ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಆನೇಕಲ್ ತಾಲೂಕಿನ ಜಿಗಣಿ ಬಿಎಂಟಿಸಿ ಘಟಕ (27)ರಲ್ಲಿ ಡಿಪೋದಿಂದ ಬಸ್‌ಗಳನ್ನು ಔಟ್ ಮಾಡಲು ಬಂದ ಚಾಲಕ ಮತ್ತು ನಿರ್ವಾಹಕರಿಗೆ ಮಹಿಳೆಯರು ಬಳೆ ಮತ್ತು ಸೀರೆಗಳನ್ನು ವಿತರಣೆ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ.
6ನೇ ವೇತನ ಆಯೋಗ ಜಾರಿ ಮಾಡಲು ಆಗ್ರಹಿಸಿ ಕಳೆದ 8 ದಿನಗಳಿಂದ ಮುಷ್ಕರ ಮಾಡುತ್ತಿರುವ ಸಾರಿಗೆ ನೌಕರರು. ಇನ್ನೊಂದೆಡೆ ಮುಷ್ಕರಕ್ಕೆ ಬೆಂಬಲವಿದೆ ಎಂದು ಕೆಲ ನೌಕರರು ಬಸ್ ಓಡಿಸುತ್ತಿರುವುದನ್ನು ಖಂಡಿಸಿ ಇಂದು ಜಿಗಣಿ ಡಿಪೋ ಬಳಿ ನೌಕರರ ಕುಟುಂಬದ ಮಹಿಳೆಯರು ಜಮಾಯಿಸಿದ್ದು, ಬಸ್ ಓಡಿಸಲು ಬರುತ್ತಿರುವ ನೌಕರರಿಗೆ ಬಳೆ ಮತ್ತು ಸೀರೆಗಳನ್ನು ನೀಡುತ್ತಿದ್ದಾರೆ.
ನೌಕರರ ಕುಟುಂಬದವರ ಈ ವಿನೂತನ ಚಳವಳಿಗೆ ಬೆದರಿ ಡಿಪೋದಿಂದ ಬಸ್‌ಗಳನ್ನು ಹೊರತೆಗೆಯದೆ ನೌಕರರೂ ಪ್ರತಿಭಟನೆಯಲ್ಲಿ ಭಾಗವಹಿಸುವ ಮೂಲಕ ತಮ್ಮ ತಪ್ಪನ್ನು ಒಪ್ಪಿಕೊಂಡು ಮುಷ್ಕರಕ್ಕೆ ಬೆಂಬಲ ನೀಡುತ್ತಿದ್ದಾರೆ.
ಇನ್ನೊಂದೆಡೆ ಸಾರಿಗೆ ಬಸ್ ಡಿಪೋಗಳಿಂದ ಕರೆ ಮಾಡುತ್ತಿರುವ ಕೆಲ ಅಧಿಕಾರಿಗಳು 500 ರೂ. ನಾವೇ ಕೊಡುತ್ತೇವೆ ಡಿಪೋನಿಂದ ಬಸ್ ಔಟ್ ಮಾಡಿ ಒಂದೆರಡು ಟಿಕೆಟ್‌ಗಳನ್ನು ಹರಿದು ಬಳಿಕ ಆ 500 ರೂ.ಗಳನ್ನು ಕಟ್ಟಿ ಡ್ಯೂಟಿ ಮಾಡಿದ್ದೇವೆ ಎಂದು ಹೋಗಿ, ನಿಮಗೆ ವೇತನವೂ ಬರುತ್ತದೆ ಎಂಬ ಆಮಿಷವನ್ನು ಒಡ್ಡುತ್ತಿರುವಂತಹ ಆಡಿಯೋ ಸಾಮಾಜಿಕ ಜಾಲತಾಣಳಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಸಾರಿಗೆ ಅಧಿಕಾರಿಗಳು ಮತ್ತು ಸರ್ಕಾರದ ಇಂಥ ನೀಚ ನಡೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಸಂಸ್ಥೆ ಲಾಸ್‌ನಲ್ಲಿ ಇದೆ ಎಂದು ಹೇಳುವ ನೀವೆ 500 ರೂ. ಕೊಟ್ಟು ಬಸ್‌ಗಳನ್ನು ಓಡಿಸುವ ಪ್ರಮೆಯವೇನು ಎಂದು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
ಒಟ್ಟಾರೆ ನೌಕರರ ನ್ಯಾಯಯುತ ಬೇಡಿಕೆ ಈಡೇರಿಸದೆ ಅನ್ಯ ಮಾರ್ಗ ಅನುಸರಿಸುತ್ತಿರುವ ಸರ್ಕಾರಕ್ಕೆ ಬಿಸಿ ಮುಟ್ಟಿಸಲೇ ಬೇಕು ಎಂಬ ಮಾತು ಸಾಮಾನ್ಯ ಜನರಿಂದಲೇ ಕೇಳಿ ಬರುತ್ತಿದ್ದು, ಸರ್ಕಾರದ ನಡೆಯಿಂದ ಇಡೀ ರಾಜ್ಯವೇ ತಲೆ ಬಾಗುವಂತಾಗುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.