ಬೆಂಗಳೂರು: ವಂಚನೆ ಆರೋಪದಲ್ಲಿ ಬಂಧನವಾಗಿರುವ ಯುವರಾಜ್ ಖಾತೆಯಿಂದ ಕೋಟ್ಯಂತರ ರೂಪಾಯಿ ವರ್ಗಾವಣೆ ಆಗಿದೆ ಎಂಬ ಆರೋಪದಲ್ಲಿ ನಟಿ ರಾಧಿಕಾ ಕುಮಾರಸ್ವಾಮಿಗೆ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದರು. ನೋಟಿಸ್ ಹಿನ್ನೆಲೆ ಬೆಂಗಳೂರಿನ ಸಿಸಿಬಿ ಕಚೇರಿಗೆ ಇಂದು ಭೇಟಿ ನೀಡಿದ್ದ ರಾಧಿಕಾ ಕುಮಾರಸ್ವಾಮಿ, ತಮ್ಮ ವಿಚಾರಣೆ ಮುಗಿಸಿ ಹಿಂತಿರುಗಿದ್ದಾರೆ.
ಸುಮಾರು 5 ಗಂಟೆವರೆಗೆ ಅಧಿಕಾರಿಗಳು ನಡೆಸಿದ ವಿಚಾರಣೆ ಮುಗಿಸಿ ಹೊರಗೆ ಬಂದ ನಟಿ ‘ಸಿಸಿಬಿ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದ್ದೇನೆ, ಅಗತ್ಯವಿದ್ದರೆ ಮತ್ತೆ ವಿಚಾರಣೆಗೆ ಹಾಜರಾಗುತ್ತೇನೆ ಎಂದು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದರು.
ರಾಧಿಕಾ ವಿಚಾರಣೆ ಹಿನ್ನೆಲೆ ಸಹೋದರ ರವಿರಾಜ್ ಅವರನ್ನು ಸಹ ಸಿಸಿಬಿ ಪೊಲೀಸರು ವಿಚಾರಣೆಗೆ ಒಳಪಡಿಸಿದರು. ರಾಧಿಕಾ ಹಾಗೂ ಯುವರಾಜ್ ಇಬ್ಬರನ್ನು ಮುಖಾಮುಖಿ ಕೂರಿಸಿ ಪ್ರಶ್ನೆಗಳನ್ನು ಕೇಳಿದ್ದಾರೆ ಎನ್ನಲಾಗಿದೆ. ಆದರೆ, ಸಿಸಿಬಿ ವಿಚಾರಣೆಯಲ್ಲಿ ಯಾವೆಲ್ಲ ಪ್ರಶ್ನೆಗಳು ಕೇಳಲಾಯಿತು ಹಾಗೂ ಯಾವೆಲ್ಲ ವಿಚಾರಗಳನ್ನು ಚರ್ಚಿಸಲಾಯಿತು ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.
ಇನ್ನು ಆರ್‌ಎಸ್‌ಎಸ್ ಮುಖಂಡ ಎಂದು ಹೇಳಿಕೊಂಡು ಪ್ರಭಾವಿ ವ್ಯಕ್ತಿಗಳ ಬಳಿ ಕೋಟ್ಯಂತರ ರೂಪಾಯಿ ಹಣ ಪಡೆದು ವಂಚಿಸಿರುವ ಯುವರಾಜ್, ರಾಧಿಕಾ ಕುಮಾರಸ್ವಾಮಿ ಅವರ ಖಾತೆಗೆ 15 ಲಕ್ಷ ರೂ. ಹಾಗೂ ಗೊತ್ತಿರುವವರ ಕಡೆಯಿಂದ 60 ಲಕ್ಷ ರೂ. ಸೇರಿ ಒಟ್ಟು 75 ಲಕ್ಷ ಹಣ ವರ್ಗಾವಣೆ ಮಾಡಿಸಿದ್ದಾರೆ. ಈ ಸಂಬಂಧ ಪೊಲೀಸರು ವಿವರಣೆ ನಡೆಸಿದ್ದಾರೆ ಎನ್ನಲಾಗಿದೆ.
ಇನ್ನು ರಾಧಿಕಾ ಹಾಗೂ ಯುವರಾಜ್ ಇಬ್ಬರನ್ನು ಮುಖಾಮುಖಿ ಕೂರಿಸಿ ಪ್ರಶ್ನೆಗಳನ್ನು ಅಧಿಕಾರಿಗಳು ಕೇಳುತ್ತಿದ್ದಾಗ ಈ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು ಎಂದು ಹೇಳಲಾಗುತ್ತಿದೆ. ಆದರೆ, ಅದು ಯಾವ ವಿಷಯ ಬಂದಾಗ ಇಬ್ಬರು ಕೋಪದಿಂದಲೇ ಮಾತನಾಡಿರು ಎಂಬುವುದು ತಿಳಿದಿಲ್ಲ.
ಸಿಸಿಬಿ ಕಚೇರಿಯಲ್ಲಿ ವಿಚಾರಣೆ ಮುಗಿಸಿಕೊಂಡು ಹೊರ ಬಂದ ರಾಧಿಕಾ ಕುಮಾರಸ್ವಾಮಿ ಮೈಸೂರಿನ ಕಡೆ ಪ್ರಯಾಣ ಬೆಳೆಸಿದ್ದಾರೆ ಎಂದು ಹೇಳಲಾಗಿದೆ.
ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿದ್ದು ರಾಧಿಕಾ ”75 ಲಕ್ಷ ಹಣ ನನ್ನ ಖಾತೆಗೆ ಬಂದಿರುವುದು ನಿಜ. ಅದು ಸಿನಿಮಾ ಸಂಬಂಧ ಅಡ್ವಾನ್ಸ್ ನೀಡಿದ್ದರು. ಅದನ್ನು ಬಿಟ್ಟರೆ ಬೇರೆ ವ್ಯವಹಾರವೂ ನಡೆದಿಲ್ಲ” ಎಂದು ಹೇಳಿದ್ದರು.