ಮುಂಬೈ: ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರಿಗೆ ಮಧ್ಯಂತರ ವೇತನವನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಸಾರಿಗೆ ಸಚಿವ ಅನಿಲ್ ಪರಬ್ ಬುಧವಾರ ಘೋಷಿಸಣೆ ಮಾಡಿದ್ದಾರೆ.
ಆದರೂ ನಮಗೆ ಮಧ್ಯಂತರ ವೇತನ ಹೆಚ್ಚಳ ಗೋಷಣೆ ಬೇಡ. ಎಂಎಸ್‌ಆರ್‌ಟಿಸಿಯನ್ನು ಸರ್ಕಾರದೊಂದಿಗೆ ವಿಲೀನಗೊಳಿಸಲೇ ಬೇಕು ಎಂದು ಮುಷ್ಕರವನ್ನು ಮುಂದುವರಿಸಿದ್ದಾರೆ.
ಈ ಮಧ್ಯಂತರ ವೇತನ ಹೆಚ್ಚಳದಿಂದ ಒಂದರಿಂದ ಹತ್ತು ವರ್ಷಗಳವರೆಗೆ ಸೇವೆಯಲ್ಲಿರುವ ಎಲ್ಲರಿಗೂ ಕನಿಷ್ಠ 2,500 ರೂ .ಗಳಿಂದ 5,000 ರೂ.ಗಳ ವರೆಗೆ ವೇತನ ಹೆಚ್ಚಳ, ಭತ್ಯೆಗಳು ಸೇರಿದಂತೆ ನೌಕರರ ಒಟ್ಟು ಮಾಸಿಕ ವೇತನ 7,500 ರೂ.ಗಳಷ್ಟು ಹೆಚ್ಚಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.
ಹೀಗಾಗಿ ಮುಷ್ಕರ ನಿಲ್ಲಿಸಿ ಕರ್ತವ್ಯಕ್ಕೆ ಹಾಜರಾಗಿ ಎಂದು ಸಚಿವರು ಮನವಿ ಮಾಡಿದ್ದು, ನಿಮಗೆ ಪ್ರತಿ ತಿಂಗಳ 10 ರೊಳಗೆ ಸಂಬಳವನ್ನು ನಿಮ್ಮ ಬ್ಯಾಂಕ್ ಖಾತೆಗೆ ಹಾಕಲಾಗುವುದು. ಇನ್ನು ಮುಷ್ಕರದ ವೇಳೆ ಮಾಡಲಾಗಿರುವ ವಜಾ, ಅಮಾನತುಗಳನ್ನು ಹಿಂತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಸಚಿವರ ಭರವಸೆಯ ಹೊರತಾಗಿಯೂ, ಆಜಾದ್ ಮೈದಾನದಲ್ಲಿ ಪ್ರತಿಭಟನಾ ನಿರತ ನೌಕರರು ನಗದು ಕೊರತೆಯಿಂದ ಬಳಲುತ್ತಿರುವ ಸಾರಿಗೆ ನಿಗಮವನ್ನು ಸರ್ಕಾರದೊಂದಿಗೆ ವಿಲೀನಗೊಳಿಸುವ ತಮ್ಮ ಬೇಡಿಕೆಯಿಂದ ಮಾತ್ರ ಹಿಂದೆ ಸರಿಯದೆ ದೃಢವಾಗಿ ನಿಂತು ಹೋರಾಟ ಮುಂದುವರಿಸಿದ್ದಾರೆ.
ಇನ್ನು ಅಮಾನತು ಮತ್ತು ವಜಾಗಳನ್ನು ತಕ್ಷಣವೇ ಹಿಂಪಡೆಯುತ್ತೇವೆ ದಯಮAಡಿ ಎಲ್ಲರೂ ಕೆಲಸಕ್ಕೆ ಮರಳಿ ಎಂದು ಸಚಿವ ಪರಬ್ ಪ್ರತಿಭಟನಾಕಾರರಿಗೆ ಮನವಿ ಮಾಡಿದರು. ಅಲ್ಲದೆ “ಮುಂಬೈನಲ್ಲಿ ಪ್ರತಿಭಟನೆ ನಡೆಸುತ್ತಿರುವ ಎಲ್ಲರಿಗೂ ತಮ್ಮ ತಮ್ಮ ಕೆಲಸದ ಸ್ಥಳಗಳನ್ನು ತಲುಪಲು ಮತ್ತು ಮರಳಿ ಕೆಲಸಕ್ಕೆ ಬರಲು ನಾನು ಹೆಚ್ಚುವರಿ ದಿನವನ್ನು ನೀಡುತ್ತಿದ್ದೇನೆ. ಅವರು ಒಂದು ದಿನದ ನಂತರ ಬರಬಹುದು ಎಂದು ಹೇಳಿದರು.
ಇನ್ನು ಮಧ್ಯಂತ ವೇತನ ಹೆಚ್ಚಳದಿಂದ ಸರ್ಕಾರದ ಮೇಲೆ 60 ಕೋಟಿ ರೂ. ಹೆಚ್ಚುವರಿ ಹೊರೆಯಾಗಲಿದೆ. ಆದರೂ ನೌಕರರ ಹಿತ ದೃಷ್ಟಿಯಿಂದ ನಾವು ಈ ರಿಸ್ಕ್ ತೆಗೆದುಕೊಂಡಿದ್ದೇವೆ ಎಂದ ಅವರು, ಆತ್ಮಹತ್ಯೆ ಮಾಡಿಕೊಂಡ ಎಲ್ಲ ನೌಕರರ ಕುಟುಂಬಕ್ಕೂ ಸಹಾನುಭೂತಿಯಿಂದ ನೋಡುತ್ತೇವೆ ಎಂದು ಭರವಸೆ ನೀಡಿದರು.
ನಿಗಮಕ್ಕೆ ಆದಾಯ ತರುವ ಎಲ್ಲ ನೌಕರರಿಗೂ ಪ್ರೋತ್ಸಾಹಧನ ನೀಡುವ ಕೆಲಸ ಮಾಡುವುದಾಗಿಯೂ ಹೇಳಿದ ಸಚಿವರು, ಎಂಎಸ್‌ಆರ್‌ಟಿಸಿಯ ಇತಿಹಾಸದಲ್ಲಿ ಎಂದಿಗೂ ನೌಕರರಿಗೆ ಈ ರೀತಿಯ ಸರಿ ಸುಮಾರು 7500 ರೂ. ವರೆಗೆ ಬಂದೇ ಬಾರಿಗೆ ವೇತನ ಹೆಚ್ಚಳವನ್ನು ನೀಡಲಾಗಿಲ್ಲ. ಹೀಗಾಗಿ ಈ ವೇತನ ಹೆಚ್ಚಳವು ಐತಿಹಾಸಿಕವಾಗಿದೆ ಎಂದು ತಿಳಿಸಿದರು.
ಲಾಕ್‌ಡೌನ್‌ನಿಂದ ಎಂಎಸ್‌ಆರ್‌ಟಿಸಿ ಭಾರಿ ನಷ್ಟವನ್ನು ಅನುಭವಿಸುತ್ತಿದೆ ಮತ್ತು ರಾಜ್ಯ ಸರ್ಕಾರವು ಇಲ್ಲಿಯವರೆಗೆ 2,700 ಕೋಟಿ ರೂ.ಗಳನ್ನು ನೌಕರರ ವೇತನಕ್ಕೆ ನೀಡಿದೆ. ಆದರೂ “ನಮಗೆ ವೇತನ ಹೆಚ್ಚಳ ಮಾಡುವುದು ಬೇಕಾಗಿಲ್ಲ. ಬದಲಿಗೆ ವಿಲೀನ ಮಾಡಲೇ ಬೇಕು ಎಂದು ಪಟ್ಟು ಹಿಡಿದು ನೌಕರರು ಕುಳಿತಿದ್ದಾರೆ.
ಸರ್ಕಾರ ನಿಗಮವನ್ನು ವಿಲೀನಗೊಳಿಸದ ಹೊರತು ನಾವು ಮಾಡುತ್ತಿರುವ ಮುಷ್ಕರವನ್ನು ವಾಪಸ್ ತೆಗೆದುಕೊಳ್ಳವ ಪ್ರಶ್ನೆಯೇ ಇಲ್ಲ ಎಂದು ಪ್ರತಿಭಟನಾನಿರತ ನೌಕರರು ಪಟ್ಟು ಹಿಡಿದು ಹೋರಾಟವನ್ನು ಮುಂದುವರಿಸಿದ್ದಾರೆ.
ನಾವು ನಿಮ್ಮ ಮಧ್ಯಂತರ ವೇತನಕ್ಕೆ ಮಣಿಯುವುದಿಲ್ಲ, ಎಂದು ಆಜಾದ್ ಮೈದಾನದಲ್ಲಿ ಪ್ರತಿಭಟನಾ ನಿರತ ನೌಕರರೊಬ್ಬರು ಹೇಳಿದರು. ಮುಷ್ಕರದ ನೇತೃತ್ವ ವಹಿಸಿರುವವರು ಸರ್ಕಾರದ ಪ್ರಸ್ತಾಪ ಕುರಿತು ಎಲ್ಲಾ ನೌಕರರೊಂದಿಗೆ ಸಮಾಲೋಚಿಸಿ ಮತ್ತು ಒಂದು ಅಥವಾ ಎರಡು ದಿನಗಳಲ್ಲಿ ಒಂದು ಅಂತಿಮ ತೀರ್ಮಾನಕ್ಕೆ ಬರುತ್ತೇವೆ ಎಂದು ಹೇಳಿರುವುದಾಗಿ ತಿಳಿದು ಬಂದಿದೆ.