ಮುಷ್ಕರ ಹತ್ತಿಕ್ಕುವ ಹುನ್ನಾರ: ಉಪವಾಸ ಸತ್ಯಾಗ್ರಹಕ್ಕೆ ಮುಂದಾದ ಸಾರಿಗೆ ನೌಕರರ ಕೂಟದ ಮತ್ತು ವಿವಿಧ ಸಂಘಟನೆಗಳ ಮುಖಂಡರ ಬಂಧನ
ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಆಯೋಜಿಸಿದ್ದ ಸಾರಿಗೆ ನೌಕರರ ಉಪವಾಸ ಸತ್ಯಾಗ್ರಹ ಹತ್ತಿಕ್ಕುವ ನಿಟ್ಟಿನಲ್ಲಿ ಇಂದು ಪೊಲೀಸರು ಸಾರಿಗೆ ನೌಕರರ ಕೂಟದ ಅಧ್ಯಕ್ಷರು, ಪದಾಧಿಕಾರಿಗಳು ಸೇರಿ ಸತ್ಯಾಗ್ರಹಕ್ಕೆ ಬೆಂಬಲ ನೀಡಿದ ವಿವಿಧ ಸಂಘಟನೆಗಳ ಪದಾಧಿಕಾರಿಗಳನ್ನು ಬಂಧಿಸಿದ್ದಾರೆ.
ಆದರೂ ನಮ್ಮ ಮುಷ್ಕರ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಮುಂದುವರಿಯಲಿದೆ. ನಾವು ಠಾಣೆಯಲ್ಲೋ ಅಥವಾ ಜೈಲಿಗೆ ಹಾಕಿದರೆ ಅಲ್ಲಿಯೇ ಉಪವಾಸ ಸತ್ಯಾಗ್ರಹ ಕುಳಿತುಕೊಳ್ಳುತ್ತೇವೆ. ನಮ್ಮ ಪ್ರಾಣ ಹೋದರು ಸರಿಯೇ ನಮಗೆ ನ್ಯಾಯ ಸಿಗುವವರೆಗೂ ಮುಷ್ಕರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಕೂಟದ ಅಧ್ಯಕ್ಷ ಚಂದ್ರು ತಿಳಿಸಿದ್ದಾರೆ.
ಪೊಲೀಸರು ಬಂಧಿಸಲು ಬಂದವೇಳೆ ಮಾತನಾಡಿದ ಅವರು, ನಮ್ಮ ನೌಕರರು ಯಾವುದಕ್ಕೂ ಹೆದರುವ ಅಗತ್ಯವಿಲ್ಲ. ಸರ್ಕಾರ ನಮ್ಮ ಮೇಲೆ ಏನೇ ಪ್ರಯೋಗ ಮಾಡಿದರೂ ನಾವು
ನೇ ವೇತನ ಆಯೋಗ ಜಾರಿ ಮಾಡದ ಹೊರತು ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಹೀಗಾಗಿ ನೌಕರರು ಭಯಪಡುವ ಅಗತ್ಯವಿಲ್ಲ. ನಮ್ಮ ಹೋರಾಟ ನಿರಂತರವಾಗಿ ನಡೆಯಲಿದೆ ಎಂದು ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಇನ್ನು ಇಂದು ಬೆಳಗ್ಗೆ ಉಪವಾಸ ಸತ್ಯಾಗ್ರಹ ಹಿನ್ನೆಲೆ ಕೋಡಿಹಳ್ಳಿ ಚಂದ್ರಶೇಖರ್ ಅವರ ಕಚೇರಿ ಆವರಣದಲ್ಲಿ ಸಾರಿಗೆ ನೌಕರರ ಕೂಟದ ಅಧ್ಯಕ್ಷ ಚಂದ್ರು , ಪದಾಧಿಕಾರಿಗಳಾದ ಆನಂದ್, ತಿಪ್ಪೇಸ್ವಾಮಿ ಸತೀಶ್, ಕನ್ನಡ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಲಿಂಗೆಗೌಡ, ಯುವ ಘಟಕದ ರಾಜ್ಯಾಧ್ಯಕ್ಷ ರಂಗೇಶ್ ಗೌಡ್ರು ಸೇರಿದಂತೆ ಹಲವಾರು ಕಾರ್ಮಿಕರು ಮತ್ತು ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ತಮ್ಮ ವಾಹನದಲ್ಲೇ ಕರೆದುಕೊಂಡು ಹೋಗಿದ್ದಾರೆ.
ಈ ನಡುವೆ ಮುಷ್ಕರ ವಾಪಸ್ ತೆಗೆದುಕೊಂಡಿದ್ದೇವೆ ಎಂಬುದು ಸುಳ್ಳು ವದಂತಿ ದಯವಿಟ್ಟು ಶಾಂತಿಯುತ ಸತ್ಯಾಗ್ರಹ ಮುಂದುವರಿಸಿ ಕೋಡಿಹಳ್ಳಿ ಚಂದ್ರಶೇಖರ್ ಅವರು ಅಂತಿಮ ತೀರ್ಮಾನ ಹೇಳುವವರೆಗೂ ದಯಮಾಡಿ ಸತ್ಯಾಗ್ರಹ ಮುಂದುವರಿಯಲಿ ಎಂದು ಬಂಧಿತರು ನೌಕರರಿಗೆ ಕರೆ ನೀಡಿದ್ದಾರೆ.
ಹೀಗಾಗಿ ಪ್ರತಿಭಟನೆ ವೇಳೆ ಜಮಾಯಿಸಿದ್ದ ನೌಕರರು ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಸಾರಿಗೆ ಸಚಿವ ಲಕ್ಷ್ಮಣ ಸವದಿ ವಿರುದ್ಧ ಘೋಷಣೆಗಳನ್ನು ಕೂಗಿ, ತಮ್ಮ ಪರ ಧ್ವನಿ ಎತ್ತಿದವರ ಧ್ವನಿ ಕುಗ್ಗಿಸುವ ಪ್ರಯತ್ನ ಮಾಡುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.