ಸಾವಿರಾರು ನೌಕರರು ಸೇವೆ ಸಲ್ಲಿಸುತ್ತಿದ್ದಾರೆ. ಈ ನಡುವೆ ಮತ್ತೆ ಇಂಥ ಅಧಿಕಾರಿಯನ್ನು ತಂದು ಕೂರಿಸಿದರೆ ಭ್ರಷ್ಟಾಚಾರ ಮತ್ತೆ ವಿಭಾಗದಲ್ಲಿ ಹೆಚ್ಚಾಗುತ್ತದೆ ಆದ್ದರಿಂದ ತಾವು ಕೂಲಂಕಷವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಿ ಯಾವುದೇ ಸಚಿವರು ಮತ್ತು ಶಾಸಕರ ಶಿಫಾರಸು ಪತ್ರಕ್ಕೆ ಮಣೆಹಾಕಬೇಡಿ ಎಂದು ಶಿವಯೋಗಿ ಕಳಸದ ಅವರಲ್ಲಿ ಹುಂಡೇಕರ್ ಮನವಿ ಮಾಡಿದ್ದಾರೆ.