ರಾಮನಗರ: ಅವರು 20 ಕೆರೆ ತುಂಬಿಸಿರೋದಕ್ಕೆ ಭಗೀರಥ ಆಗಿಬಿಟ್ಟರು, ನಾನು 128 ಕೆರೆ ತುಂಬಿಸಿದ್ದೇನೆ. ನಾನು ಪ್ರಾಮಾಣಿಕವಾಗಿ ಕೆಲಸ ಮಾಡಿರುವ ವ್ಯಕ್ತಿ ಎಂದು ಹೆಸರೇಳದೆ ಸಿ.ಪಿ.ಯೋಗೇಶ್ವರ್ ವಿರುದ್ಧ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಚನ್ನಪಟ್ಟಣ ತಾಲೂಕಿನಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಮ್ಮ ಜಿಲ್ಲೆಯ ನಾಲ್ವರನ್ನು ಮಂತ್ರಿ ಮಾಡಲಿ. ಯಾರನ್ನು ಮಂತ್ರಿ ಮಾಡಬೇಡಿ ಎಂದು ಹೇಳುವಷ್ಟು ಕೀಳುಮಟ್ಟಕ್ಕೆ ನಾನು ಇಳಿಯುವುದಿಲ್ಲ. ಯಾರನ್ನಾದರೂ ಮಂತ್ರಿ ಮಾಡಲಿ, ಚನ್ನಪಟ್ಟಣಕ್ಕೆ ನಾನೇ ಸಚಿವ, ನಾನೇ ಸರ್ಕಾರ ಎಂದು ಗುಡುಗಿದ್ದಾರೆ.
ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚರ್ಚಿಸಲು ಸಿಎಂ ಅವರನ್ನು ಭೇಟಿ ಮಾಡಿದ್ದೆ. ಯಾರನ್ನೋ ಮಂತ್ರಿ ಮಾಡಬೇಡಿ ಎಂದು ಹೇಳುವುದಕ್ಕಲ್ಲ. ಬಡವರ ಭೂಮಿ ಕಬಳಿಸಲು ಹೊರಟವರು ಮಂತ್ರಿಯಾಗಲು ಹೊರಟಿದ್ದಾರೆ. ಇಲ್ಲಿ ಯಾರೋ ಮಂತ್ರಿಯಾದರೆ ಹೆದರಿಕೊಂಡು ಹೋಗುವ ಜಾಯಮಾನ ನನ್ನದಲ್ಲ ಎಂದು ಕಿಡಿಕಾರಿದರು.
ಎಂಥೆಂತವರನ್ನು ನಾವು ನೋಡಿಲ್ಲ, ಇಲ್ಯಾರೋ ಮಂತ್ರಿಯಾದರೆ ಹೆದರಿಕೊಂಡು ಹೋಗುತ್ತೀವಾ ಎಂದ ಅವರು, ಲಿಂಗಾಯತ ಸಮುದಾಯವನ್ನು ಒಬಿಸಿಗೆ ಸೇರ್ಪಡೆ ಮಾಡಲು ಶಿಫಾರಸು ಮಾಡುವ ಬಗ್ಗೆ ಚರ್ಚೆ ಮಾಡುವುದಿಲ್ಲ. ಸ್ವಾರ್ಥಕ್ಕಾಗಿ ಮಾಡುತ್ತಿರುವ ವಿವಾದಾತ್ಮಕ ವಿಚಾರಕ್ಕೆ ತಲೆಹಾಕುವುದಿಲ್ಲಎಂದರು.