ವಿಜಯಪಥ ಸಮಗ್ರ ಸುದ್ದಿ
ತಿ.ನರಸೀಪುರ: ಮಹಾರಾಷ್ಟ್ರದಲ್ಲಿ ಬಂಧನ ವಾಗಿರುವ ಅಂಬೇಡ್ಕರ್ ವಾದಿ ಚಿಂತಕ ಹಾಗೂ ಸಾಮಾಜಿಕ ಹೋರಾಟಗಾರ ಡಾ.ಆನಂದ ತೇಲ್ತುಂಬ್ಡೆ ಬಿಡುಗಡೆಗೆ ಆಗ್ರಹಿಸಿ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ದಲಿತ ವಿರೋಧಿ ದಮನಕಾರಿ ಧೋರಣೆಗಳನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ಹಾಗೂ ಮುಖಂಡರು ಪ್ರತಿಭಟನೆ ನಡೆಸಿದರು.
ಪಟ್ಟಣದ ತಾಲೂಕು ಕಚೇರಿ ಮುಂಭಾಗದ ಉದ್ಯಾನವನದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಬಳಿ ಬುಧವಾರ ಜಮಾವಣೆಗೊಂಡ ಸಮಿತಿಯ ಮುಖಂಡರು ಹಾಗೂ ಕಾರ್ಯಕರ್ತರು ಕಳೆದೊಂದು ವರ್ಷದಿಂದ ಬಂಧನದಲ್ಲಿರುವ ತೇಲ್ತುಂಬ್ಡೆ ಅವರನ್ನು ಬಿಡುಗಡೆ ಮಾಡದಿರುವ ಕ್ರಮವನ್ನು ಖಂಡಿಸಿ, ಪ್ರಜಾತಂತ್ರ ವಾದಿಗಳು ಮತ್ತು ಶೋಷಿತರ ಪರವಾದ ಹೋರಾಟಗಾರರ ಅಕ್ರಮ ಬಂಧನವನ್ನು ನಿಲ್ಲಿಸುವಂತೆ ಒತ್ತಾಯಿಸಿ ಪ್ರತಿಭಟನಾ ಧರಣಿಯನ್ನು ನಡೆಸಿದರು.
ಕೇಂದ್ರ ಮತ್ತು ರಾಜ್ಯದಲ್ಲಿ ನ ಆಡಳಿತರೂಢ ಸರ್ಕಾರಗಳ ವಿರುದ್ಧ ಧಿಕ್ಕಾರ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು ದೇಶದಲ್ಲಿರುವ ನಿರಂಕುಶ ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯ ವಿರುದ್ಧವೂ ಹರಿಹಾಯ್ದರು. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ನಮಗೆಲ್ಲರಿಗೂ ನ್ಯಾಯದ ದಿನವಾಗಿದೆ. ಇನ್ನಾದರೂ ಕೇಂದ್ರ ಸರ್ಕಾರ ಆನಂದ ತೇಲ್ತುಂಬ್ಡೆ ಅವರನ್ನು ಬಿಡುಗಡೆ ಮಾಡಬೇಕು. ದಲಿತ ದಮನಕಾರಿ ಧೋರಣೆಯನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯ ನೇತೃತ್ವವನ್ನು ವಹಿಸಿದ್ದ ದಸಂಸ ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ್ ಮಾತನಾಡಿ, ಕೋಮುವಾದಿ ಮನಸ್ಥಿತಿಯುಳ್ಳ ಸರ್ಕಾರ ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರವನ್ನು ನಡೆಸುತ್ತಿರುವ ಪರಿಣಾಮ ಬಜೆಟ್ನಲ್ಲಿ ಶೋಷಿತರ ಅಭಿವೃದ್ಧಿಗೆ ಮೀಸಲಾಗಿ ಇಡುತ್ತಿದ್ದ ಅನುದಾನದಲ್ಲಿ 5000 ಕೋಟಿ ಹಣಕ್ಕೆ ಕತ್ತರಿ ಹಾಕಲಾಗಿದೆ. ಶಿಕ್ಷಣ ನೀತಿಯನ್ನು ಬದಲಿಸುವ ಮೂಲಕ ದಲಿತರು ಹಾಗೂ ಹಿಂದುಳಿದ ವರ್ಗಗಳ ಮಕ್ಕಳಿಗೆ ಶಿಕ್ಷಣವನ್ನು ವಂಚಿಸುವ ಹುನ್ನಾರವನ್ನು ನಡೆಸಲಾಗುತ್ತಿದೆ.
ಕೊರೊನಾ ಎರಡನೇ ಅಲೆ ವ್ಯಾಪಿಸುತ್ತಿರುವ ಸಂಕಷ್ಟದಲ್ಲೂ ಸುಳ್ಳು ಕೇಸ್‌ಹಾಕಿ ತೇಲ್ತುಂಬ್ಡೆ ಅವರನ್ನು ಬಿಡುಗಡೆ ಮಾಡದೆ ಜೈಲಿನಲ್ಲಿಯೇ ಕೊಳೆಯುವಂತೆ ಮಾಡಿರುವುದು ಖಂಡನೀಯ. ಮಾನವ ಹಾಗೂ ಸಾಮಾಜಿಕ ವಿರೋಧಿ ಸರ್ಕಾರ ತನ್ನ ನಿಲುವನ್ನು ಬದಲಿಸಿಕೊಳ್ಳದಿದ್ದರೆ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಅವರನ್ನು ಅಧಿಕಾರದಿಂದ ಕಿತ್ತೊಗೆಯಲು ದಲಿತ ಸಂಘರ್ಷ ಸಮಿತಿ ಸಜ್ಜಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜಯಂತಿಯ ಪ್ರಯುಕ್ತ ಅಂಬೇಡ್ಕರ್ ಪುತ್ತಳಿಗೆ ಮಾಲಾರ್ಪಣೆ ಮಾಡಿದ ಬಳಿಕ ಪ್ರತಿಭಟನೆಯನ್ನು ಅಂತ್ಯಗೊಳಿಸಲಾಯಿತು. ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ರಾದ ಸಿ.ಉಮಾ ಮಹದೇವ, ಯಡದೊರೆ ಮಹದೇವಯ್ಯ, ತಾಲೂಕು ಸಂಚಾಲಕರಾದ ಯಾಚೇನಹಳ್ಳಿ ಸೋಮಶೇಖರ್, ಎಂ.ಸಿದ್ದರಾಜು, ಮುಖಂಡರಾದ ಆಲಗೂಡು ನಾಗರಾಜು, ಮದನ, ಶಾಂತಕುಮಾರ, ರಾಜು, ಹಿರಿಯೂರು ಸೋಮಣ್ಣ, ಕಿರಗಸೂರು ರಜನಿ, ಶಿವು, ಸುಜ್ಜಲೂರು ಶಿವಯ್ಯ, ಮರಿ ಸಿದ್ದಯ್ಯ, ಸೋಸಲೆ ಶಿವಣ್ಣ, ಚಿಕ್ಕ ಬಸವರಾಜು, ಬನ್ನಳ್ಳಿ ಹುಂಡಿ ಉಮೇಶ, ಮಾವಿನಹಳ್ಳಿ ಕುಮಾರ, ನಿಲಸೋಗೆ ಸಿದ್ದರಾಜು, ರವೀಂದ್ರ, ಶಿವನಂಜು, ಸುರೇಶ, ಹೆಮ್ಮಿಗೆ ಚಂದ್ರು, ಆಸೆ ಗೌಡನ ಕೊಪ್ಪಲು ಬಸವರಾಜು, ಕೇತುಪುರ ನಾಗರಾಜು, ತೊಟ್ಟವಾಡಿ ರವಿ ಭಾಗವಹಿಸಿದ್ದರು.