ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ರಾಜ್ಯದಲ್ಲಿ ಮುಂಬರುವ ಉಪ ಚುನಾವಣೆ ಮೇಲೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಈ ಕುರಿತು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಗರಣ ಉಪಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ರಮೇಶ್ ಜಾರಕಿಹೊಳಿ ಅವರಿಗೆ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಲು ತಿಳಿಸುತ್ತೇನೆ ಎಂದರು.
ರಮೇಶ್ ಜಾರಕಿಹೊಳಿ ವಿರುದ್ಧ ಅನಗತ್ಯ ಆರೋಪಗಳನ್ನು ಮಾಡಲಾಗಿದೆ. ಈ ಆರೋಪ ದುರುದ್ದೇಶಪೂರಕವಾಗಿದೆ. ಹೀಗಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಈ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆಯಾಗುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಕೆಲಸ ಕೊಡಿಸುವ ನೆಪದಲ್ಲಿ ಯುವತಿಯನ್ನು ದೈಹಿಕವಾಗಿ ಬಳಸಿಕೊಂಡು ವಂಚಿಸಿದ ಆರೋಪ ರಮೇಶ್ ಜಾರಕಿಹೊಳಿ ಅವರ ಮೇಲಿದ್ದು, ಮಾರ್ಚ್ 2ರಂದು ಅವರು ಯುವತಿಯೊಂದಿಗಿದ್ದ ಸಿಡಿ ಬಿಡುಗಡೆಯಾಗಿತ್ತು. ಆದರೆ ಈ ಆರೋಪವನ್ನು ಜಾರಕಿಹೊಳಿ ತಳ್ಳಿಹಾಕಿದ್ದಾರೆ. ರಮೇಶ್ ಜಾರಕಿಹೊಳಿ ಅವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಬಸವಕಲ್ಯಾಣ, ಮಸ್ಕಿ ಕ್ಷೇತ್ರಗಳಿಗೆ ಉಪ ಚುನಾವಣೆ ಹಾಗೂ ಬೆಳಗಾವಿ ಲೋಕಸಭೆ ಉಪ ಚುನಾವಣೆಯು ಏಪ್ರಿಲ್ 17ರಂದು ನಡೆಯುತ್ತಿದ್ದು, ಈ ಸಿಡಿ ಹಗರಣ ಚುನಾವಣೆ ಮೇಲೆ ಪರಿಣಾಮ ಬೀರಬಹುದು ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಸಿಎಂ ಆ ಎಲ್ಲಾ ಮಾತುಗಳನ್ನು ತಳ್ಳಿಹಾಕಿದ್ದಾರೆ.