ಬೆಂಗಳೂರು: ರಾಜ್ಯದ 5,762 ಗ್ರಾಮ ಪಂಚಾಯಿತಿಗಳ ಚುನಾವಣೆಗೆ ಇಂದು ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದ್ದು, ರಾಜ್ಯದಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಹೀಗಾಗಿ ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾಗಿದೆ.
ಡಿಸೆಂಬರ್ 22 ಮತ್ತು 27ರಂದು ಗ್ರಾಮ ಪಂಚಾಯಿತಿ ಚುನಾವಣೆ ಮತದಾನ ನಡೆಯಲಿದೆ. ಡಿಸೆಂಬರ್ 30ರಂದು ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ ಎಂದು ರಾಜ್ಯ ಚುನಾವಣಾ ಆಯುಕ್ತ ಡಾ.ಬಸವರಾಜು ಇಂದು ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೊದಲ ಹಂತದ ಚುನಾವಣೆ ಡಿಸೆಂಬರ್ 7ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ಡಿ.11 ನಾಮಪತ್ರ ವಾಪಸ್ ಪಡೆಯಲು ಕಡೆಯ ದಿನವಾಗಿದೆ. ನಾಮಪತ್ರ ಹಿಂಪಡೆಯಲು 14 ಕೊನೆಯ ದಿನ. ಅದರಂತೆ ಎರಡನೇ ಹಂತದ ಚುನಾವಣೆಗೆ ಡಿಸೆಂಬರ್ 11ರಿಂದ ನಾಮಪತ್ರ ಸಲ್ಲಿಕೆ ಕಾರ್ಯ ಆರಂಭವಾಗಲಿದ್ದು, ಡಿ. 16 ನಾಮಪತ್ರ ಸಲ್ಲಿಕೆಗೆ ಕೊನೆ ದಿನ ಹಾಗೂ ಡಿಸೆಂಬರ್ 19 ನಾಮಪತ್ರ ಹಿಂಪಡೆಯಲು ಕೊನೇ ದಿನವಾಗಿದೆ ತಿಳಿಸಿದರು.
ಡಿಸೆಂಬರ್ 7 ರಂದು ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣೆಗೆ ಅಧಿಸೂಚನೆ ಹೊರಬೀಳಲಿದೆ. 92,121 ಸದಸ್ಯರ ಆಯ್ಕೆಗೆ ಚುನಾವಣೆ ನಡೆಯಲಿದೆ. ಮೊದಲ ಹಂತದಲ್ಲಿ 2,930 ಗ್ರಾಪಂಗಳಿಗೂ, 2ನೇ ಹಂತದಲ್ಲಿ 2832 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯಲಿದೆ ಎಂದು ವಿವರಿಸಿದ್ದಾರೆ.
ಬೀದರ್ ಜಿಲ್ಲೆಯಲ್ಲಿ ಮಾತ್ರ ಮತದಾನಕ್ಕೆ ಇವಿಎಂ ಯಂತ್ರಗಳ ಬಳಕೆ ಮಾಡಲಾಗುತ್ತದೆ. ಉಳಿದೆಡೆ ಮತ ಪತ್ರಗಳ ಮೂಲಕ ಹಕ್ಕು ಚಲಾಯಿಸಬಹುದು ಎಂದು ತಿಳಿಸಿದರು.
ಮರು ಮತದಾನದ ಅವಶ್ಯವಿದ್ದರೆ ಡಿ.24 ಮತ್ತು 29ರಂದು ಅವಕಾಶ ಕಲ್ಪಿಸಲಾಗುವುದು. ಇನ್ನು ಕೊರೊನಾ ಸೋಂಕಿತರು ಮತದಾನ ಮಾಡಲು ಕೊನೆ 1 ಗಂಟೆಯಲ್ಲಿ ಅವಕಾಶ ಮಾಡಿಕೊಡಲಾಗುವುದು ಎಂದು ಹೇಳಿದರು.
30ಕ್ಕೆ ಪಂಚಾಯಿತಿ ಚುನಾವಣೆ ಫಲಿತಾಂಶ ಪ್ರಕಟಗೊಳ್ಳಲಿದೆ ಎಂದು ಡಾ.ಬಸವರಾಜು ತಿಳಿಸಿದರು.