ವಿಜಯಪಥ ಸಮಗ್ರ ಸುದ್ದಿ
ಬೆಳಗಾವಿ: ಭಾರತದ ಅಗ್ರಗಣ್ಯ ರೈತ ನಾಯಕ, ಭಾರತ ಸರ್ಕಾರದ ಗ್ರಾಮೀಣಾಭಿವೃದ್ಧಿಯ ಮಾಜಿ ಸಚಿವ, ರೈತ ಮುಖಂಡ ಬಾಬಗೌಡ ರುದ್ರಗೌಡ ಪಾಟೀಲ್ (80) ಶುಕ್ರವಾರ ನಸುಕಿನ ಜಾವ ನಿಧನರಾಗಿದ್ದಾರೆ.
ತೀವ್ರ ರಕ್ತದ ಒತ್ತಡದಿಂದ ವಾರದ ಹಿಂದೆ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು.ಆದರೆ ಆರೋಗ್ಯದಲ್ಲಿ ಚೇತರಿಕೆ ಕಾಣದೆ ಇಂದು ಬೆಳಗ್ಗೆ ಅಸುನೀಗಿದ್ದಾರೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.
ಕರ್ನಾಟಕದ ರೈತ ಚಳುವಳಿಗಳ ಉಗಮಕ್ಕೆ ಪ್ರಮುಖರಾಗಿದ್ದ ಪಾಟೀಲರು , ಬಸವ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸೈದ್ಧಾಂತಿಕವಾಗಿ ಬದುಕನ್ನು ನಡೆಸಿದ್ದರು. ಇತ್ತೀಚಿನ ದಿನಮಾನಗಳಲ್ಲಿ ಕೃಷಿ ಜ್ಞಾನವನ್ನು ಹೊಂದಿರುವ ಕೆಲವರಲ್ಲಿ ಈ ದೇಶ ಕಂಡ ಅಪರೂಪದ ನಾಯಕರಲ್ಲಿ ಪಾಟೀಲರು ಒಬ್ಬರಾಗಿದ್ದರು. ರೈತರ ಸಂಕಷ್ಟದ ಸನ್ನಿವೇಶದಲ್ಲಿ ಬಾಬಾಗೌಡರನ್ನು ಕಳೆದುಕೊಂಡು ದೇಶದ ರೈತ ಕುಲ ಅನಾಥವಾಗಿದೆ ಎಂದು ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.
1989ರಲ್ಲಿ ಬೆಳಗಾವಿ ಮತ್ತು ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರಗಳಿಂದ ಚುನಾವಣೆಯಲ್ಲಿ ಜಯಗಳಿಸಿದ ಪಾಟೀಲ್, ಕರ್ನಾಟಕ ರಾಜ್ಯ ರೈತ ಸಂಘದ ಮೊದಲ ನಾಯಕರಾಗಿದ್ದರು. ಎರಡೂ ಕ್ಷೇತ್ರಗಳಲ್ಲಿ ಗೆದ್ದ ನಂತರ ಧಾರವಾಡ ಗ್ರಾಮೀಣ ಸ್ಥಾನವನ್ನು ಬಿಟ್ಟುಬಿಟ್ಟಿದ್ದರು. ನಂತರ ಆ ಸ್ಥಾನಕ್ಕೆ ರಾಜ್ಯ ರೈತ ಸಂಘದ ಅಧ್ಯಕ್ಷ ಎಂ.ಡಿ.ನಂಜುಂಡಸ್ವಾಮಿ ಸ್ಪರ್ಧಿಸಿದ್ದರು.
998ರಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರವನ್ನು ಬಿಜೆಪಿ ಅಭ್ಯರ್ಥಿಯಾಗಿ ಪ್ರತಿನಿಧಿಸಿ ಸಂಸದರಾಗಿ ಗೆದ್ದುಬಂದು ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾಗಿ ಕೆಲಸ ಮಾಡಿದ್ದರು.
2000ದ ಆರಂಭದಲ್ಲಿ ಬಿಜೆಪಿ ತೊರೆದ ಬಾಬಗೌಡ ಪಾಟೀಲ್ ಅವರು ನಂತರ ಜೆಡಿಎಸ್ ಸೇರ್ಪಡೆಯಾಗಿದ್ದರು. 2013ರಲ್ಲಿ ಜೆಡಿಎಸ್ ತೊರೆದು ರೈತರನ್ನು ಸಂಘಟಿಸುವಲ್ಲಿ, ರೈತರ ಪರವಾಗಿ ಕೆಲಸ ಮಾಡುವಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಈ ಬಾರಿ ಮೊನ್ನೆ ನಡೆದ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಬೆಂಬಲ ಸೂಚಿಸಿದ್ದರು. ಪ್ರಸ್ತುತ ಇರುವ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ ಕೃಷಿ ಕಾಯ್ದೆಯನ್ನು ತೀವ್ರವಾಗಿ ವಿರೋಧಿಸಿದ್ದರು.
ಬಾಬಗೌಡ ಅವರು ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಯನ್ನು ವಿರೋಧಿಸಿ ರೈತರು ನಡೆಸುತ್ತಿದ್ದ ಪ್ರತಿಭಟನೆಯ ಮುಂಚೂಣಿ ವಹಿಸಿದ್ದರು. ಬೆಳಗಾವಿಯ ಸುವರ್ಣ ಸೌಧಕ್ಕೆ ಟ್ರ್ಯಾಕ್ಟರ್ ತಂದು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದ್ದರು. ರೈತ ವಿರೋಧಿ ಕಾನೂನು ತಂದ ಬಿಜೆಪಿಯನ್ನು ಸೋಲಿಸಬೇಕು ಎಂದು ಕರೆ ನೀಡಿದ್ದರು.
ಮಾಜಿ ಕೇಂದ್ರ ಸಚಿವ ಬಾಬಗೌಡ ಪಾಟೀಲರ ನಿಧನಕ್ಕೆ ಮುಖ್ಯಮಂತ್ರಿ @BSYBJP ರವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅವರ ನಿಧನದಿಂದ ರೈತಪರ ಕಾಳಜಿ ಹೊಂದಿದ್ದ ನಾಯಕರನ್ನು ಕಳೆದುಕೊಂಡಂತಾಗಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ, ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಮುಖ್ಯಮಂತ್ರಿಗಳು ಪ್ರಾರ್ಥಿಸಿದ್ದಾರೆ
— CM of Karnataka (@CMofKarnataka) May 21, 2021
ರೈತ ಚಳುವಳಿಯ ಮುಂಚೂಣಿ ನಾಯಕ
ಬಾಬಾಗೌಡ ಪಾಟೀಲ್ ಶಾಸಕರಾಗಿ,
ಕೇಂದ್ರ ಸಚಿವರಾಗಿ ಬದ್ಧತೆಯಿಂದ ಕಾರ್ಯನಿರ್ವಹಿಸಿದವರು.ಸಂಕಷ್ಟದಲ್ಲಿರುವ ರೈತಸಮುದಾಯಕ್ಕೆ ಪಾಟೀಲರಂತಹ ನಾಯಕರ ಅಗತ್ಯವಿರುವಾಗಲೇ ಅವರು ಅಗಲಿರುವುದು ತುಂಬಲಾರದ ನಷ್ಟ.
ಅವರ ಆತ್ಮಕ್ಕೆ ಶಾಂತಿ ಕೋರುವೆ.
ಅವರ ಕುಟುಂಬದ ಶೋಕದಲ್ಲಿ ನಾನೂ ಭಾಗಿಯಾಗಿದ್ದೇನೆ. pic.twitter.com/9wV9kPNqrU— Siddaramaiah (@siddaramaiah) May 21, 2021