ವಿಜಯಪಥ ಸಮಗ್ರ ಸುದ್ದಿ
ಪಿರಿಯಾಪಟ್ಟಣ: ಜಗತ್ತಿನಲ್ಲಿ ಮೊಟ್ಟಮದಲ ಬಾರಿಗೆ ಮಹಿಳಾ ಮೀಸಲಾತಿಗಾಗಿ ತಮ್ಮ ಸಚಿವ ಸ್ಥಾನ ತೆಜಿಸಿ ಸಂಪುಟದಿಂದ ಹೊರ ನಡೆದ ಮಹಾನ್ ನಾಯಕ ಎಂದರೆ ಅದು ಡಾ.ಅಂಬೇಡ್ಕರ್ ಮಾತ್ರ ಎಂದು ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಧ್ಯಾಪಕ ಪುಟ್ಟ ಮಾದಯ್ಯ ಹೇಳಿದರು.
ಪಟ್ಟಣದ ತಾಲೂಕು ಆಡಳಿತ ಭವನದಲ್ಲಿ ಬುಧವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಮ್ಮಿಕೊಂಡಿದ್ದ ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ ಅವರ 130ನೇ ಜನ್ಮದಿನಾಚರಣೆಯಲ್ಲಿ ಮಾತನಾಡಿದರು.
ಅಂಬೇಡ್ಕರ್ ಎಂದರೆ ಹೋರಾಟ, ಹೋರಾಟ ಎಂದರೆ ಅಂಬೇಡ್ಕರ್ ಶಕ್ತಿ. ಇವರು ತಮ್ಮ ಬದುಕನ್ನು ಹೋರಾಟದಲ್ಲೇ ಕಳೆದು ಭಾರತದಲ್ಲಿ ಸಮಾನತೆ ನೆಲೆಸಲು ಕಾರಣೀಭೂತರಾಗಿದ್ದಾರೆ.
ಯಾವುದೇ ಒಂದು ಜಾತಿ, ಧರ್ಮಕ್ಕೆ ಸೀಮಿತವಾಗಿ ಸಂವಿಧಾನ ರಚಿಸಿಲ್ಲ ದೇಶದ ಎಲ್ಲಾ ವರ್ಗದ ಜನರಿಗಾಗಿ ಸಂವಿಧಾನ ರಚಿಸಿದ್ದಾರೆ. ಜಗತ್ತಿನಲ್ಲಿ ಮೊಟ್ಟಮೊದಲ ಬಾರಿಗೆ ವಯಸ್ಕ ಮತದಾನ, ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ, ಇಂಗ್ಲಿಷ್ ಶಿಕ್ಷಣಕ್ಕಾಗಿ ಹೋರಾಟ ಸೇರಿದಂತೆ ಪ್ರಬುದ್ದ ಭಾರತದ ನಿರ್ಮಾಣಕ್ಕಾಗಿ ಹೋರಾಟ ಮಾಡಿದರು. ಶೋಷಿತ ಸಮುದಾಯಗಳಿಗೆ ಸ್ವಾಭಿಮಾನದ ಬದುಕಿನ ದಾರಿ ತೋರಿಸಿದ ಧೀಮಂತ ನಾಯಕ. ಇಡಿ ವಿಶ್ವವೇ ಮೆಚ್ಚಿಕೊಂಡಾಡುವ ನಮ್ಮ ದೇಶದ ಸಂವಿಧಾನವನ್ನು ರಚಿಸಿದ ಮಹಾನ್ ನಾಯಕರ ಅಂಬೇಡ್ಕರ್ ಎಂದರು.
ಶಾಸಕ ಕೆ.ಮಹದೇವ್ ಮಾತನಾಡಿ ಡಾ.ಅಂಬೇಡ್ಕರ್ ಮತ್ತು ಬಾಬು ಜಗಜೀವನರಾಮ್ ಅವರಂಥ ಮಹಾನ್ ವ್ಯಕ್ತಿಗಳು ಸ್ವಹಿತಾಸಕ್ತಿಗೆ ಪ್ರಾಮುಖ್ಯತೆ ನೀಡದೆ, ತ್ಯಾಗಮಯಿಗಳಾಗುವ ಮೂಲಕ ಜನರಿಗಾಗಿ, ದೇಶಕ್ಕೆ ಅಪೂರ್ವ ಸೇವೆ ಸಲ್ಲಿಸಿದ ಮಹನೀಯರಾಗಿದ್ದು, ಅಂತಹ ಸಾಧಕರು ತೋರಿದ ಹಾದಿಯಲ್ಲಿ ನಾವೆಲ್ಲರೂ ಸಾಗಬೇಕು ಎಂದರು.
ತಹಸೀಲ್ದಾರ್ ಚಂದ್ರಮೌಳಿ ಮಾತನಾಡಿ, ಅಂಬೇಡ್ಕರ್ ರಚಿಸಿದ ಸಂವಿಧಾನದಿಂದ ದೇಶದಲ್ಲಿ ಎಲ್ಲರೂ ಸಮಾನತೆ, ಸಹಬಾಳ್ವೆಯಿಂದ ಜೀವನ ನಡೆಸುತ್ತಿದ್ದೆವೆ ಎಂದರು.
ತಾಪಂ ಸದಸ್ಯ ರಾಮು ಮಾತನಾಡಿದರು. ಪುರಸಭಾ ಮುಖ್ಯಾಧಿಕಾರಿ ಎ.ಟಿ.ಪ್ರಸನ್ನ, ಅಧ್ಯಕ್ಷ ಮಂಜುನಾಥ್ ಸಿಂಗ್, ಎಇಇಗಳಾದ ಜಯಂತ್, ಶಿವಕುಮಾರ್, ಮಂಜುನಾಥ್, ಜಿಪಂ ಸದಸ್ಯೆ ಕೌಶಲ್ಯ ಲೋಕೇಶ್, ತಾಪಂ ಅಧ್ಯಕ್ಷೆ ಕೆ.ಆರ್.ನಿರೂಪ, ಸ್ಥಾಯಿ ಸಮಿತಿ ಅಧ್ಯಕ್ಷ ರಂಗಸ್ವಾಮಿ, ಸದಸ್ಯರಾದ ಮಲ್ಲಿಕಾರ್ಜುನ, ಆರ್.ಎಸ್.ಮಹದೇವ್, ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಕೆ.ತಿಮ್ಮೇಗೌಡ, ಸಮಾಜ ಕಲ್ಯಾಣಾಧಿಕಾರಿ ಸಿದ್ದೇಗೌಡ ದಸಂಸ ಮುಖಂಡರು ಇದ್ದರು.