ನ್ಯೂಡೆಲ್ಲಿ: ಸ್ವಾತಂತ್ರ್ಯ ಹೋರಾಟಗಾರರಾದ ಮಹಾತ್ಮ ಗಾಂಧೀಜಿ, ಬಾಲ ಗಂಗಾಧರ್ ತಿಲಕ್‍ರಂತಹವರ ವಿರುದ್ಧ ಬಳಸಲ್ಪಟ್ಟಿರುವ ದೇಶದ್ರೋಹ ಕಾನೂನು (ಐಪಿಸಿಯ ಸೆಕ್ಷನ್ 124 ಎ ) ಈಗಲೂ ಅಸ್ತಿತ್ವದಲ್ಲಿರಬೇಕೆ?, ಅದರ ಅವಶ್ಯಕತೆ ಈಗಲೂ ಇದೆಯೇ ಎಂದು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರವನ್ನು ಖಾರವಾಗಿ ಪ್ರಶ್ನಿಸಿದೆ.
ಐಪಿಸಿಯ ಸೆಕ್ಷನ್ 124 ಎ ದೇಶದ್ರೋಹ ಕಾನೂನಿನ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ತ್ರಿಸದಸ್ಯ ಪೀಠ ಇಂತಹ ಹಲವು ಪ್ರಶ್ನೆಗಳೊಂದಿಗೆ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ವಿಚಾರಣೆ ವೇಳೆ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾಯಪೀಠ, ಇದೊಂದು ವಸಾಹತುಶಾಹಿ ಕಾನೂನು. ಇದನ್ನು 1870 ರಲ್ಲಿ ಸೇರಿಸಲಾಯಿತು. ಸ್ವಾತಂತ್ರ್ಯ ಹೋರಾಟಗಾರರನ್ನು ಹತ್ತಿಕ್ಕಲು ಬ್ರಿಟಿಷರು ಈ ಕಾನೂನು ಸೇರ್ಪಡೆ ಮಾಡಿದ್ದರು. ಸ್ವಾತಂತ್ರ್ಯ ಸಿಕ್ಕಿ 73 ವರ್ಷ ಕಳೆದ ಬಳಿಕವೂ ಈ ಕಾನೂನಿನ ಅವಶ್ಯಕತೆ ಇದೆಯೇ ಎಂದು ಪ್ರಶ್ನಿಸಿದೆ.
ಈ ನಡುವೆ ದೇಶ ದ್ರೋಹದ ಪ್ರಕರಣಗಳು ಹೆಚ್ಚುತ್ತಿವೆ ಎಂದು ಪರೋಕ್ಷವಾಗಿ ಕಾನೂನು ದುರ್ಬಳಕೆ ಬಗ್ಗೆ ಕಳವಳ ವ್ಯಕ್ತಪಡಿಸಿದ ಪೀಠ, ಸ್ವಾತಂತ್ರ್ಯದ 73 ವರ್ಷದ ಬಳಿಕ ಇಂತಹ ಕಾನೂನು ಮುಂದುವರಿಸುತ್ತಿರುವುದು ದುರದೃಷ್ಟಕರ ಎಂದು ಬೇಸರವನ್ನು ಹೊರಹಾಕಿದೆ.
ಈ ಕಾನೂನು ಕಾರ್ಪೆಂಟರ್ ಬಳಿ ಇರುವ ಗರಗಸದಂತೆ ಮರ ಕತ್ತರಿಸುವ ಬದಲು ಇಡೀ ಅರಣ್ಯವನ್ನೇ ಕತ್ತರಿಸಲು ಬಳಕೆ ಮಾಡಲಾಗುತ್ತಿದೆ. ಪರಿಸ್ಥಿತಿ ಎಷ್ಟು ಕಠೋರವಾಗಿದೆ ಎಂದರೆ ನಿರ್ದಿಷ್ಟ ಧ್ವನಿಗಳನ್ನು ಕೇಳಲು ಸರ್ಕಾರಕ್ಕೆ ಇಷ್ಟವಿಲ್ಲದಿದ್ದರೆ ಅಂತಹ ಧ್ವನಿಗಳ ವಿರುದ್ಧ ಈ ಕಾನೂನು ಬಳಕೆಗೆ ಸರ್ಕಾರ ಸೂಚಿಸುತ್ತಿದೆ ಎಂದು ಆಘಾತ ವ್ಯಕ್ತಪಡಿಸಿತು. ಇದೇ ವೇಳೆ ಅವರು ಯಾವುದೇ ರಾಜ್ಯ ಅಥವಾ ಸರ್ಕಾರವನ್ನು ಉದ್ದೇಶಿಸಿ ಈ ಮಾತು ಹೇಳಿಲ್ಲ ಎಂದಿದೆ.
ಐಪಿಸಿಯ ಸೆಕ್ಷನ್ 124 ಎ ಅಡಿಯಲ್ಲಿ ದೇಶದ್ರೋಹದ ಅಪರಾಧದ ಸಾಂವಿಧಾನಿಕತೆಯನ್ನು ಪ್ರಶ್ನಿಸಿ ಸೇನೆಯ ನಿವೃತ್ತ ಮೇಜರ್-ಜನರಲ್ ಎಸ್.ಜಿ. ವೊಂಬಟ್ಕೆರ ಅರ್ಜಿ ಸಲ್ಲಿಸಿದ್ದರು. ತಮ್ಮ ವಿರುದ್ಧ ದಾಖಲಿಸಿದ್ದ ದೇಶ ದ್ರೋಹದ ಕಾನೂನನ್ನು ಅವರು ಪ್ರಶ್ನೆ ಮಾಡಿದ್ದರು.
ದೇಶಕ್ಕಾಗಿ ಸೇವೆ ಮಾಡಿದ ಯೋಧನ ಮೇಲೆ ಈ ರೀತಿಯ ಕೇಸು ದಾಖಲಿಸಿರುವುದನ್ನು ಅವರು ಪ್ರಶ್ನಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ್ದು ಕಾನೂನು ಪುನರ್ ಪರಿಶೀಲಿಸುವ ಭರವಸೆ ನೀಡಿದೆ. ಜುಲೈ 27 ರಂದು ಮುಂದಿನ ವಿಚಾರಣೆ ನಡೆಯಲಿದೆ.