ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಆರನೇ ವೇತನ ಆಯೋಗ ಜಾರಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇದೇ ತಿಂಗಳ 7ರಂದು ಸಾರಿಗೆ ನೌಕರರು ಮತ್ತೊಮ್ಮೆ ಅನಿರ್ದಿಷ್ಟಾವಧಿ ಧರಣಿಗೆ ಕರೆ ನೀಡಿದ್ದಾರೆ.
ಈ ಸಂಬಂಧ ಸೋಮವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಾರಿಗೆ ಸಚಿವ ಲಕ್ಷ್ಮಣ ಸವದಿ, ಕಳೆದ ಡಿಸೆಂಬರ್ ತಿಂಗಳಿನಲ್ಲಿ ಸಾರಿಗೆ ಸಿಬ್ಬಂದಿ ಮುಷ್ಕರ ಮಾಡಿದ್ದರು. ಇದರಿಂದ ಸಾರ್ವಜನಿಕರು ಸಾಕಷ್ಟು ಸಮಸ್ಯೆ ಅನುಭವಿಸಿದ್ದರು. ಒಕ್ಕೂಟದ ಮುಖಂಡರು, ಪದಾಧಿಕಾರಿಗಳ ಜೊತೆ ಚರ್ಚೆ ಮಾಡಿದ್ದೆವು. 9 ಬೇಡಿಕೆಗಳನ್ನು ನಮ್ಮ ಮುಂದಿಟ್ಟಿದ್ದರು. ಈ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಲಿಖಿತವಾಗಿ ಭರವಸೆ ಕೊಟ್ಟಿದ್ದೇವೆ. 9 ಬೇಡಿಕೆಯಲ್ಲಿ 8 ಬೇಡಿಕೆ ಈಡೇರಿಸಿದ್ದೇವೆ ಎಂದು ಹೇಳಿದರು.
6ನೇ ವೇತನ ಆಯೋಗದ ಸಮನಾಂತರ ಸಂಬಳದ ಬೇಡಿಕೆ ಇದೆ. ನಾವು ಸಿಬ್ಬಂದಿಗೆ ಹೆಚ್ಚುವರಿ ಸವಲತ್ತುಗಳನ್ನು ಕೊಡುತ್ತಿದ್ದೇವೆ. ಓಟಿ ಕೊಡುತ್ತಿದ್ದೇವೆ, ಕಂಡಕ್ಟರ್ಗೆ ಶೇ. 2 ಇನ್ಸೆಂಟಿವ್ ಇದೆ. ಸಮನಾಂತರ ಸಂಬಳ ನೀಡುವುದಾದರೆ ಹೆಚ್ಚುವರಿ ಸವಲತ್ತುಗಳ ಬಗ್ಗೆಯೂ ಚರ್ಚೆಯಾಗಬೇಕು. ಹೀಗಾಗಿ ಸಂಬಳ ನೀಡುವ ಬಗ್ಗೆ ತೀರ್ಮಾನ ಮಾಡುತ್ತೇವೆ. ಆರನೇ ವೇತನ ಆಯೋಗಕ್ಕೆ ಸಮಾನ ಸಂಬಳ ನೀಡಿದರೆ, ಹೆಚ್ಚುವರಿ ಸವಲತ್ತುಗಳನ್ನು ನಿಲ್ಲಿಸಬೇಕಾಗುತ್ತದೆ. ಸರ್ಕಾರ ಒಂದು ಕೈಯಿಂದ ಕೊಟ್ಟು, ಮತ್ತೊಂದು ಕೈಯಿಂದ ಕಿತ್ತುಕೊಂಡಂತಾಗುತ್ತದೆ ಎಂದು ಹೇಳಿದರು.
ಇನ್ನು ಒಂದೇ ವಯಸ್ಸು, ಒಂದು ಸಂಬಳ ಇದ್ದರೆ ಯಾವುದೇ ನಿರ್ಬಂಧ ಇಲ್ಲದೇ ವರ್ಗಾವಣೆ ಅವಕಾಶ ನೀಡಲಾಗಿದೆ. ತರಬೇತಿ ಅವಧಿಯನ್ನು ಒಂದು ವರ್ಷಕ್ಕೆ ಕಡಿತಗೊಳಿಸಿದ್ದೇವೆ. ಹಿರಿಯ ಅಧಿಕಾರಿಗಳ ಕಿರುಕುಳ ತಪ್ಪಿಸಲು ಕ್ರಮ. NINC ಹಣವೂ ನೀಡದೇ, ಟಿಕೆಟ್ ನೀಡದೆ ಇದ್ದರೂ ಸಿಬ್ಬಂದಿ ಮೇಲೆ ಕ್ರಮ ತೆಗೆದುಕೊಳ್ಳುವುದನ್ನು ನಿಲ್ಲಿಸಿದ್ದೇವೆ ಎಂದು ತಿಳಿಸಿದರು.
ಅಂತರ್ ನಿಗಮ ವರ್ಗಾವಣೆಗೆ ಸರ್ಕಾರದ ಒಪ್ಪಿಗೆ ನೀಡಿದೆ. ಬಿಎಂಟಿಸಿಯಲ್ಲಿ ಶೇ. 60 ಸಿಬ್ಬಂದಿ ಉತ್ತರ ಕರ್ನಾಟಕದವರು. ಪ್ರತಿವರ್ಷ ಶೇ. 2 ಸಿಬ್ಬಂದಿ ವರ್ಗಾವಣೆ ಮಾಡಲು ಒಪ್ಪಿಗೆ ನೀಡಲಾಗಿದೆ. ಸಾರಿಗೆ ನೌಕರರಿಗೆ ಆರೋಗ್ಯ ಭಾಗ್ಯ, ಕೋವಿಡ್ನಿಂದ ಮೃತಪಟ್ಟರೆ 30 ಲಕ್ಷ ರೂಪಾಯಿ ಪರಿಹಾರ. ನಿಗಮದಲ್ಲಿ ಎಚ್.ಆರ್.ಎಂ.ಎಸ್ ಅಳವಡಿಸಲು ಆದೇಶ. ಕೋವಿಡ್ ಕಾರಣ ಸ್ಥಗಿತವಾಗಿದ್ದ ಬಾಟಾ ಕೊಡಲು ಒಪ್ಪಿಗೆ ನೀಡಲಾಗಿದೆ ಎಂದು ಲಕ್ಷ್ಮಣ ಸವದಿ ತಿಳಿಸಿದರು..
6ನೇ ವೇತನ ಆಯೋಗದಂತೆ ಸಂಬಳ ನೀಡಲು ಬೇಡಿಕೆ ಇಟ್ಟಿದ್ದರು. ಕೋವಿಡ್ ಬಂದು ಒಂದು ವರ್ಷ ಆಯ್ತು. ಕೋವಿಡ್ಗೆ ಮೊದಲು ಪ್ರತಿನಿತ್ಯ 1 ಕೋಟಿ ಜನರು ಸಂಚರಿಸುತ್ತಿದ್ದರು. ಆದರೆ ಕೊರೊನಾ ಕಾರಣ ಈಗ 60 ಲಕ್ಷ ಜನ ಮಾತ್ರ ಸಂಚಾರ ಮಾಡುತ್ತಿದ್ದಾರೆ. ಬರುವ ಆದಾಯ ಇಂಧನ ಹಾಗೂ ವೇತನ 19.6 ಸಾವಿರ ಕೋಟಿ ಕೊರತೆಯಾಗುತ್ತಿದೆ. ಆದರೂ ಈವರೆಗೆ ಸಿಬ್ಬಂದಿಗೆ ಸಂಬಳ ಕಡಿತ ಮಾಡಿಲ್ಲ ಇದನ್ನು ನಮ್ಮ ಸಿಬ್ಬಂದಿ ಅರ್ಥ ಮಾಡಿಕೊಳ್ಳಬೇಕು ಎಂದರು.
ಉಪ ಚುನಾವಣೆಗಳು ನಡೆಯುತ್ತಿವೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ನೀತಿ ಸಂಹಿತೆ ಅಡ್ಡಿ ಬಂದ ಕಾರಣ, ಯಾವುದೇ ಯೋಜನೆ ಘೋಷಿಸುವಂತಿಲ್ಲ. ಅದಕ್ಕೆ ಕೇಂದ್ರ ಚುನಾವಣಾ ಆಯೋಗದ ಅನುಮತಿ ಪಡೆಯುವುದು ಅನಿವಾರ್ಯ. ಚುನಾವಣಾ ಆಯೋಗ ಅನುಮತಿ ನೀಡಿದರೆ ಸಂಬಳ ಹೆಚ್ಚಳ ಮಾಡುತ್ತೇವೆ. ಈ ಬಗ್ಗೆ ಹಣಕಾಸು ಇಲಾಖೆ ಜೊತೆ ಮಾತನಾಡಿದ್ದೇವೆ. ಇಂತಹ ಕಠಿಣ ಸಂದರ್ಭದಲ್ಲಿ ಮುಷ್ಕರ ಮಾಡಬೇಡಿ ಎಂದು ಸಾರಿಗೆ ನೌಕರರು ಮತ್ತು ಮುಖಂಡರಿಗೆ ಮನವಿ ಮಾಡುತ್ತೇನೆ ಎಂದರು.
ನಾಲ್ಕು ನಿಗಮಗಳಿಂದ ಪ್ರತಿವರ್ಷ 3200 ಕೋಟಿ ನಷ್ಟವಾಗುತ್ತಿದೆ. ಸಿಬ್ಬಂದಿ ಸಂಬಳ ಹೆಚ್ಚಳ ಮಾಡಿದರೆ ಹಣಕಾಸಿನ ಹೊರೆಯಾಗಲಿದೆ. ಆದರೂ ಸಿಬ್ಬಂದಿ ಬೇಡಿಕೆ ಈಡೇರಿಸಲು ತೀರ್ಮಾನ ಮಾಡಲಾಗಿದೆ.
ಕೇಂದ್ರ ಚುನಾವಣಾ ಆಯೋಗ ಅನುಮತಿ ನೀಡದಿದ್ದರೆ, ಸಾರಿಗೆ ನೌಕರರು ಪ್ರತಿಭಟನೆ ಮಾಡಿದರೆ ಕಷ್ಟವಾಗುತ್ತದೆ. ಬಡವರಿಗೆ, ವಿದ್ಯಾರ್ಥಿಗಳಿಗೆ ಸಾಕಷ್ಟು ಅನಾನುಕೂಲವಾಗಲಿದೆ. ಕಳೆದ ಬಾರಿ ನಾಲ್ಕು ದಿನ ಮುಷ್ಕರ ನಡೆದಿದೆ. ನಾಲ್ಕು ದಿನದಲ್ಲೇ ಒಟ್ಟು 7 ಕೋಟಿ ರೂ. ನಷ್ಟವಾಗಿದೆ. ಕೋರ್ಟ್ ಕೂಡ ನಮಗೆ ನೋಟಿಸ್ ನೀಡಿದೆ. ಸರ್ಕಾರವೂ ನಿಮ್ಮ ಪರ ನಿಲ್ಲಲಿದೆ. ಆದರೆ ನೀವು ನಿಗಮಗಳಿಗೆ ಶಕ್ತಿ ನೀಡಬೇಕು. ಏಪ್ರಿಲ್ 7ರಂದು ನಡೆಸಲು ಹೊರಟಿರುವ ಮುಷ್ಕರ ಮುಂದೂಡಿ ಎಂದು ಸಾರಿಗೆ ನೌಕರರಿಗೆ ಸಚಿವ ಲಕ್ಷ್ಮಣ ಸವದಿ ಮನವಿ ಮಾಡಿದರು.
ಸಾರಿಗೆ ನೌಕರರು ಮುಷ್ಕರ ಮಾಡಿದರೆ ಪರ್ಯಾಯವಾಗಿಯೂ ಸಿದ್ಧತೆ ಮಾಡಿಕೊಳ್ಳಲಾಗಿದೆ. ಖಾಸಗಿ ಬಸ್ ಸಂಚಾರದ ವ್ಯವಸ್ಥೆ ಮಾಡಿಕೊಳ್ಳಬೇಕಾಗುತ್ತದೆ. ಖಾಸಗಿ ಬಸ್ ಮಾಲೀಕರಿಗೆ ತೆರಿಗೆ ವಿನಾಯ್ತಿ ಬೇಡಿಕೆ ಇದೆ. ಅದನ್ನೂ ಪರಿಶೀಲನೆ ಮಾಡುತ್ತೇವೆ ಎಂದು ಹೇಳಿದರು.