ಬೆಂಗಳೂರು ಗ್ರಾಮಾಂತರ: ಇತ್ತೀಚಿನ ದಿನಗಳಲ್ಲಿ 30 ವರ್ಷ ಮೇಲ್ಪಟ್ಟವರಲ್ಲಿಯೂ ಹೆಚ್ಚಾಗಿ ಮಧುಮೇಹ ಕಾಯಿಲೆ ಕಂಡುಬರುತ್ತಿದ್ದು, ಈ ಕುರಿತು ಸ್ಥಳೀಯವಾಗಿ ಜನರಲ್ಲಿ ಅರಿವು ಮೂಡಿಸುವುದರ ಜೊತೆಗೆ, ಜಿಲ್ಲೆಯಲ್ಲಿ ತಪಾಸಣೆಯ ಶಿಬಿರಗಳನ್ನು ಹಮ್ಮಿಕೊಂಡು ಆರಂಭದ ಹಂತದಲ್ಲಿಯೇ ಕಾಯಿಲೆಯನ್ನು ಪತ್ತೆಹಚ್ಚಿ, ಔಷಧ ಹಾಗೂ ಸೂಕ್ತ ಚಿಕಿತ್ಸೆ ನೀಡಬೇಕು ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ದೇವನಹಳ್ಳಿ ತಾಲೂಕಿನ ಬೀರಸಂದ್ರ ಗ್ರಾಮದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿಂದು ನಡೆದ “ವಿಶ್ವ ಮಧುಮೇಹ ದಿನಾಚರಣೆ ಹಾಗೂ ಸಪ್ತಾಹ”ದ ಅಂಗವಾಗಿ ಮಧುಮೇಹ ತಪಾಸಣೆ ಹಾಗೂ ಅರಿವು ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ, ಮಾತನಾಡಿದರು.
ಜಿಲ್ಲೆಯಲ್ಲಿ ನವೆಂಬರ್ 14 ರಿಂದ 21ರವರಗೆ ಮಧುಮೇಹ ತಪಾಸಣಾ ಹಾಗೂ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಆಧುನಿಕ ಜೀವನ ಶೈಲಿ, ಒತ್ತಡ, ಚಟುವಟಿಕೆ ರಹಿತ ದಿನಚರಿ ಹಾಗೂ ಆಹಾರಪದ್ದತಿಯಲ್ಲಿನ ಬದಲಾವಣೆ ಮುಂತಾದ ಕಾರಣದಿಂದಾಗಿ ಚಿಕ್ಕ ವಯಸ್ಸಿನಲ್ಲಿಯೇ ಮಧುಮೇಹ, ಇನ್ನಿತರ ಖಾಯಿಲೆಗಳಿಗೆ ಒಳಪಡುತ್ತಿದ್ದು, ಮಧುಮೇಹ ರೋಗವು ಕೇವಲ ಪಟ್ಟಣದ ಜನರಿಗೆ ಮಾತ್ರವಲ್ಲದೇ ಹಳ್ಳಿಗಳಲ್ಲೂ ಕಂಡುಬರುತ್ತಿದೆ ಎಂದರು.
ಜನರಿಗೆ ಮಧುಮೇಹದಿಂದ ಉಂಟಾಗುವ ತೊಂದರೆ ಕುರಿತಂತೆ ಮಾಹಿತಿ ಕೊರತೆಯಿದ್ದು, ನಿರ್ಲಕ್ಷ್ಯ ವಹಿಸುವುದರಿಂದ ಹೃದಯಾಘಾತ, ಕಿಡ್ನಿ ವೈಫಲ್ಯ, ನರ ದೌರ್ಬಲ್ಯ, ಕಣ್ಣಿನ ದೃಷ್ಟಿ ಕ್ಷೀಣತೆ ಮುಂತಾದ ಬಹು ಅಂಗಾಂಗ ವೈಫಲ್ಯಗಳಿಗೆ ಕಾರಣವಾಗುವುದರಿಂದ ಜನರು ಪ್ರಾಣ ಕಳೆದುಕೊಳ್ಳುವಂತಾಗುತ್ತಿದೆ ಎಂದು ತಿಳಿಸಿದರು.
ಚಿಕ್ಕವಯಸ್ಸಿನಲ್ಲೇ ಸುಮಾರು ಜನರಿಗೆ ಬಿ.ಪಿ., ಶುಗರ್ ಕಂಡುಬರುತ್ತಿರುವುದು ಆತಂಕಕಾರಿ ವಿಚಾರವಾಗಿದ್ದು, ಮೆದುಳು ಹಾಗೂ ದೇಹಕ್ಕೆ ಹೆಚ್ಚಿನ ಒತ್ತಡ ನೀಡುವುದರಿಂದ ಆರೋಗ್ಯದ ಮೇಲೆ ಅನೇಕ ರೀತಿಯ ದುಷ್ಪರಿಣಾಮ ಬೀರುತ್ತದೆ ಎಂದರಲ್ಲದೆ, ಸದಾ ಖುಷಿಯಿಂದ ಕೂಡಿರುವುದು, ಯೋಗ, ವಾಕಿಂಗ್ ಹಾಗೂ ಸರಿಯಾದ ಆಹಾರ ಕ್ರಮ ಅಳವಡಿಕೆ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಆರ್.ರವಿಕುಮಾರ್ ಮಾತನಾಡಿ, ಇಂದಿನ ಜೀವನ ಶೈಲಿ ಜನರಲ್ಲಿ ಅನೇಕ ಕಾಯಿಲೆಗಳಿಗೆ ಕಾರಣವಾಗುತ್ತಿದೆ ಎಂದರಲ್ಲದೆ, ಜಿಲ್ಲೆಯಾದ್ಯಂತ ಸಾರ್ವಜನಿಕರಲ್ಲಿ ಮಧುಮೇಹದ ಬಗ್ಗೆ ಜಾಗೃತಿ ಮೂಡಿಸಿ ಚಿಕಿತ್ಸೆ ಹಾಗೂ ಔಷಧೀಯಗಳನ್ನು ನೀಡಲಾಗುವುದು ಎಂದು ತಿಳಿಸಿದರು.
ಸರ್ಕಾರಿ ಅಧಿಕಾರಿಗಳು ಕೆಲಸಕ್ಕೆ ಸೇರಿಕೊಳ್ಳುವಾಗ ಆರೋಗ್ಯವಂತರಾಗಿರುತ್ತಾರೆ. ಆದರೆ, ಕೆಲಸದ ಒತ್ತಡಕ್ಕೆ ಒಳಗಾಗಿ ನಿವೃತ್ತಿ ಸಮಯದಲ್ಲಿ ಬಿ.ಪಿ., ಶುಗರ್ ಖಾಯಿಲೆಗಳನ್ನು ಜೊತೆಯಲ್ಲಿಯೇ ಕೊಂಡ್ಯೊಯುತ್ತಾರೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ತಿಪ್ಪೇಸ್ವಾಮಿ ಮಾತನಾಡಿ, ಮಧುಮೇಹವು ಜನರಲ್ಲಿ ಸಾಮಾನ್ಯವಾಗಿ ಕಂಡುಬರುತ್ತಿರುವ ಖಾಯಿಲೆಯಾಗಿದ್ದು, ದೇಶದಲ್ಲಿ ಶೇ.10ರಷ್ಟು ಜನ ಮಧುಮೇಹದಿಂದ ಬಳಲುತ್ತಿರುವುದರಿಂದ ಜಿಲ್ಲೆಯಲ್ಲಿನ ತಾಲ್ಲೂಕು ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಮೂವತ್ತು ವರ್ಷ ಮೇಲ್ಪಟ್ಟವರಿಗೆ ಶುಗರ್ ಮತ್ತು ಬಿಪಿ ತಪಾಸಣೆ ನಡೆಸಿ, ಚಿಕಿತ್ಸೆ ನೀಡಲಾಗುವುದು ಎಂದು ತಿಳಿಸಿದರು.
ಮಹಿಳೆಯರಲ್ಲಿ ಕಂಡುಬರುವ ಸ್ತನ ಕ್ಯಾನ್ಸರ್, ಗರ್ಭ ಕೋಶ ಸಂಬಂಧಿಸಿದ ಕಾಯಿಲೆ ಹಾಗೂ ಪುರುಷರಲ್ಲಿ ಹೆಚ್ಚಿನದಾಗಿ ಕಂಡುಬರುವ ಓರಲ್ ಕ್ಯಾನ್ಸರ್ ಕುರಿತಂತೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಧರ್ಮೇಂದ್ರ, ಆರೋಗ್ಯ ಇಲಾಖೆ ವೈದ್ಯಾಧಿಕಾರಿಗಳು, ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.