ವಿಜಯಪಥ ಸಮಗ್ರ ಸುದ್ದಿ
ಕೋಲಾರ: ಪ್ರಮುಖವಾಗಿ ವೇತನ ಹೆಚ್ಚಳಕ್ಕೆ ಆಗ್ರಹಿಸಿ ಸಾರಿಗೆ ನೌಕರರು ನಡೆಸುತ್ತಿರುವ ಬಸ್ ಮುಷ್ಕರ ಇಂದು ಒಂಬತ್ತನೇ ದಿನಕ್ಕೆ ಕಾಲಿಟ್ಟಿದೆ.
ಈ ನಡುವೆ ಗುರುವಾರ ಕೋಲಾರದ ಬಸ್ ಡಿಪೋ ಬಳಿ ಸಾರಿಗೆ ನೌಕರರ ಕುಟುಂಬಸ್ಥರಿಂದ ದಿಢೀರ್ ಪ್ರತಿಭಟನೆ ನಡೆದಿದ್ದು, ನೌಕರರಿಗೆ ಮಾರ್ಚ್ ತಿಂಗಳ ವೇತನ ನೀಡುವಂತೆ ಒತ್ತಾಯಿಸಿದರು.
ಈ ವೇಳೆ ಸಾರಿಗೆ ನೌಕರರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದ್ದು, ಪ್ರತಿಭಟನಾಕಾರರನ್ನು ಡಿಪೋ ಒಳಗೆ ಬಿಡದೆ ಗೇಟ್ ಬಳಿ ಪೊಲೀಸರು ತಡೆದಿದ್ದರು. ಇದರಿಂದ ಕುಪಿತಗೊಂಡ ಪ್ರತಿಭಟನಾಕಾರರು ಮಾರ್ಚ್ ನಲ್ಲಿ ದುಡಿದ ವೇತನ ಕೊಡಲು ಮೀನಮೇಷ ಎಣಿಸುತ್ತಿರುವ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.
ಸಾರಿಗೆ ನೌಕರರ ಜೊತೆ ಮಹಿಳೆಯರು ಮತ್ತು ಮಕ್ಕಳು ಪ್ರತಿಭಟನೆ ನಡೆಸುತ್ತಿದ್ದು, ನಮ್ಮ ನ್ಯಾಯ ನಾವು ಕೇಳುತ್ತಿದ್ದೇವೆ ಒಳಗೆ ಬಿಡಿ ಎಂದು ಪಟ್ಟುಹಿಡಿದರು.
ಈ ವೇಳೆ ಪರಿಸ್ಥಿತಿ ತಿಳಿಗೊಳಿಸಲು ಮುಂದಾದ ಗಲ್ ಪೇಟೆ ಪೊಲೀಸರು ಪ್ರತಿಭಟನಾ ನಿರತ 20 ಜನ ಮಹಿಳೆಯರನ್ನು ಬಂಧಿಸಿದ್ದು, ಬಸ್ ಡಿಪೋ ಬಳಿ 144 ಸೆಕ್ಷನ್ ಜಾರಿ ಹಿನ್ನೆಲೆ ಪ್ರತಿಭಟನೆಗೆ ಅವಕಾಶ ನೀಡಿಲ್ಲ.
ರಾಜ್ಯ ಸರ್ಕಾರದ ವಿರುದ್ಧ ಸಾರಿಗೆ ನೌಕರರ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಮತ್ತೊಮ್ಮೆ ಬಿಜೆಪಿ ಪರ ಮತ ನೀಡುವುದಿಲ್ಲ ಎಂದು ಕೂಗುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದರು.