ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಸಾರಿಗೆ ನೌಕರರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರವನ್ನು ಸ್ಥಗಿತಗೊಳಿಸುವ ಬಗ್ಗೆ ಹೈಕೋರ್ಟ್ ಮಂಗಳವಾರ ಸೂಚನೆ ನೀಡಿದೆ ಎನ್ನಲಾದ ಪ್ರತಿ ಇನ್ನೂ ನಮ್ಮ ಕೈ ಸೇರಿಲ್ಲ. ಹೀಗಾಗಿ ಅದರಲ್ಲಿ ಏನಿದೆ ಎಂಬ ಬಗ್ಗೆ ನಮಗೆ ಸಂಪೂರ್ಣ ಮಾಹಿತಿ ಇಲ್ಲದಿರುವುದರಿಂದ ನಮ್ಮ ಮುಷ್ಕರ ನಾಳೆಯೂ ಮುಂದುವರಿಯಲಿದೆ ಎಂದು ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.
ಇಂದು ಸಂಜೆ ಗಾಂಧಿನಗರದ ತಮ್ಮ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೈಕೋರ್ಟ್ ನೀಡಿರುವ ಸೂಚನೆ ಹಿನ್ನೆಲೆಯಲ್ಲಿ ಕಳೆದ 14 ದಿನಗಳಿಂದ ಸಾರಿಗೆ ನೌಕರರು ಮಾಡುತ್ತಿರುವ ಮುಷ್ಕರ ಇಂದಿಗೆ ಕೊನೆಯಾಗುವ ಸಾಧ್ಯತೆ ಇದೆ ಎಂದು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದೆ. ಆದರೆ, ನ್ಯಾಯಾಲಯ ಏನು ಸೂಚನೆ ನೀಡಿದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ನಮಗೆ ಇನ್ನೂ ಸಿಕ್ಕಲ್ಲ.
ಇನ್ನು ಮುಷ್ಕರ ನಿರತ ನಮ್ಮ ಸಾವಿರಾರು ನೌಕರರನ್ನು ಈಗಾಗಲೇ ವಜಾ, ಅಮಾನತು ಎಂದು ಮಾಡಲಾಗಿದೆ. ಈ ಬಗ್ಗೆ ನ್ಯಾಯಾಲಯ ಯಾವ ಕ್ರಮ ಜರುಗಿಸಲು ತಿಳಿಸಿದೆ ಎಂಬ ಬಗ್ಗೆಯೇ ಸ್ಪಷ್ಟತೆ ಇಲ್ಲದಿರುವುದರಿಂದ ನಮ್ಮ ನೌಕರರ ಭವಿಷ್ಯವನ್ನು ನೋಡಿಕೊಳ್ಳಬೇಕಿರುವುದರಿಂದ ನ್ಯಾಯಾಲಯದ ಸೂಚನ ಪ್ರತಿ ನಮ್ಮ ಕೈ ಸೇರಿದ ಮೇಲೆ ನಾವು ಮುಂದೆ ಏನು ಮಾಡಬಹುದು ಎಂದು ನಿರ್ಧರಿಸಲಿದ್ದೇವೆ.
ನ್ಯಾಯಾಲಯ ಒಂದು ವೇಳೆ ಸಮಂಜಸವಾದ ಸೂಚನೆ ನೀಡಿದ್ದರೆ ಅದಕ್ಕೆ ನಾವು ತಲೆಬಾಗುತ್ತೇವೆ. ಇಲ್ಲದಿದ್ದರೆ ಮುಂದಿನ ಕಾನೂನು ಹೋರಾಟ ಮಾಡುವ ಬಗ್ಗೆ ನಮ್ಮ ತಜ್ಞ ವಕೀಲರ ಜತೆ ಚರ್ಚಿಸಿ ಮುಂಧಿನ ನಿರ್ಧಾರ ಪ್ರಕಟಿಸುತ್ತೇವೆ ಅಲ್ಲಿಯವರೆಗೂ ಈಗ ನಡೆಯುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ಮುಂದುವರಿಯಲಿದೆ ಎಂದು ತಿಳಿಸಿದರು.